ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಭಾನುವಾರ ಇಡೀ ದಿನ ಲಾಕ್‌ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಸೇರಿ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಳ್ಳಾರಿ ಸೇರಿ ರಾಜ್ಯದಲ್ಲೂ ಕೋವಿಡ್ ಸೋಂಕಿತರ ಪ್ರಮಾಣ ದಿನೇದಿನೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನಜಾವ 5 ಗಂಟೆವರೆಗೆ ಲಾಕ್ ಡೌನ್ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಸಾರಿಗೆ ಬಸ್, ಪ್ರಯಾಣಿಕ ವಾಹನಗಳಾದ ಆಟೋ, ಟ್ಯಾಕ್ಸಿ, ಟಂಟಂ ವಾಹನಗಳು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದವು. ಸಾರಿಗೆ ಬಸ್‌ಗಳು ನಿಲ್ದಾಣದಲ್ಲಿ ನಿಲುಗಡೆಯಾಗಿದ್ದವು. ಅಲ್ಲೊಂದು ಇಲ್ಲೊಂದು ಪ್ರಯಾಣಿಕ ಆಟೋಗಳು ಸಂಚರಿಸುತ್ತಿರುವುದು, ದ್ವಿಚಕ್ರ ವಾಹನಗಳಲ್ಲಿ ಸಾರ್ವಜನಿಕರು ತರಕಾರಿ, ದಿನಸಿ ವಸ್ತುಗಳ ಖರೀದಿಗಾಗಿ ಬೆಳಗ್ಗೆ ಒಂದಷ್ಟು ತಿರುಗಾಡುತ್ತಿರುವುದನ್ನು ಹೊರತುಪಡಿಸಿದರೆ ಮಧ್ಯಾಹ್ನದ ನಂತರ ಸಂಪೂರ್ಣವಾಗಿ ಇಡೀನಗರ ಸ್ತಬ್ಧಗೊಂಡಿತ್ತು.
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರದ ಬೆಂಗಳೂರು ರಸ್ತೆ, ಗ್ರಾಹಂ ರಸ್ತೆ, ತೇರುಬೀದಿ, ಬ್ರಾಹ್ಮಣ ಬೀದಿ ರಸ್ತೆ, ಗಡಗಿ ಚನ್ನಪ್ಪ ವೃತ್ತ, ಎಚ್‌ಆರ್ ಗವಿಯಪ್ಪ ವೃತ್ತ, ಇಂದಿರಾ ವೃತ್ತ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳು ವಾಹನಗಳ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಇನ್ನು ನಗರದಲ್ಲಿನ ವರ್ತಕರು ಜುಲೈ 11ರವರೆಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಸ್ವಯಂಪ್ರೇರಣೆಯಿಂದ ವಾಣಿಜ್ಯ ಮಳಿಗೆಗಳನ್ನು ಮುಚ್ಚುವುದಾಗಿ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಭಾನುವಾರದ ಲಾಕ್‌ಡೌನ್ ನಿಮಿತ್ತ ಅಗತ್ಯ ವಸ್ತುಗಳ ಮಳಿಗೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು ಶನಿವಾರ ರಾತ್ರಿಯಿಂದಲೇ ಬಂದ್ ಮಾಡಿ ಲಾಕ್ ಡೌನ್‌ಗೆ ಸಹಕಾರ ನೀಡಲಾಗಿತ್ತು.
ಪೊಲೀಸ್ ಬಂದೋಬಸ್ತ್: ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಲುವಾಗಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಇದಕ್ಕಾಗಿ 5 ಡಿವೈಎಸ್ ಪಿ, 23 ಸಿಪಿಐ, 66 ಪಿಎಸ್‌ಐ, 255 ಎಎಸ್‌ಐ, 701 ಹೆಡ್ ಕಾನ್‌ಸ್ಟೆàಬಲ್, 1198 ಪೊಲೀಸ್ ಪೇದೆ, 6 ಡಿಎಆರ್ ತುಕಡಿ, 250 ಗೃಹರಕ್ಷಕ ಸಿಬ್ಬಂದಿ ಸೇರಿ ಒಟ್ಟು 2000 ಸಿಬ್ಬಂದಿಗಳನ್ನು ನಿಯೋಜಿಸಿ ಎಸ್‌ಪಿ ಸಿ.ಕೆ. ಬಾಬಾ ಆದೇಶ ಹೊರಡಿಸಿದ್ದಾರೆ.
ಬಿಸಿಮುಟ್ಟಿಸಿದ ಪೊಲೀಸರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ ಸಾರ್ವಜನಿಕರು ವಿನಾಕಾರಣ ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದ ದೃಶ್ಯ ಕಂಡುಬಂತು. ಇದರಿಂದ ಆರಂಭದಲ್ಲಿ ಒಂದಷ್ಟು ವಾಹನಗಳ ಸವಾರರಿಗೆ ತಿಳಿಹೇಳಿ ಮನೆಗಳಿಗೆ ಕಳುಹಿಸಿದ ಪೊಲೀಸರು ನಂತರ ದಂಡ ವಿಧಿಸಿ ವಾಹನಗಳನ್ನು ಸೀಜ್ ಮಾಡಲು ಮುಂದಾದರು. ಗುರುಪೂರ್ಣಿಮೆಯಾಗಿದ್ದರಿಂದ ಮಾಂಸದ ಮಾರುಕಟ್ಟೆ, ಮಾಂಸದ ಅಂಗಡಿಗಳಿಗೆ ಜನರಿಲ್ಲದೇ ಬಿಕೋ ಎನ್ನುತ್ತಿತ್ತು.