Advertisement

ಗಣಿನಾಡಲ್ಲಿ ಧೂಳು,ಕೇಳ್ಳೋರಿಲ್ಲ ಗೋಳು 

12:30 AM Mar 12, 2019 | |

ಬಳ್ಳಾರಿ: ಲೋಕಸಭಾ ಉಪಚುನಾವಣೆಯ ಗುಂಗಿನಿಂದ ಹೊರ ಬರುವ ಮುನ್ನವೇ ಮತ್ತೂಂದು ಮತಸಮರಕ್ಕೆ ಗಣಿನಾಡು ಸಜ್ಜಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗುವ ಬಿಸಿಲನಾಡಲ್ಲಿ ಲೋಕಸಭಾ ಚುನಾವಣೆಯ ಕಾವು ಏರತೊಡಗಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

Advertisement

ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ಜಿಲ್ಲೆ, ರಾಜಕೀಯದ ಹೈವೋಲ್ಟೆಜ್‌ ಕ್ಷೇತ್ರ. ಗಣಿಧಣಿಗಳಾದ ರೆಡ್ಡಿ ಬ್ರದರ್ಸ್‌, ಕಾಂಗ್ರೆಸ್‌ನ ಹಳೆ ಹುಲಿಗಳಿರುವ ಕ್ಷೇತ್ರ. ಬಿಜೆಪಿ-ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣ. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು, ಆಡಳಿತ, ಅಭಿವೃದ್ಧಿ ಕಾರ್ಯಗಳನ್ನೇ ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಬಳಸಲು ಮುಂದಾಗಿದ್ದರೆ, ಕಾಂಗ್ರೆಸ್‌ ಕೂಡ ಮೋದಿ ಆಡಳಿತದ ವೈಫಲ್ಯದ ಜಪ ಮಾಡುತ್ತಿದೆ.

ತುಂಗಭದ್ರಾ ಜಲಾಶಯ, ಹೇರಳವಾದ ನೈಸರ್ಗಿಕ ಸಂಪನ್ಮೂಲ ಹೊಂದಿರುವ ಜಿಲ್ಲೆ, ಬಳ್ಳಾರಿ. ಇಡೀ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಇವು ಸಹ ಚುನಾವಣಾ ವಿಷಯಗಳಾಗಲಿವೆ. ಅಂತಾರಾಜ್ಯಗಳಿಗೆ ನೀರು ಒದಗಿಸುವ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಗೊಂಡಿರುವ ಹೂಳಿನ ಸಮಸ್ಯೆ ದಶಕಗಳಿಂದ ಕೇಳಿ ಬರುತ್ತಿದ್ದರೂ, ಇದಕ್ಕೆ ಪರಿಹಾರ ಸಿಕ್ಕಿಲ್ಲ. ಜಿಲ್ಲೆಯಾದ್ಯಂತ ಶಂಕುಸ್ಥಾಪನೆಗಷ್ಟೇ ಸೀಮಿತವಾಗಿರುವ ಏತ ನೀರಾವರಿ ಯೋಜನೆ ಸಹ ದಶಕಗಳಿಂದ ನೆನೆಗುದಿಗೆ ಬಿದ್ದಿದೆ. ಕಳೆದ ಕೆಲ ವರ್ಷಗಳಿಂದ ಎರಡನೇ ಬೆಳೆ ಬೆಳೆಯಲು ಜಲಾಶಯ ಆಶ್ರಿತ ರೈತರು ಸಂಕಷ್ಟ ಎದುರಿಸುವಂತಾಗಿದ್ದರೂ, ಪರ್ಯಾಯ ವ್ಯವಸ್ಥೆ ಸೇರಿ ಯಾವುದೇ ಕ್ರಮ ಆಗಿಲ್ಲ.

ಜಿಲ್ಲೆಯಲ್ಲಿ ಅತ್ಯಂತ ಹೇರಳವಾಗಿ ದೊರೆಯುವ ಕಬ್ಬಿಣದ ಅದಿರಿನಿಂದ ಸಾಕಷ್ಟು ಕೈಗಾರಿಕೆಗಳು ತಲೆಯೆತ್ತಿವೆ. ಆದರೆ, ಗಣಿಗಾರಿಕೆಯಲ್ಲಿ ಅಕ್ರಮ ನಡೆದು ಗಣಿಗಾರಿಕೆಯೇ ನಿಂತ ಬಳಿಕ ಸಾವಿರಾರು ಕಾರ್ಮಿಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ನಿರ್ಲಕ್ಷé ವಹಿಸಿದ್ದಾರೆ ಎಂಬ ಆರೋಪಗಳು ಇವೆ. ಆದರೆ, ಈ ಎಲ್ಲ ವಿಷಯಗಳು ಜಿಲ್ಲೆಯ ರಾಜಕೀಯ ಮುಖಂಡರ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ.

ಅಭ್ಯರ್ಥಿ ಸ್ಥಳೀಯರೋ, ಹೊರಗಿನವರೋ:
ಕಳೆದ ಉಪಚುನಾವಣೆಯಲ್ಲಿ ಜಯಗಳಿಸಿದ್ದ ಸಂಸದ ವಿ.ಎಸ್‌.ಉಗ್ರಪ್ಪನವರೇ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಎನ್ನಲಾಗುತ್ತಿದೆ. ಇತ್ತೀಚೆಗೆ ಮಾತನಾಡಿದ್ದ ಸಂಸದ ಉಗ್ರಪ್ಪ, ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಕಾರ್ಯಕರ್ತರು 5 ತಿಂಗಳಿಗಲ್ಲ, ಐದೂವರೆ ವರ್ಷಕ್ಕೆ ಎಂಬಂತೆ ಪ್ರಚಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆಯಲ್ಲೂ ಕಣಕ್ಕಿಳಿಯಲಿದ್ದೇನೆಎಂದು ಹೇಳಿದ್ದರು. ಹೀಗಾಗಿ, ಪಕ್ಷ ಇವರನ್ನೇ ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿದೆಯೋ ಅಥವಾ ಸ್ಥಳೀಯರನ್ನು ಕಣಕ್ಕಿಳಿಸಲಿದೆಯೋ ಎಂಬುದು ಬಹಿರಂಗವಾಗಬೇಕಿದೆ. ಇನ್ನು, ಬಿಜೆಪಿಯಲ್ಲೂ ಸಹ ಯಾರು ಅಭ್ಯರ್ಥಿ ಎಂಬುದು ಘೋಷಣೆಯಾಗಿಲ್ಲ. ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಸಾಕಷ್ಟಿದ್ದು, ಯಾರು ಕಣಕ್ಕಿಳಿಯಬಹುದು ಎಂಬ ಕುತೂಹಲ ಮೂಡಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾಗಿರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ಪ್ಲಸ್‌ ಆಗಲಿದೆ. ಬಿಜೆಪಿ, ಎರಡೂ ಪಕ್ಷಗಳನ್ನು ಎದುರಿಸಬೇಕಾಗಿದೆ.

Advertisement

ಕಾಂಗ್ರೆಸ್‌ ಚುನಾವಣಾ ಅಸ್ತ್ರ:
ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಈಗಿನ ಮೈತ್ರಿ ಸರ್ಕಾರದಲ್ಲಿ ಕೈಗೊಂಡ ಕೆಲಸಗಳು ಹಾಗೂ ಕಳೆದ ಉಪಚುನಾವಣೆ ನಂತರ ಸಂಸದರ ಅನುದಾನದಲ್ಲಿ ಕೈಗೊಂಡ ಕೆಲಸಗಳು ಇವನ್ನೆಲ್ಲ ಕಾಂಗ್ರೆಸ್‌, ಮತದಾರರ ಮುಂದಿಡುತ್ತಿದೆ. ಇದರ ಜತೆಯಲ್ಲಿ, ಎನ್‌ಡಿಎ ಆಡಳಿತದ ವೈಫಲ್ಯವನ್ನೇ ಚುನಾವಣಾ ಅಸ್ತ್ರವನ್ನಾಗಿ ಪ್ರಯೋಗಿಸಲು ಮುಂದಾಗಿದೆ. 2014ರ ಚುನಾವಣೆ ಸಮಯದಲ್ಲಿ ಮೋದಿಯವರು ನೀಡಿದ್ದ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ವಿದೇಶದಿಂದ ಕಪ್ಪು ಹಣ ತರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ. ಸಾಮಾನ್ಯ ಜನರ ಜನ್‌ಧನ್‌ ಖಾತೆಗೆ 15 ಲಕ್ಷ ರೂ.ಜಮಾ ಆಗಿಲ್ಲ, ಹಂಪಿ ಅಭಿವೃದ್ಧಿಯಾಗಿಲ್ಲ ಎಂಬ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್‌ ನಾಯಕರು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಬಿಜೆಪಿಯದು ಮೋದಿ ಅಭಿವೃದ್ಧಿ ಜಪ:
ಬಿಜೆಪಿಯವರು, ಮೋದಿಯವರು ಈವರೆಗೂ ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಮನೆ, ಮನೆಗೆ ಉಚಿತವಾಗಿ ಅನಿಲ ಸೌಲಭ್ಯ ಕಲ್ಪಿಸಿದ ಉಜ್ವಲ ಯೋಜನೆ, ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ.ಜಮಾಗೊಳ್ಳುವ ಕಿಸಾನ್‌ ಸಮ್ಮಾನ್‌ ಯೋಜನೆ, ಬೆಳೆ ನಷ್ಟಕ್ಕೆ ಫಸಲ್‌ ಬಿಮಾ ಯೋಜನೆ, ಉದ್ಯಮ ನಡೆಸಲು ಮುದ್ರಾ ಯೋಜನೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯುತ್ತಿದ್ದಾರೆ. ಮತದಾರರಿಗೆ ಮೋದಿಯ ಅಭಿವೃದ್ಧಿ ಬಗೆಗಿನ ಬದ್ಧತೆ ಬಗ್ಗೆ ಮನವರಿಕೆ ಮಾಡಿಕೊಡುವುದರ ಜತೆಗೆ ಮತ್ತೂಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಅನಿವಾರ್ಯ ಎಂದು ಪ್ರಚಾರದಲ್ಲಿ ತೊಡಗಿದ್ದಾರೆ.

ಸೋನಿಯಾ-ಸುಷ್ಮಾ ಸ್ಪರ್ಧೆಗೆ ಸಾಕ್ಷಿಯಾಗಿದ್ದ ಕ್ಷೇತ್ರ:
ಬಳ್ಳಾರಿ ಜಿಲ್ಲೆ ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಆರಂಭದಿಂದ 1 ಉಪಚುನಾವಣೆ ಸೇರಿ ಒಟ್ಟು 14 ಚುನಾವಣೆಗಳಲ್ಲಿ ನಿರಂತರವಾಗಿ ಜಯಗಳಿಸಿದ್ದ ಕಾಂಗ್ರೆಸ್‌, 2004ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಪರಾಜಯ ಅನುಭವಿಸಿತು. 1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿಯ ಸುಷ್ಮಾ ಸ್ವರಾಜ್‌ ಸ್ಪರ್ಧಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಇದು ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ನೆಲೆಯೂರಲು ಕಾರಣವಾಯಿತು. ನಂತರ ನಡೆದ 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು, 2018ರ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಜಯಗಳಿಸುವ ಮೂಲಕ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಕಾಂಗ್ರೆಸ್‌ಗೆ ತರುವಲ್ಲಿ ಯಶಸ್ವಿಯಾದರು. 

– ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next