ಬಳ್ಳಾರಿ: ತಾಲೂಕಿನ ಕುಡಿತಿನಿ ಬಳಿಯ ಕೈಗಾರಿಕಾ ಪ್ರದೇಶಕ್ಕೆ ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಿಳಾ ಔದ್ಯಮಿಕ ಪಾರ್ಕ್ ಸೇರಿ ವಿವಿಧ ಕೈಗಾರಿಕೆಗಳ ಸ್ಥಾಪನೆಗೆಂದು ಮೀಸಲಿಡಲಾಗಿದ್ದ ಪ್ರದೇಶವನ್ನು ವೀಕ್ಷಿಸಿದರು. ಬಳಿಕ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕೆಗೆಂದು ಮೀಸಲಿಡಲಾಗಿದ್ದ ಮೊದಲ ಹಂತದ 645 ಎಕರೆ ಪ್ರದೇಶ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದ 538 ಎಕರೆ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಮೊದಲ ಹಂತದ 645 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು 300 ಅರ್ಜಿಗಳು ಬಂದಿವೆ. ಹಂಚಿಕೆ ಮಾಡಲು ಸಂಬಂಧಿಸಿದಂತೆ ಪರಿಸರ ಇಲಾಖೆ ಅನುಮತಿ ಪಡೆಯಬೇಕಾಗಿದೆ. ಅನುಮತಿ ದೊರೆತಾಕ್ಷಣ ಹಂಚಿಕೆ ಮಾಡಲಾಗುವುದು ಎಂದರು.
ಕೆಐಎಡಿಬಿ ವತಿಯಿಂದ ಜಮೀನು ಸ್ವಾಧೀನಪಡಿಸಿಕೊಂಡು ಎಲ್ಲ ಪ್ರಕ್ರಿಯೆಗಳು ಚಾಲನೆ ಪಡೆದುಕೊಳ್ಳುವಾಗ ಕೆಲ ಸಮಸ್ಯೆಗಳು ಬರುವುದು ಸಹಜ. ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪಿಸಬೇಕು ಎಂದು ಕೋರಿ ಅನೇಕ ರಾಜ್ಯಗಳು ರತ್ನಗಂಬಳಿ ಹಾಕಿ ಸ್ವಾಗತ ಕೋರುತ್ತಿವೆ. ಅಂತರದಲ್ಲಿ ಕೈಗಾರಿಕೆಗಳು ನಮ್ಮ ರಾಜ್ಯಕ್ಕೆ ಬರುವ ಸಂದರ್ಭದಲ್ಲಿ ಸಮಸ್ಯೆ ಮಾಡುವುದು ಸರಿಯಲ್ಲ ಎಂದ ಸಚಿವ ಜಾರ್ಜ್, ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಹಂಚಿಕೆ ಮಾಡಿದ ನಂತರ ಕೈಗಾರಿಕೆ ಸ್ಥಾಪಿಸಲು ಸ್ವಲ್ಪ ಸಮಸ್ಯೆ ಇದೆ ಅಂದಾಗ ಮತ್ತಷ್ಟು ಅವಧಿ ನೀಡುತ್ತೇವೆ. ಅದರೂ ಕೈಗಾರಿಕೆ ಸ್ಥಾಪಿಸದಿದ್ದರೆ ಅಥವಾ ಕೈಗಾರಿಕೆ ಸ್ಥಾಪನೆಗೆಂದು ಪಡೆದ ಜಮೀನಿನಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಅಂಥವುಗಳನ್ನು ಮುಖ್ಯಮಂತ್ರಿಗಳ ನೇತೃತ್ವದ ಹೈ ಪವರ್ ಕಮಿಟಿ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಕ್ಯಾಬಿನೆಟ್ ನಿರ್ಧಾರಕ್ಕೆ ಬದ್ಧ: ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದೆ. ಅದರ ವರದಿ ಕ್ಯಾಬಿನೆಟ್ ಮುಂದೆ ಬರಲಿದ್ದು, ಕ್ಯಾಬಿನೆಟ್ ತೀರ್ಮಾನಕ್ಕೆ ನಾನು ಬದ್ಧ. ಈ ಹಿಂದೆಯೂ ಜಿಂದಾಲ್ಗೆ ಸಂಸ್ಥೆಯೊಂದಿಗೆ ಲೀಜ್ ಕಂ ಸೇಲ್ಡೀಡ್ ಮೂಲಕವೇ ಜಮೀನನ್ನು ಪರಭಾರೆ ಮಾಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಜಮೀನಿಗೆ ಒಮ್ಮೆ ಬೆಲೆ ನಿಗದಿಪಡಿಸಿ ಲೀಜ್ ಕಂ ಸೇಲ್ಡೀಡ್ ಒಪ್ಪಂದ ಮಾಡಿಕೊಂಡ ಬಳಿಕ ಅದನ್ನು ಬದಲಾವಣೆ ಮಾಡಲು ಬರುವುದಿಲ್ಲ. ಲೀಜ್ ಅವಧಿ ಮುಗಿದ ಬಳಿಕ ಮಾಡಿಕೊಂಡ ಒಪ್ಪಂದದಂತೆಯೇ ಜಮೀನು ಪರಭಾರೆ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಸಂಪುಟ ಉಪಸಮಿತಿ ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ಅನೇಕ ರೈತರು ಸಚಿವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುಂಚೆ ಅವರು ಮಿನೇರಾ ಸೀrಲ್ ಕಂಪನಿಗೆ ಹಾಗೂ ನಂತರ ಹಲಕುಂದಿ ಬಳಿಯ ಜಯರಾಜ್ ಇಸ್ಪಾತ್ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವರಿಗೆ ಕೆಐಎಡಿಬಿ ಸಿಇಒ ಉಮಾಶಂಕರ್, ಚೀಫ್ ಇಂಜಿನೀಯರ್ ಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಇರ್ಫಾನ್ ಮತ್ತಿತರರು ಸಾಥ್ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ ಸೇರಿದಂತೆ ಹಲವರು ಇದ್ದರು.