Advertisement

ಹಂಪಿ ಉತ್ಸವ ಯಶಸ್ವಿಗೊಳಿಸಿ: ಡಿಸಿ ನಕುಲ್‌

06:48 PM Nov 29, 2019 | Team Udayavani |

ಬಳ್ಳಾರಿ: ಮುಂಬರುವ 2020 ಜನವರಿ 10 ಮತ್ತು 11ರಂದು ಎರಡು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಂಪಿ ಉತ್ಸವದ ವಿವಿಧ ಸಮಿತಿಗಳ ಅಧ್ಯಕ್ಷರೊಂದಿಗೆ ಗುರುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ವೇದಿಕೆ ಸಮಿತಿ, ಕಲಾವಿದರ ಆಯ್ಕೆ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ, ಆಹಾರ ಸಮಿತಿ, ಕಾನೂನು ಸುವ್ಯವಸ್ಥೆ, ಮೂಲಸೌಲಭ್ಯ ಹಾಗೂ ಕುಡಿಯುವ ನೀರಿನ ಸಮಿತಿ, ಕಾನೂನು ಸುವ್ಯವಸ್ಥೆ ಸಮಿತಿ, ಆರೋಗ್ಯ ಮತ್ತು ನೈರ್ಮಲೀಕರಣ ಸಮಿತಿ, ಕ್ರೀಡಾ ಸಮಿತಿ, ಪ್ರದರ್ಶನ ಸಮಿತಿ, ಚಿತ್ರಕಲಾ ಶಿಬಿರ ಸೇರಿದಂತೆ 30ಕ್ಕೂ ಹೆಚ್ಚು ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ಈ ಸಮಿತಿಗಳು ಈಗಾಗಲೇ ತಮಗೆ ವಹಿಸಿರುವ ಕಾರ್ಯಕ್ರಮಗಳ ವಿವರದೊಂದಿಗೆ ಖರ್ಚು-ವೆಚ್ಚದ ವಿವರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ಅವುಗಳನ್ನು ಪರಿಶೀಲಿಸಲಾಗಿದೆ ಎಂದು ಅವರು ವಿವರಿಸಿದರು.

ವಿವಿಧ ಸಮಿತಿಗಳ ಅಧ್ಯಕ್ಷರು ಸಭೆಯಲ್ಲಿ ನೀಡಲಾದ ಸೂಚನೆಗಳನ್ನು ಮತ್ತು ಯಶಸ್ವಿಗೆ ಅನುಸರಿಸಬೇಕಾದ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಡಿಸಿ ನಕುಲ್‌ ಸೂಚಿಸಿದರು. ಹಂಪಿ ಉತ್ಸವಕ್ಕೆ ವಿವಿಧೆಡೆಯಿಂದ ಆಗಮಿಸುವ ಜನರಿಗೆ ಸುಗಮ ಸಂಚಾರಕ್ಕಾಗಿ ಹೊಸಪೇಟೆಯಿಂದ ಹಂಪಿಗೆ ಬರಲು ಅಗತ್ಯ ಸಾರಿಗೆ ಸಂಚಾರದ ವ್ಯವಸ್ಥೆಯನ್ನು ನಿರಂತರವಾಗಿ ಮಾಡಬೇಕು. ಉತ್ಸವಕ್ಕೆ ಆಗಮಿಸುವ ಮುಖ್ಯಮಂತ್ರಿಗಳು,ಸಚಿವರು, ಶಾಸಕರು, ಜನಪ್ರತಿನಿಧಿಗಳು, ಕಲಾವಿದರು ಹಾಗೂ ಮಾಧ್ಯಮದವರಿಗೆ ಖಾಸಗಿ ಹೋಟಲ್‌ಗ‌ಳಲ್ಲಿ ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಊಟ ಮತ್ತು ಉಪಹಾರದ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಲೋಪಗಳಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು. ಪ್ರಚಾರ ಮತ್ತು ಮಾಧ್ಯಮ ಸಮಿತಿಯು ಹಂಪಿ ಉತ್ಸವದ ಪ್ರಚಾರವನ್ನು ಈಗಿನಿಂದಲೇ ಕೈಗೊಳ್ಳಬೇಕು. ಉತ್ಸವದ ಎಲ್ಲ ಕಾರ್ಯಕ್ರಮಗಳ, ಪ್ರಕ್ರಿಯೆಗಳ ವಿಡಿಯೋ ಹಾಗೂ ಭಾವಚಿತ್ರಗಳನ್ನು ತೆಗೆಸಿ ದಾಖಲಿಸಬೇಕು ಮತ್ತು ಜಾಹೀರಾತು ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಕುಡಿಯುವ ನೀರಿನ ಸರಬರಾಜಿಗಾಗಿ ತಾತ್ಕಾಲಿಕವಾಗಿ ಸ್ಥಾವರ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮಾಡಬೇಕು. ಆರೋಗ್ಯ ಮತ್ತು ನೈರ್ಮಲ್ಯೀಕರಣಕ್ಕೆ ಒತ್ತು ನೀಡಬೇಕು ಎಂದರು. ಹಂಪಿ ಉತ್ಸವದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಸಂಚಾರ ನಿಯಂತ್ರಣ ಹಾಗೂ ಬಂದೋಬಸ್ತ್ ಸೂಕ್ತ ರೀತಿಯಲ್ಲಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ
ನಕುಲ್‌ ಅವರು ಹೇಳಿದರು.

ಇದೇ ವೇಳೆ ಸಭೆಯಲ್ಲಿ ಕೈಗಾರಿಕಾ, ಕೃಷಿ, ಕರಕುಶಲ, ಫಲಪುಷ್ಪ, ಆಹಾರ ಮೇಳ, ಪುಸ್ತಕ ಪ್ರದರ್ಶನ, ಚಿತ್ರಕಲೆ, ಶಿಲ್ಪಕಲಾ ಪ್ರದರ್ಶನದ ವಿವರವನ್ನು ಡಿಸಿ ಅವರು ಪಡೆದರು. ಕಲಾವಿದರ ಆಯ್ಕೆ ಸಮಿತಿಗೆ ಸಂಬಂ ಸಿದಂತೆ ಈ ಸಂದರ್ಭದಲ್ಲಿ ಚರ್ಚೆ ನಡೆಯಿತು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವ ಕುರಿತ ಅಭಿಪ್ರಾಯಗಳು ವ್ಯಕ್ತವಾದವು. ಹೊಸಪೇಟೆಯಲ್ಲಿ ಶ್ವಾನ ಪ್ರದರ್ಶನ, ವಸಂತ ವೈಭವ ಕಾರ್ಯಕ್ರಮಗಳು ಜರುಗಲಿವೆ. ಫಲಪುಷ್ಪ ಪ್ರದರ್ಶನ, ಗುಲಾಬಿ ಉದ್ಯಾನವನ, ಸ್ಯಾಂಡ್‌ ಆರ್ಟ್‌, ಮತ್ಸ್ಯ ಮೇಳ, ಚಿತ್ರಸಂತೆ ಈ ಬಾರಿ ಗಮನಸೆಳೆಯಲಿವೆ ಎಂದು ಅವರು ವಿವರಿಸಿದರು.

Advertisement

ಈ ಸಭೆಯಲ್ಲಿ ಜಿಪಂ ಸಿಇಒ ಕೆ.ನಿತೀಶ್‌, ಅಪರ ಜಿಲ್ಲಾಧಿಕಾರಿ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ, ಡಿಯುಡಿಸಿ ಯೋಜನಾ ನಿರ್ದೇಶಕ ರಮೇಶ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮೋತಿಲಾಲ್‌ ಲಮಾಣಿ, ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next