ಬಳ್ಳಾರಿ: ಎನ್‌ಪಿಎಸ್ ರದ್ದುಪಡಿಸಿ, ಒಪಿಎಸ್ ಜಾರಿ ಮಾಡಬೇಕು, 1995ರ ನಂತರ ಆರಂಭವಾದ ಅನುದಾನ ರಹಿತ ಕನ್ನಡ ಮಾಧ್ಯಮ, ಪ್ರಾದೇಶಿಕ ಭಾಷಾ ಮಾಧ್ಯಮ, ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಾಲಾ ಕಾಲೇಜುಗಳಿಗೆ ವೇತನಾನುದಾನ ವಿಸ್ತರಿಸಬೇಕು ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕುರುಗೋಡು ಗ್ರಾಮಾಂತರ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ 1995ರ ನಂತರ ಆರಂಭವಾದ ಅನುದಾನ ರಹಿತ ಖಾಸಗಿ ಶಾಲಾ ಕಾಲೇಜುಗಳು ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಬೋಧಿಸುತ್ತಿವೆ. ಈ ಶಾಲೆಗಳು ವೇತನಾನುದಾನವಿಲ್ಲದೆ ಹಾಗೂ ಸರ್ಕಾರದ ಯಾವುದೇ ಸೌಲಭ್ಯವಿಲ್ಲದೆ ಸುಮಾರು 15 ವರ್ಷಗಳು ಕಳೆಯುತ್ತ ಬಂದಿವೆ. ಈ ಹಿಂದೆ 2017ರಲ್ಲಿ 1987-92ರವರೆಗೆ ಹಾಗೂ 2018ರಲ್ಲಿ 1990ರಿಂದ 1995ರವರೆಗೆ ವೇತನಾನುದಾನಕ್ಕೆ ಒಳಪಟ್ಟಿವೆ. ಇದಾದ ನಂತರ 12 ವರ್ಷಗಳು ಕಳೆಯುತ್ತ ಬಂದಿವೆ. ಆದರೆ, ನಮ್ಮ ಶಾಲಾ, ಕಾಲೇಜುಗಳಿಗೆ ಅನುದಾನ ನೀಡಲು ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಲಕ್ಷಾಂತರ ಬಡಮಕ್ಕಳು ಈ ಶಾಲೆ, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರ ವೇತನಾನುದಾನ, ಇತರೆ ಸವಲತ್ತು ನೀಡದೇ ಇರುವುದರಿಂದ ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೌಲಭ್ಯ ವಂಚಿತರಾಗಿದ್ದಾರೆ. ಇನ್ನು ಈ ಶಾಲಾ, ಕಾಲೇಜುಗಳಲ್ಲಿ ಕೆಲಸಮಾಡುತ್ತಿರುವ ಶಿಕ್ಷಕರು ಸಹ ಇದೇ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಈ ಸಮಸ್ಯೆಯನ್ನು ಅರಿಯಬೇಕು. ತಕ್ಷಣ ಈ ಶಾಲಾ ಕಾಲೇಜುಗಳಲ್ಲಿ ಅನುದಾನ ನೀಡಲು ಸರ್ಕಾರ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದರ ಜೊತೆಗೆ ಹಾಲಿ ಇರುವ ಹೊಸ ಪಿಂಚಣಿ ಪದ್ಧತಿ ರದ್ದುಮಾಡಬೇಕು. ಹಳೆ ಪಿಂಚಣಿ ಪದ್ಧತಿ ಜಾರಿಮಾಡಬೇಕು. ಕಾಲ್ಪನಿಕ ವೇತನ ಬಡ್ತಿ ಜಾರಿಮಾಡಬೇಕು. ಜ್ಯೋತಿ ಸಂಜೀವಿನಿಯನ್ನು ಅನುದಾನಿತ ಶಾಲಾ, ಕಾಲೇಜು ಶಿಕ್ಷಕರಿಗೂ ವಿಸ್ತರಿಸಬೇಕು. ಖಾಲಿ ಹುದ್ದೆ ಭರ್ತಿಮಾಡಬೇಕು. ಈಗಿರುವ ಶಿಕ್ಷಕರ ಮತ್ತು ಮಕ್ಕಳ 1:50ರಿಂದ 1:40ಕ್ಕೆ ಇಳಿಸಬೇಕು. 1919-20ರ ಆರ್‌ಟಿಇ ಶುಲ್ಕ ಮರುಪಾವತಿ ಪ್ರಕ್ರಿಯೆ ಶೀಘ್ರದಲ್ಲಿಯೇ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ರವಾನಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ರವಿರೆಡ್ಡಿ, ಸೀಮಾ, ಕೆ.ಗಾಯತ್ರಿ, ಬಿ. ಕೃಷ್ಣ ಇತರರು ಇದ್ದರು.