Advertisement
ಲೋಕಸಭೆಗೆ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 14 (ಒಂದು ಉಪಚುನಾವಣೆ ಸೇರಿ) ಚುನಾವಣೆಗಳಲ್ಲಿ ಭರ್ಜರಿ ಜಯಗಳಿಸಿದ್ದ ಕಾಂಗ್ರೆಸ್ ಪಕ್ಷ ನಂತರ 14 ವರ್ಷಗಳ ಕಾಲ ವನವಾಸ ಅನುಭವಿಸಿದ್ದು, ಬಿಜೆಪಿ ಜಯಗಳಿಸಿತ್ತು. 2004, 2009, 2014ರಲ್ಲಿ ಸತತವಾಗಿ ಜಿಲ್ಲೆಯಲ್ಲಿ ಜಯಗಳಿಸಿ ಬಿಜೆಪಿ ಬಿಜೆಪಿ ಭದ್ರಕೋಟೆಯಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ರಾಮುಲು ರಾಜೀನಾಮೆಯಿಂದಾಗಿ ಕಳೆದ 2018ರಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿತು. ಈ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವನ್ನು ಪುನಃ ಸ್ಥಾಪಿಸಿಕೊಂಡಿತು ಎಂದೇ ವಿಶ್ಲೇಷಿಲಾಯಿತಾದರೂ, ಈ ದಾಖಲೆ ಕಾಂಗ್ರೆಸ್ ಪಾಲಿಗೆ ಹೆಚ್ಚು ಕಾಲ ಉಳಿಯದೇ, ಇದೀಗ 7 ತಿಂಗಳ ಅವಯಲ್ಲೇ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪುನಃ ಜಯಗಳಿಸುವ ಮೂಲಕ ಜಿಲ್ಲೆಯಲ್ಲಿನ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಕ್ಷೀಣಿಸುವಂತೆ ಮಾಡಿದ್ದು, ಪಕ್ಷದ ಮುಖಂಡರಲ್ಲಿ ಅಂತರಿಕವಾಗಿ ತಳಮಳ ಶುರುವಾಗಿದೆ.
ಕಳೆದ 2013 ವಿಧಾನಸಭೆ ಚುನಾವಣೆಯಿಂದ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಕಾಂಗ್ರೆಸ್‌ಗೆ 2018ರ ವಿಧಾನಸಭಾ ಚುನಾವಣೆಯಲ್ಲೂ ಜಿಲ್ಲೆಯಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಕ್ಷೇತ್ರದ ಮೇಲಿನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿತ್ತು. ಆದರೆ, ಶಾಸಕರು, ಮುಖಂಡರಲ್ಲಿನ ಆಂತರಿಕ ಭಿನ್ನಮತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಪ್ರಮುಖ ಕಾರಣಗಳಾಗಿವೆ. ಈ ಎಲ್ಲವನ್ನು ಸರಿಪಡಿಸಿಕೊಂಡು ಪಕ್ಷವನ್ನು ಮುನ್ನಡೆಸುವ ನಾಯಕತ್ವದ ಕೊರತೆ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದ್ದು, ಇದು ಹೀಗೆ ಮುಂದುವರಿದರೆ ಶೀಘ್ರದಲ್ಲೇ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ.