Advertisement

ಬೆಳಗಾವಿ: ಭೂಮಿ ಕಳೆದುಕೊಂಡ ರೈತರಿಂದ ಮುತ್ತಿಗೆ

11:57 AM Mar 12, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಹಿಡಕಲ್‌ ಜಲಾಶಯದಲ್ಲಿ ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಗ್ರಾಮದ ರೈತರು ನಗರದ ನೀರಾವರಿ ಇಲಾಖೆಯ ಕಚೇರಿಗೆ ಜಾನುವಾರು ಸಮೇತ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಎತ್ತಿನ ಗಾಡಿ ಸಮೇತ ಬಂದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕ್ಲಬ್‌ ರಸ್ತೆಯಲ್ಲಿರುವ ನೀರಾವರಿ ಇಲಾಖೆ ಕಚೇರಿಗೆ ತೆರಳಿ ಪ್ರತಿಭಟಿಸಿದರು. ಕಚೇರಿ ಆವರಣದಲ್ಲಿಯೇ ಎತ್ತುಗಳ ಸಮೇತ ನುಗ್ಗಿ ಅಧಿ ಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಸಂತ್ರಸ್ತರು, ಪರಿಹಾರ ನೀಡದ ನೀರಾವರಿ ಇಲಾಖೆ ಅ ಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ನೀರಾವರಿ ಇಲಾಖೆ ಕಚೇರಿಯೊಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಕಚೇರಿಯ ಒಳಭಾಗಕ್ಕೆ ಯಾರೂ ಹೋಗದಂತೆ ಸುತ್ತಲೂ ಬ್ಯಾರಿಕೇಡ್‌ ಹಾಕಿದರು. ರೈತ ಮಹಿಳೆಯರು ಕೈಯಲ್ಲಿ ಫಲಕ ಹಿಡಿದು ಕಚೇರಿ ಎದುರು ಕುಳಿತುಕೊಂಡರು.

ಹಲವಾರು ವರ್ಷಗಳ ಹಿಂದೆ ಮಾಸ್ತಿಹೊಳಿ, ಗುಡಗನಟ್ಟಿ ಸೇರಿದಂತೆ ನಾಲ್ಕೈದು ಗ್ರಾಮಗಳ ಜಮೀನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಹಿಡಕಲ್‌ ಜಲಾಶಯದಲ್ಲಿ 395 ಎಕರೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ಹೆ„ಕೋರ್ಟ್‌ ಆದೇಶ ಹೊರಡಿಸಿದರೂ ಇನ್ನೂವರೆಗೆ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ. ನೀರಾವರಿ
ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಸಂಕಷ್ಟ ಪಡುವಂತಾಗಿದೆ. ಅ ಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ರೈತರಿಗೆ ಅನ್ಯಾಯ ಎಸಗಿದ್ದಾರೆ. ನಮಗೆ ಪರಿಹಾರ ನೀಡುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ಪರಿಹಾರ ಸಿಗುವಲ್ಲಿ ವಿಳಂಬವಾಗುತ್ತಿದೆ. ಅನೇಕ ಬಾರಿ ಅ ಧಿಕಾರಿಗಳೊಂದಿಗೆ ಸಭೆ ನಡೆಸಿದರೂ ಪರಿಹಾರ ಸಿಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಆಗಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ನಮಗೆ ಪರಿಹಾರ ನೀಡುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ರೈತ ಮುಖಂಡ ಬಾಳೇಶ ಮಾವನೂರಿ ಎಚ್ಚರಿಕೆ ನೀಡಿದರು.

Advertisement

ಜನ ಜನಾವಾರುಗಳೊಂದಿಗೆ ನಮಗೆ ನ್ಯಾಯ ನೀಡಬೇಕೆಂದು ಆಹೋರಾತ್ರಿ ಧರಣಿಗೆ ಮುಂದಾಗಿದ್ದೇವೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರಿಗೆ ಹಾಗೂ ಮಹಿಳೆಯರಿಗೆ ತೊಂದರೆಯಾದರೆ ಅದಕ್ಕೆ ಈ ನೀರಾವರಿ ಇಲಾಖೆಯಲ್ಲಿರುವ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದ ಅವರು, ನಮಗೆ ನ್ಯಾಯ ಸಿಗುವವರೆಗೂ ಈ ಜಾಗದಿಂದ ಕದಲುವುದಿಲ್ಲ.

ಯಾರೇ ಬಂದು ಆಶ್ವಾಸನೆ ನೀಡಿದರೂ ನಾವು ಜಗ್ಗುವುದಿಲ್ಲ. ಒಟ್ಟಾರೆಯಾಗಿ ಹಿಡಕಲ್‌ ಡ್ಯಾಮ್‌ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರಿಗೆ ನೀರಾವರಿ ಇಲಾಖೆಯಿಂದ ಪರಿಹಾರ ನೀಡಬೇಕು. ನಿರಂತರ ರೈತರನ್ನು ಸತಾಯಿಸಿದ ಭ್ರಷ್ಟ ನೀರಾವರಿ ಇಲಾಖೆಯ ಐವರು ಅಧಿ ಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.

ಮಾಸ್ತಿಹೊಳಿ, ಗುಡನಟ್ಟಿ ಬೀರಹೊಳ್ಳಿ ಗ್ರಾಮದ ರೈತರು ನೂರಾರು ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ಜನೇವರಿ 25ರಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಸಚಿವರು, ಕರ್ನಾಟಕ ನೀರಾವರಿ ನಿಗಮದಿಂದ ಮಾಸ್ತಿಹೊಳಿ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆ ಸಂಬಂಧಿಸಿದಂತೆ ಪರಿಹಾರ ಸಿಗದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು.

ಅದರ ದಾಖಲೆಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದರು. ಇಲಾಖೆಯ ಅಧಿಕಾರಿಗಳ ಬಳಿ ಪರಿಹಾರ ವಿತರಿಸಿದ್ದ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಜಿಲ್ಲಾಧಿಕಾರಿಗಳು ಸಂಬಂಧಿ ಸಿದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ಪ್ರತಿಭಟಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನಿಇಡಿದ್ದರು.

ಕಚೇರಿ ಆವರಣದಲ್ಲಿಯೇ ಅಡುಗೆ 
ನಗರದ ನೀರಾವರಿ ಇಲಾಖೆ ಕಚೇರಿ ಆವರಣಕ್ಕೆ ನುಗ್ಗಿದ ಮಾಸ್ತಿಹೊಳಿ ಗ್ರಾಮದ ರೈತರು ಅ ಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಚೇರಿ ಆವರಣದಲ್ಲಿಯೇ ಎತ್ತುಗಳನ್ನು ಕಟ್ಟಿ ಮೇವು ತಿನ್ನಿಸಿದರು. ಕಚೇರಿ ಆವರಣದಲ್ಲಿಯೇ ಮಧ್ಯಾಹ್ನದ ಅಡುಗೆ ತಯಾರಿಸಿ ಊಟ ಮಾಡಿದರು. ಅಧಿಕಾರಿಗಳು ನಮಗೆ ನ್ಯಾಯ ಒದಗಿಸಿ ಕೊಡಬೇಕು. ಪರಿಹಾರ ಸಿಗದ ಅನೇಕ ರೈತರಿಗೆ ಅನ್ಯಾಯವಾಗಿದ್ದು, ಇದನ್ನು ಬಗೆಹರಿಸಿ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರೈತರ ಪ್ರತಿಭಟನಾ ಸ್ಥಳಕ್ಕೆ ಡಿಸಿ ಭೇಟಿ
ನೀರಾವರಿ ಇಲಾಖೆ ಕಚೇರಿ ಎದುರು ನಡೆಸುತ್ತಿರುವ ರೈತರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ನೀಡಿ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಂಜೆ 4 ಗಂಟೆಗೆ ನೀರಾವರಿ ಇಲಾಖೆ ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಮಕ್ಷಮ ಪರಿಹಾರ ನೀಡುವ ಕುರಿತು ಚರ್ಚೆ ನಡೆಸಿದರು. ನಂತರ ಶೀಘ್ರವೇ ರೈತರಿಗಾದ ಸಮಸ್ಯೆಗಳನ್ನು ಇತ್ಯರ್ಥಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದರೆ ರೈತರು ನಮಗೆ ನ್ಯಾಯ ಸಿಗುವವರೆಗೂ ಯಾವುದೇ ಕಾರಣಕ್ಕೂ ನಾವು ಜಾಗ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ರೈತರ ಪ್ರತಿಭಟನೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next