ಚಳ್ಳಕೆರೆ: ಕಳೆದ ಮೂರ್‍ನಾಲ್ಕು ದಿನಗಳಿಂದ ಹಿಂದೆ ಸುರಿದ ಮಳೆಯಿಂದ ತಾಲೂಕಿನ ಬಹುತೇಕ ಕೆರೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ. ಆದರೆ ಕೆರೆಗಳಲ್ಲಿ ಜಾಲಿ ಗಿಡಗಳು ತುಂಬಿ ಹೋಗಿದೆ. ಇದರಿಂದ ಕೆರೆ ಏರಿ ಒಡೆದು ನೀರು ಪೋಲಾಗುವ ಭೀತಿ ಎದುರಾಗಿದೆ.
ಮಳೆ ವೈಫಲ್ಯದಿಂದ ಕೆರೆಗಳ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಷ್ಟೊಂದು ಗಮನ ನೀಡಿಲ್ಲ. ಸರ್ಕಾರ ಕೆರೆ ಸಂಜೀವಿನಿ ಯೋಜನೆಯಡಿ ಹಲವಾರು ಕೆರೆಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿದೆ. ಆದರೆ ಬಹುತೇಕ ಕೆರೆಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳದೇ ಇರುವುದರಿಂದ
ನೀರು ವ್ಯರ್ಥವಾಗುತ್ತಿದೆ. ಇದರಿಂದ ಕೆರೆ ಏರಿ ಒಡೆದುಹೋಗುವ ಅಪಾಯ ಸೃಷ್ಟಿಯಾಗಿದೆ.
ಮಳೆಯಿಂದ ಕೆಲವು ಕೆರೆಗಳಲ್ಲಿ ನೀರಿದ್ದರೂ ಸೋರಿಕೆಯಿಂದಾಗಿ ವ್ಯರ್ಥವಾಗಿ ಹರಿಯುತ್ತಿದೆ. ಹತ್ತು ವರ್ಷಗಳಿಂದ ಬತ್ತಿ ಹೋಗಿದ್ದ ಚಳ್ಳಕೆರೆ ನಗರದ ಅಜ್ಜಯ್ಯನಗುಡಿ ಕೆರೆಯಲ್ಲೂ ನೀರು ಕಾಣಿಸಿಕೊಂಡಿದೆ. ಆದರೆ ಕೆರೆ ಏರಿಯಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಜನರಲ್ಲಿ ಆತಂಕ ಮೂಡಿದೆ. ತಾಲೂಕಿನ ಬಹುತೇಕ ಕೆರೆಗಳಲ್ಲಿ ಇದೇ ಪರಿಸ್ಥಿತಿ ಇದೆ. ದೊಡ್ಡೇರಿ, ಎನ್. ಉಪ್ಪಾರಹಟ್ಟಿ, ರಾಣಿಕೆರೆ, ಚಿಕ್ಕಮಧುರೆ ಕೆರೆ, ನಗರಂಗೆರೆ ಕೆರೆ, ತಳಕು ಕೆರೆ, ಬೆಳೆಗೆರೆ ಕೆರೆ ಮುಂತಾದ ಕೆರೆಗಳಲ್ಲಿ ಜಾಲಿ ಗಿಡಗಳು ಮಿತಿ ಮೀರಿ ಬೆಳೆದಿವೆ.
ಗಿಡಗಳ ಬೇರು ಆಳವಾಗಿ ಬೇರೂರಿದ್ದು, ಅವುಗಳಿಂದ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ತುರ್ತಾಗಿ ಕೆರೆಗಳನ್ನು ದುರಸ್ತಿ ಮಾಡಿಸಿದಲ್ಲಿ ಜಾನುವಾರುಗಳಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆ ಅಲ್ಪ ಪ್ರಮಾಣದಲ್ಲಾದರೂ ಬಗೆಹರಿಯಬಹುದು. ಸುಮಾರು ನಾಲ್ಕು ದಿನಗಳಿಂದ ನೀರು ಸೋರಿ ಹೋಗುತ್ತಿದ್ದರೂ ತಡೆಗಟ್ಟಲು ಇಲಾಖೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಐತಿಹಾಸಿಕ ಕೆರೆಗಳನ್ನು ಉಳಿಸಲು ಕೆರೆ ಏರಿ ದುರಸ್ತಿಗೊಳಿಸಬೇಕು. ಕೆರೆಯ ಒಳ ಭಾಗದಲ್ಲಿ ಬೆಳೆದ ಜಾಲಿಯನ್ನು ತೆರವು ಮಾಡಬೇಕು. ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು. ಕೆರೆಗಳ ಸಂರಕ್ಷಣೆಗೆ ಹೋರಾಟ ನಡೆಸಲು ನಾವು ಸಿದ್ಧರಿದ್ದೇವೆ.
ಮೀರಾಸಾಬಿಹಳ್ಳಿ ಮೋಹನ್, ಯುವ ಮುಖಂಡ.
ತಾಲೂಕಿನ ಹಲವಾರು ಕೆರೆಗಳಲ್ಲಿ ಮಿತಿ ಮೀರಿ ಬೆಳೆದ ಬಳ್ಳಾರಿ ಜಾಲಿಯಿಂದ ಮೀನುಗಾರರಿಗೆ ಮೀನು ಹಿಡಿಯಲಾಗುತ್ತಿಲ್ಲ, ಜಾನುವಾರುಗಳಿಗೂ ನೀರು ಕುಡಿಯಲು ಆಗುತ್ತಿಲ್ಲ. ಗ್ರಾಮಸ್ಥರು ಕೆರೆ ನೀರನ್ನು ಬಳಸಿಕೊಳ್ಳಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
ಎನ್. ವೀರಣ್ಣ ಉಪ್ಪಾರಹಟ್ಟಿ, ರೈತ.
ಕೆ.ಎಸ್. ರಾಘವೇಂದ್ರ