Advertisement

1ರಿಂದ ಎರಡು ದಿನ ಸಾಹಿತ್ಯ ಸಮ್ಮೇಳನ

01:27 PM Jan 30, 2020 | Naveen |

ಬಳ್ಳಾರಿ: ಫೆಬ್ರವರಿ 1,2ರಂದು ಎರಡು ದಿನಗಳ ಕಾಲ 21ನೇ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, ಡಾ| ಜೆ.ಎಂ.ನಾಗಯ್ಯ ಅವರು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಗಮಿಸಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

Advertisement

ನಗರದ ಕನ್ನಡ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ವೇದಿಕೆಗೆ ಹುತಾತ್ಮ ಪೈಲ್ವಾನ್‌ ರಂಜಾನ್‌ಸಾಬ್‌ ಹೆಸರು, ಮಂಟಪಕ್ಕೆ ಗಮಕ ಕಲಾನಿ  ಡಾ|ಜೋಳದರಾಶಿ ದೊಡ್ಡನಗೌಡರ ಹೆಸರುಗಳನ್ನು ಇಡಲಾಗಿದೆ. ನಾಲ್ಕು ದ್ವಾರಗಳಿಗೆ ಸರ್ವದರ್ಶಮ ತೀರ್ಥ ವೈ.ನಾಗೇಶಶಾಸ್ತ್ರಿ, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ, ಹಾಸ್ಯಬ್ರಹ್ಮ ಬೀ.ಚಿ., ಕನ್ನಡ ಸೇವಕ ಶ್ರೀಧರಗಡ್ಡೆ ಸಿದ್ದಬಸಪ್ಪ, ಕನ್ನಡ ಹೋರಾಟಗಾರ ಚಾನಾಳ್‌ ವೀರಾರೆಡ್ಡಿ ಹೆಸರುಗಳನ್ನು ಇಡಲಾಗಿದೆ ಎಂದು ತಿಳಿಸಿದರು.

ಫೆ.1ರಂದು ಬೆಳಗ್ಗೆ 8.30ಕ್ಕೆ ರಂಗಮಂದಿರದಲ್ಲಿ ಉಪವಿಭಾಗಾಧಿಕಾರಿ ರಮೇಶ್‌ ಪಿ. ಕೋನರೆಡ್ಡಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಪರಿಷತ್ತಿನ ಧ್ವಜಾರೋಹಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ. ರಂಗಣ್ಣವರ ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಂದು ಬೆಳಗ್ಗೆ 9 ಗಂಟೆಗೆ ಕನ್ನಡ ಭವನದಿಂದ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಯಲಿದೆ.

ಶಾಸಕ ಜಿ.ಸೋಮಶೇಖರರೆಡ್ಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ್‌ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಿದ್ದಾರೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಂದಿಕೋಲು ಕುಣಿತ, ಗೊರವರ ಕುಣಿತ ಸೇರಿ ವಿವಿಧ ಜಾನಪದ ಕಲಾ ತಂಡಗಳು, ಸ್ಕೌಟ್ಸ್‌ ಮತ್ತು ಗೈಡ್ಸ್‌, ಭಾರತ ಸೇವಾದಳ, ಎನ್‌ಎಸ್‌ಎಸ್‌ ಘಟಕಗಳು, ಕನ್ನಡಾಭಿಮಾನಿಗಳು ಭಾಗವಹಿಸಿ ಮೆರವಣಿಗೆಗೆ ಮೆರುಗು ನೀಡಲಿದ್ದಾರೆ ಎಂದು ವಿವರಿಸಿದರು.

ಅಂದು ಬೆಳಗ್ಗೆ 11.30ಕ್ಕೆ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಜಿ. ಸೋಮಶೇಖರರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಇಳಕಲ್‌ನ ಪ್ರಸಿದ್ಧ ಜಾನಪದ ಸಾಹಿತಿ ಪ್ರೊ| ಶಂಭು ಬಳಿಗಾರ್‌ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ “ಗುಡಿ ನುಡಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಸಂಸದ ವೈ.ದೇವೇಂದ್ರಪ್ಪ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಆರೋಗ್ಯ ಸಚಿವ
ಬಿ.ಶ್ರೀರಾಮುಲು ಪುಸ್ತಕ ಮಳಿಗೆ, ಶಾಸಕ ಬಿ. ನಾಗೇಂದ್ರ ಚಿತ್ರಕಲಾ ಪ್ರದರ್ಶವನ್ನು ಉದ್ಘಾಟಿಸಲಿದ್ದಾರೆ.

Advertisement

ಮಧ್ಯಾಹ್ನ 1 ಗಂಟೆಯಿಂದ ಸಮಕಾಲೀನ ಸಾಹಿತ್ಯದ ನಿಲುವುಗಳು ಮತ್ತು ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆ ಎಂಬ ವಿಷಯಗಳ ಕುರಿತು ಎರಡು ಗೋಷ್ಠಿಗಳು ನಡೆಯಲಿವೆ. ಸಂಜೆ 4.15ರಿಂದ 6 ಗಂಟೆವರೆಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ನಂತರ 6ರಿಂದ 9.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಫೆ. 2ರಂದು ಬೆಳಗ್ಗೆ 10 ಗಂಟೆಗೆ ವಿದ್ಯಾರ್ಥಿ ಕವಿಗೋಷ್ಠಿ, ಮಧ್ಯಾಹ್ನ 11.30ಕ್ಕೆ ಕೃಷಿ ಮತ್ತು ಕೈಗಾರಿಕೆ ಎಂಬ ವಿಷಯ ಕುರಿತು ಗೋಷ್ಠಿಗಳು ನಡೆಯಲಿವೆ. ಮಧ್ಯಾಹ್ನ 3 ಗಂಟೆಗೆ ಸಮ್ಮೇಳನಾಧ್ಯಕ್ಷ ಜೆ.ಎಂ.ನಾಗಯ್ಯ ಅವರೊಂದಿಗೆ ಸಂವಾದ, ಸಂಜೆ 4 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆ 4.30ಕ್ಕೆ ಗೌರವ ಸನ್ಮಾನ, ಸಮಾರೋಪ ಸಮಾರಂಭ ನಡೆಯಲಿದ್ದು, ಕಲ್ಯಾಣಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷ ಡಾ| ಜೆ.ಎಂ.ನಾಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಬಿಡುಗಡೆಯಾಗುವ ಪುಸ್ತಕಗಳು: ಜಿಲ್ಲಾ ಕಸಾಪ ಸಮ್ಮೇಳನದಲ್ಲಿ ಡಾ| ಬಿ.ಆರ್‌.ಮಂಜುನಾಥ್‌ ಅವರ ಬಾಲಬಸವರು, ಲೇಖಕ ಡಿ.ಎಂ. ಪ್ರಹ್ಲಾದ ಅವರ ಮೀನುಗಾರನ ಮೈನಕ್ಕಿ, ಬಿ.ಅರುಣ್‌ ಕುಮಾರ್‌ ಅವರ ಮಂದಾರ ಕಾವ್ಯ, ಸಿದ್ದರಾಮ ಕಲ್ಮಠ ಅವರ ಉರಿಯ ಬೆಳಕು, ಡಾ| ರಝಾಕ್‌ ಉಸ್ತಾದ್‌ ಅವರ ಹೈದರಾಬಾದ್‌ ಕರ್ನಾಟಕ ವಿಶೇಷ ಸ್ಥಾನಮಾನ; ಕಥೆ ವ್ಯಥೆ, ಡಾ| ಯು.ಶ್ರೀನಿವಾಸ ಮೂರ್ತಿಯವರ ವಿಚಾರದಡವಿಯೊಳಗಿನ ಪಯಣ, ವೆಂಕಟೇಶ್‌ ಎಸ್‌.ಕೊಟ್ಟೂರು ಅವರ ಕನ್ನಡ ಸಾಹಿತಿಗಳ ಸಾಂಸ್ಕೃತಿಕ ಪರಂಪರೆ ಎಂಬ ಏಳು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು ಎಂದವರು ವಿವರಿಸಿದರು. ಇದೇ ವೇಳೆದ ಸಮ್ಮೇಳನದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಕಸಾಪ ಉಪಾಧ್ಯಕ್ಷ ಪ್ರಕಾಶ್‌ ಗೌಡ ಪಾಟೀಲ್‌, ಸಿದ್ಮಲ್‌ ಮಂಜುನಾಥ್‌, ಸುಂಕಪ್ಪ, ವಿಭೂತಿ ಎರ್ರಿಸ್ವಾಮಿ, ಮುಂಡಾಸದ ಮಲ್ಲಿಕಾರ್ಜುನ, ಕೆ.ರಮೇಶ್‌, ಜೋಳದರಾಶಿ ಮಂಜುನಾಥ್‌, ಪೊಂಪಾಪತಿ, ಕೇದಾರ್‌ನಾಥ್‌, ಕಪ್ಪಗಲ್‌ ಚಂದ್ರಶೇಖರ್‌ ಆಚಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next