ಬಳ್ಳಾರಿ: ಕೈಗಾರಿಕೆಗಳು ಎಂದಾಕ್ಷಣ ಕೇವಲ ವ್ಯವಹಾರ, ಲಾಭಗಳಿಕೆ ಮಾತ್ರವಲ್ಲ. ಅವುಗಳಿಗೂ ಸಾಮಾಜಿಕ ಜವಾಬ್ದಾರಿಯಿದೆ ಎಂಬುದಕ್ಕೆ ಜಿಲ್ಲೆಯ ಜೆಎಸ್‌ಡಬ್ಲೂ ಸಂಸ್ಥೆಯೇ ಕಾರಣವಾಗಿದೆ. ಭೂಮಿಯಲ್ಲಿ ಫಲವತ್ತತೆಯ ಕೊರತೆ, ಮಳೆ ಅಭಾವದಿಂದ ಕೈಚೆಲ್ಲಿ ಕುಳಿತಿದ್ದ ರೈತರಿಗೆ ಜಿಂದಾಲ್‌ನ ಜೆಎಸ್ ಡಬ್ಲೂ ಫೌಂಡೇಶನ್ ಮಧ್ಯಸ್ಥಿಕೆ ವಹಿಸಿ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿ, ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಸದೃಢರಾಗುವಂತೆ ಮಾಡಿದೆ.
ಜಿಲ್ಲೆಯ ಸಂಡೂರು ತಾಲೂಕು ತೋರಣಗಲ್ಲು ಹೋಬಳಿ ವ್ಯಾಪ್ತಿಯಲ್ಲಿನ ಬಹುತೇಕ ಗ್ರಾಮಗಳ ರೈತರು ಭೂಮಿಯ ಫಲವತ್ತತೆಯ ಕೊರತೆ, ಮಳೆಯ ಅಭಾವ, ಹವಾಮಾನ ವೈಪರೀತ್ಯ, ಅಂತರ್ಜಲ ಮಟ್ಟ ಕುಸಿತ, ಹೆಚ್ಚಿದ ಬಂಡವಾಳ, ಕಡಿಮೆ ಇಳುವರಿಯಿಂದ ನಷ್ಟ ಸೇರಿ ಹಲವು ಸಮಸ್ಯೆಗಳಿಂದ ಕೃಷಿಯಿಂದ ವಿಮುಖರಾಗಿದ್ದರು. ಕೈಗಾರಿಕೆಗಳಲ್ಲಿ ಕೆಲಸಕ್ಕೆ ಸೇರಿದ್ದರು. ಇದನ್ನು ಮನಗಂಡಿದ್ದ ಜೆಎಸ್‌ಡಬ್ಲೂ ಫೌಂಡೇಶನ್‌ನವರು ರೈತರನ್ನು ವಾಪಸ್ ಕೃಷಿಯತ್ತ ಕೊಂಡೊಯ್ಯಲು ಯೋಜನೆಗಳನ್ನು ರೂಪಿಸಿದರು. ಮೊದಲು ಹೈದ್ರಾಬಾದ್ ಮೂಲದ ಇಂಟರ್‌ನ್ಯಾಷನಲ್ ಕ್ರಾಪ್ಸ್ ರೀಸರ್ಚ್ ಇನ್ಸ್‌ಟಿಟ್ಯೂಟ್ ಆಫ್ ದ ಸೆಮಿ ಆರಿಡ್ ಟ್ರಾಪಿಕ್ಸ್ (ಇಕ್ರಿಸ್ಯಾಟ್) ಎಂಬ ಸಂಸ್ಥೆಯಿಂದ ಆಯ್ದ ದೊಡ್ಡ ಅಂತಾಪುರ, ಚಿಕ್ಕ ಅಂತಾಪುರ, ಕೊಡಾಲು, ಜೋಗ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಾಯಿತು.
ಸಮೀಕ್ಷೆಯಿಂದ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿದೆ. ಆದರೆ, ಮಣ್ಣು ಫಲವತ್ತತೆ ಕುಸಿದಿದೆ. ನೀರಿನ ಅಸಮರ್ಪಕ ಬಳಕೆ ಸೇರಿ ಕೆಲ ಅವೈಜ್ಞಾನಿಕ ಪದ್ಧತಿ ಅಳವಡಿಕೆಯಿಂದಾಗಿ ರೈತರು ನಷ್ಟಕ್ಕೀಡಾಗುತ್ತಿದ್ದು, ಕೃಷಿಯಿಂದ ದೂರವಾಗಲು ಕಾರಣ ಎಂಬುದು ತಿಳಿಯಿತು. ಬಳಿಕ ಮಧ್ಯಸ್ಥಿಕೆ ವಹಿಸಿದ ಜೆಎಸ್‌ಡಬ್ಲೂ ಫೌಂಡೇಶನ್ ಸರ್ಕಾರದ ಸೌಲಭ್ಯಗಳ ಜತೆಗೆ ರೈತರನ್ನು ಕೃಷಿಯಿಂದ ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ತರಬೇತಿ ನೀಡಿ ಅರಿವು ಮೂಡಿಸಲಾಯಿತು ಎಂದು ಫೌಂಡೇಶನ್‌ನ ಮುಖ್ಯಸ್ಥ ವಿಶ್ವನಾಥ್ ಪಲ್ಲೇದ ತಿಳಿಸಿದರು.
ಜೆ.ಎಸ್.ಡಬ್ಲ್ಯೂ ಫೌಂಡೇಶನ್‌ನ ಸಮಿಕ್ಷೆಯ ಪ್ರಕಾರ, ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ಅಂತಾಪುರ, ಚಿಕ್ಕ ಅಂತಾಪುರ, ಕೊಡಾಲು, ಜೋಗ ಗ್ರಾಮಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಯಿತು. ಹರಿದು ಹೋಗುತ್ತಿದ್ದ ನೀರನ್ನು ಚೆಕ್‌ಡ್ಯಾಂ ಮೂಲಕ ತಡೆದು ನಿಲ್ಲಿಸಿದಾಗ ಅಲ್ಲಿನ ಸುತ್ತಮುತ್ತಲಿನ ಬೋರ್‌ವೆಲ್‌ಗಳು ರೀಚಾರ್ಜ್ ಆಗಿದ್ದು, ಮೊದಲು ಒಂದೆರಡು ತಿಂಗಳು ದೊರೆಯುತ್ತಿದ್ದ ನೀರು, ಇದೀಗ ಏಳೆಂಟು ತಿಂಗಳು ಲಭಿಸುತ್ತಿದೆ. ಇದರೊಂದಿಗೆ ಕೃಷಿ ಹೊಂಡ, ಬದುಗಳನ್ನು ನಿರ್ಮಿಸಲಾಗಿದೆ. ಜತೆಗೆ ರೈತರಿಗೆ ವಿವಿಧ ತಳಿಗಳನ್ನು ಸಹ ಪರಿಚಯಿಸಲಾಗಿದ್ದು, ಇದೀಗ ರೈತರು, ಉತ್ತಮ ಇಳುವರಿಯೊಂದಿಗೆ ವರ್ಷಕ್ಕೆ 2 ಬೆಳೆ ಪಡೆಯುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಲಾಭವನ್ನೂ ಗಳಿಸುತ್ತಿದ್ದಾರೆ. 6 ಎಕರೆ ಹೊಲದಲ್ಲಿ ಹತ್ತಿಯೊಂದಿಗೆ ತರಕಾರಿಯನ್ನೂ ನಾಟಿ ಮಾಡಲಾಗಿದ್ದು, ಇಳುವರಿ ಉತ್ತಮವಾಗಿ ಬಂದಿದೆ. ಚೆಕ್ ಡ್ಯಾಂ ನಿರ್ಮಿಸಿದ್ದು, ಬೋರ್‌ವೆಲ್ ಗಳು ರೀಚಾರ್ಜ್ ಆಗಲು ಅನುಕೂಲವಾಗಿದೆ ಎಂದು ಲಿಂಗದಹಳ್ಳಿಯ ರೈತ ಸಿ.ಜಿ. ಹಾವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಜೆಎಸ್‌ಡಬ್ಲೂ ಫೌಂಡೇಶನ್‌ನವರು ಮನೆಗಳಿಂದ ಹೊರಬಿಡುವ ತ್ಯಾಜ್ಯ ನೀರನ್ನು
ಶುದ್ಧೀಕರಿಸಿ ಮರುಬಳಕೆ ಮಾಡಲು ಮುಂದಾದಾಗ ದೊಡ್ಡ ಅಂತಾಪುರದಲ್ಲಿ 300 ಅಡಿ ಜಾಗವನ್ನು ಬಿಟ್ಟುಕೊಟ್ಟರು. ವೇಸ್ಟ್‌ವಾಟರ್ ಟ್ರೀಟ್‌ಮೆಂಟ್ ಸಿಸ್ಟಮ್‌ನಲ್ಲಿ ತ್ಯಾಜ್ಯ ನೀರನ್ನು ಶುದ್ಧೀಕರಿಸಿದ ಬಳಿಕ ಆ ನೀರನ್ನು ಕೃಷಿಗೆ ಬಳಸಲು ಅವಕಾಶ ಕಲ್ಪಿಸಲಾಗಿದ್ದು, ರೈತರೊಬ್ಬರು ಈ ನೀರಲ್ಲಿ ಮೂರು ಎಕರೆಯಲ್ಲಿ ಹತ್ತಿ, ಮೆಣಸಿನಕಾಯಿ ಬೆಳೆದು ಅ ಧಿಕ ಲಾಭವನ್ನು ಗಳಿಸಿದ್ದಾರೆ ಎಂದು ಪ್ರಣತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯೋಜಕಿ ಗಂಗಾ ತಿಳಿಸಿದರು.
2013-14ನೇ ಸಾಲಿನಲ್ಲಿ ಆರಂಭಿಸಲಾದ ಈ ಯೋಜನೆಯಲ್ಲಿ ಮೊದಲ ವರ್ಷ 300 ಹೆಕ್ಟೇರ್ ಜಮೀನನ್ನು ಅಭಿವೃದ್ಧಿಪಡಿಸಲಾಗಿದ್ದು, ಹಂತಹಂತವಾಗಿ ಏಳು ವರ್ಷಗಳ ಅವಧಿಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಜಮೀನನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 25 ಹಳ್ಳಿಗಳಲ್ಲಿ ಸುಮಾರು 30 ರಿಂದ 40 ಸಾವಿರ ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಫೌಂಡೇಶನ್‌ನ ಮುಖ್ಯಸ್ಥ ವಿಶ್ವನಾಥ್ ಪಲ್ಲೇದ ತಿಳಿಸಿದರು.