ಬಳ್ಳಾರಿ: ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೇ ತಾಲೂಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿಸ್ತರಿಸಬೇಕು ಎಂದು ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಹೇಳಿದರು.
ನಗರದ ಗಾಂಧಿಭವನದಲ್ಲಿ ನವದೆಹಲಿಯ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ, ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ (ಕಾವೇರಿ ಹ್ಯಾಂಡ್ ಲೂಮ್ಸ್), ಬಳ್ಳಾರಿ ಜಿಪಂ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಕೈಮಗ್ಗ ಮೇಳ ವಸ್ತ್ರವೈಭವ-2020 ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೈಮಗ್ಗ ಮತ್ತು ನೇಕಾರರು ತಯಾರಿಸಿದ ಬಟ್ಟೆಗಳನ್ನು ಧರಿಸಿದಲ್ಲಿ ಚರ್ಮದ ಖಾಯಿಲೆಗಳು ಬರುವುದಿಲ್ಲ. ಕೈಮಗ್ಗ ಉತ್ಪನ್ನಗಳು, ವಿವಿಧ ರೀತಿಯ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಗಳ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಚಾರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಕೈಮಗ್ಗ ಮತ್ತು ಕಾಟನ್ ವಸ್ತುಗಳನ್ನು ಹೆಚ್ಚಾಗಿ ಬಳಸಬೇಕು ಎಂದು ಯುವಕರಿಗೆ ಕರೆ ನೀಡಿದರು.
ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಮಾತನಾಡಿ, ಪ್ರತಿ ಜಿಲ್ಲೆಗಳಲ್ಲಿ ಕೈಮಗ್ಗದ ಕೌಶಲ್ಯ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ನೇಕಾರರ ವೃತ್ತಿಯಲ್ಲಿ ನೇಕಾರರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸಲು ಸರ್ಕಾರದ ಗಮನಕ್ಕೆ ಅಧಿಕಾರಿಗಳಿಗೆ ತರಬೇಕು ಎಂದು ಸೂಚಿಸಿದರು. ಜಿಪಂ ಉಪಾಧ್ಯಕ್ಷೆ ಪಿ. ದೀನಾ ಮಂಜುನಾಥ ಮಾತನಾಡಿದರು. ಕೈಮಗ್ಗ ಇಲಾಖೆಯ ಅಧಿಕಾರಿ ವಿಠಲರಾಜ್ ಸ್ವಾಗತಿಸಿ, ವಂದಿಸಿದರು. ಈ ವೇಳೆ ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕ ಆನಂದ್ ವಿ. ಕಿತ್ತೂರು, ಕೈಮಗ್ಗ ಮತ್ತು ಜವಳಿ ಇಲಾಖೆ ಉತ್ತರ ವಲಯದ ಜಂಟಿ ನಿರ್ದೇಶಕ ಬಿ. ಶ್ರೀಧರ ನಾಯಕ ಸೇರಿದಂತೆ ಮುಖಂಡರಾದ ಎ.ಮಂಜುನಾಥ, ಶೀಲಾ ಬ್ರಹ್ಮಯ್ಯ ಇತರರು ಇದ್ದರು.
ಸಕ್ರಾಂತಿ ಹಬ್ಬದ ಪ್ರಯುಕ್ತ ಈ ವಸ್ತ್ರ ಮೇಳದಲ್ಲಿ ರೇಷ್ಮೆ ಸೀರೆ, ಟವೆಲ್, ಗುಡಾರ, ಲುಂಗಿ, ಬೆಡ್‌ಸೀಟ್, ಬೆಡ್‌ಸ್ಟ್ರೇಡ್, ಮೊಳಕಾಲ್ಮೂರು ಸೀರೆ, ಚಿಂತಾಮಣಿ ಸೀರೆಗಳು, ಕೈವಸ್ತ್ರ, ಕಂಬಳಿ, ಉಣ್ಣೆ ರಗ್ಗು, ಶಾಲು, ಡೋರ್‌ಮ್ಯಾಟ್, ವಾಲ್ ಹ್ಯಾಂಗಿಂಗ್ಸ್, ಡ್ರೆಸ್ ಮೆಟಿರಿಯಲ್, ಖಾದಿ ಬಟ್ಟೆಗಳು ಹಾಗೂ ಇಲಕಲ್ ಸೀರೆಗಳು ಇತ್ಯಾದಿಗಳು ಕೈಮಗ್ಗ ನೇಕಾರರಿಂದ ನೇರ ಮಾರಾಟಕ್ಕೆ ಯೋಗ್ಯಬೆಲೆಯಲ್ಲಿ ಲಭಿಸಲಿದೆ.