Advertisement

ಪುನಃ ಹೊರಗಿನವರಿಗೆ ಟಿಕೆಟ್‌ ನೀಡಿದ ಕಾಂಗ್ರೆಸ್‌ !

06:20 AM Oct 16, 2018 | Team Udayavani |

ಬಳ್ಳಾರಿ: ಗಣಿ ನಾಡು ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ನಡೆದ ಕಳೆದ ಎರಡು ಚುನಾವಣೆಗಳಲ್ಲೂ ಹೊರಗಿನವರನ್ನೇ ಕಣಕ್ಕಿಳಿಸಿ ಪರಾಭವಗೊಂಡಿದ್ದ ಕಾಂಗ್ರೆಸ್‌, ಈ ಬಾರಿಯೂ ಹೊರಗಿನವರಿಗೆ ಮಣೆ ಹಾಕಿದೆ. ಆದರೆ ವಾಲ್ಮೀಕಿ ಸಮುದಾಯವರಿಗೆ ಟಿಕೆಟ್‌ ನೀಡಿ ಬಿಜೆಪಿ ಮುಖಂಡ ಶ್ರೀರಾಮುಲು ಅವರಿಗೆ ಟಾಂಗ್‌ ನೀಡಲು ಮುಂದಾಗಿದೆ.

Advertisement

ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಅವರಿಗೆ ಪಕ್ಷ ಟಿಕೆಟ್‌ ಘೋಷಿಸಿದೆ. ಎಸ್‌ಟಿ ಮೀಸಲು ಕ್ಷೇತ್ರಕ್ಕೆ 2009 ಮತ್ತು 2014ರಲ್ಲಿ ನಡೆದ ಎರಡು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ನೆರೆಯ ಚಿತ್ರದುರ್ಗ ಜಿಲ್ಲೆಯ ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎನ್‌.ವೈ. ಹನುಮಂತಪ್ಪರನ್ನು ಕರೆತಂದು ಕಣಕ್ಕಿಳಿಸಿತ್ತು. 2009ರಲ್ಲಿ ಅಂದಿನ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ವಿರುದ್ಧ ಕೇವಲ 2243 ಮತಗಳ ಅಂತರದಿಂದ ಪರಾಭವಗೊಂಡಿದ್ದ ಎನ್‌.ವೈ. ಹನುಮಂತಪ್ಪ, 2014ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಶ್ರೀರಾಮುಲು ವಿರುದ್ಧ 85, 144 ಮತಗಳ ಅಂತರದಿಂದ ಸೋತಿದ್ದರು. ಈ ಎರಡು ಚುನಾವಣೆಗಳಲ್ಲೂ  ಸ್ಥಳೀಯರು, ಹೊರಗಿನವರು ಎಂಬುದೇ ಬಿಜೆಪಿಯ ಪ್ರಮುಖ ಅಸ್ತ್ರವಾಗಿದ್ದು, ಗೆಲುವಿಗೂ ಕಾರಣವಾಗಿತ್ತು. ಈ ಬಾರಿಯೂ ಬಿಜೆಪಿ ಇದೇ ಅಸ್ತ್ರ  ಬಳಸುತ್ತಾ ಎಂಬ ಮಾತು ಕೇಳಿಬರುತ್ತಿದೆ.

ಇನ್ನು ಉಗ್ರಪ್ಪ ಅವರು, ಅಕ್ರಮ ಗಣಿಗಾರಿಕೆ ವಿರುದ್ಧ ಜಿಲ್ಲೆಯಲ್ಲಿ ಹೋರಾಟ ನಡೆಸಿದ್ದಾರೆ. ಅದರ ಬಗ್ಗೆ ಅಧ್ಯಯನ ನಡೆಸಿ, ಪುಸ್ತಕವನ್ನೂ ಬಿಡುಗಡೆಗೊಳಿಸಿದ್ದಾರೆ. ಎಲ್ಲದಕ್ಕೂ ಮುಖ್ಯವಾಗಿ ವಾಲ್ಮೀಕಿ ಸಮುದಾಯದ ಪ್ರಭಾವಿ ಮುಖಂಡರೂ ಹೌದು. ಇಷ್ಟೆಲ್ಲ ಇದ್ದರೂ, ಸ್ಥಳೀಯರಲ್ಲ ಎಂಬುದು ಅವರಿಗೆ ಮೈನಸ್‌ ಪಾಯಿಂಟ್‌. ಈ ಉಪಚುನಾವಣೆಯಲ್ಲಿ ಸ್ಪ ರ್ಧಿಸಲು ಟಿಕೆಟ್‌ಗಾಗಿ ಕಾಂಗ್ರೆಸ್‌ನ ಸ್ಥಳೀಯ ನಾಯಕರಲ್ಲೇ ಪೈಪೋಟಿ ಏರ್ಪಟ್ಟಿತ್ತು. ಅಂಥದ್ದರಲ್ಲಿ ಹೊರಗಿನವರನ್ನು ಕರೆತಂದು ಕಣಕ್ಕಿಳಿಸಿದರೆ ಪಕ್ಷದ ಸ್ಥಳೀಯ 6 ಶಾಸಕರು, ಮುಖಂಡರು ಎಷ್ಟರ ಮಟ್ಟಿಗೆ ಒಗ್ಗೂಡಿ ಗೆಲುವಿಗೆ ಶ್ರಮಿಸುತ್ತಾರೆ ಎಂಬುದು ಕಾದುನೋಡಬೇಕಾಗಿದೆ.

ಬಿಜೆಪಿ ಅಭ್ಯರ್ಥಿ  ಜೆ.ಶಾಂತಾ, ಮೂಲತಃ ಬಳ್ಳಾರಿಯವರು. ಅದಕ್ಕೂ ಮುಖ್ಯವಾಗಿ ವಾಲ್ಮೀಕಿ ಸಮುದಾಯದ ಪ್ರಭಾವಿ ಮುಖಂಡರಾದ ಶ್ರೀರಾಮುಲು ಅವರ ಸಹೋದರಿ. ಶ್ರೀರಾಮುಲು ತಮ್ಮ ಸಮುದಾಯದ ಜತೆಗೆ ಇತರೆ ಸಮುದಾಯಗಳ  ಬೆಂಬಲವನ್ನೂ ಪಡೆದು ಪ್ರತಿ ಚುನಾವಣೆಯಲ್ಲೂ ಅತ್ಯ ಧಿಕ ಮತಗಳಿಂದ ಜಯಗಳಿಸಿದ್ದಾರೆ. ಇದು ಶಾಂತಾ ಅವರಿಗೂ ಅನುಕೂಲವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಬಳ್ಳಾರಿ ಲೋಕಸಭೆ ಕ್ಷೇತ್ರ 1952ರಿಂದ 1999 ಮತ್ತು 2000 ಉಪಚುನಾವಣೆ ತನಕ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. 2004ರಲ್ಲಿ ಇದಕ್ಕೆ ಮೊದಲ ಬಾರಿಗೆ ಬ್ರೇಕ್‌ ಹಾಕಿದ ಬಿಜೆಪಿ ನಂತರ 2009, 2014 ಸೇರಿ ಒಟ್ಟು 3 ಚುನಾವಣೆಗಳಲ್ಲೂ ಗೆಲುವು ದಾಖಲಿಸಿತ್ತು. ಈ ಬಾರಿ ವಾಲ್ಮೀಕಿ ಸಮುದಾಯದ ಇಬ್ಬರು ಅಭ್ಯರ್ಥಿಗಳ ನಡುವಿನ  ಫೈಟ್‌ ಕುತೂಹಲ ಕೆರಳಿಸಿದೆ.

Advertisement

ಉತ್ತಮ ಸಂಸದೀಯ ಪಟು ಉಗ್ರಪ್ಪ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಬಿಜೆಪಿಯ ಶ್ರೀರಾಮುಲು ಅವರ ಗಣಿ ಹಗರಣ ವಿರುದ್ಧ ಉಗ್ರಪ್ಪ  ಹೋರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸುವ ಸಲುವಾಗಿ ಹೈಕಮಾಂಡ್‌ ಅವರನ್ನು ಆಯ್ಕೆ ಮಾಡಿದೆ.
– ಬಿ.ವಿ.ಶಿವಯೋಗಿ, ಅಧ್ಯಕ್ಷರು ಕಾಂಗ್ರೆಸ್‌ ಜಿಲ್ಲಾ ಗ್ರಾಮೀಣ, ಬಳ್ಳಾರಿ

– ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next