ಬಳ್ಳಾರಿ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಸಲಾಗಿರುವ ಆಕ್ಷೇಪಣೆಗಳನ್ನು ಜ. 27ರೊಳಗಾಗಿ ವಿಲೇವಾರಿ ಮಾಡಿ, ಫೆ. 7ರಂದು ಅಂತಿಮ ವಿಶೇಷ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗ ನಿಯೋಜಿಸಿರುವ ಮತದಾರರ ಪಟ್ಟಿ ವೀಕ್ಷಕರು, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ವಿಶೇಷ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಈಗಾಗಲೇ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಜ.27ರೊಳಗೆ ವಿಲೇವಾರಿ ಮಾಡಲಾಗುತ್ತದೆ. ಫೆ. 7ರಂದು ಅಂತಿಮ ವಿಶೇಷ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಇದುವರೆಗೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂ ಧಿಸಿದಂತೆ ಜಿಲ್ಲಾಡಳಿತದ ವತಿಯಿಂದ ಕೈಗೊಂಡಿರುವ ಕ್ರಮಗಳು, ಮಿಂಚಿನ ನೋಂದಣಿ ಅಭಿಯಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಹಾಯಕ ಆಯುಕ್ತರು, ತಹಶೀಲ್ದಾರ್‌ರು, ಚುನಾವಣಾ ಸಿಬ್ಬಂದಿಯೊಂದಿಗೆ ಚರ್ಚಿಸಿದರು ಮತ್ತು ಅಗತ್ಯ ಮಾಹಿತಿ ಪಡೆಯುವುದರ ಜತೆಗೆ ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
9047 ಅರ್ಜಿ ಸ್ವೀಕಾರ: ಜ. 6ರಿಂದ 10ರವರೆಗೆ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ನಡೆಸಲಾಗಿದ್ದು, ಈ ಅವಧಿ ಯಲ್ಲಿ ಜಿಲ್ಲೆಯಲ್ಲಿ 9047 ಅರ್ಜಿಗಳು ಸ್ವೀಕೃತವಾಗಿವೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 1571, ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 1465, ಹಡಗಲಿ ಕ್ಷೇತ್ರದಲ್ಲಿ 1380 ಜನರು ಸೇರಿದಂತೆ ಒಟ್ಟು 9047 ಜನರು ಮಿಂಚಿನ ನೋಂದಣಿ ಅಭಿಯಾನದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಸಭೆಗೆ ವಿವರಿಸಿದರು.
ಮತದಾರರ ಪಟ್ಟಿಯಲ್ಲಿ ಎರಡು ಕಡೆ ಒಂದೇ ತರಹ ನಮೂದಾಗಿರುವ 1285 ಜನರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅವರು ಯಾವುದನ್ನು ಆಯ್ಕೆ ಮಾಡುತ್ತಾರೆ ಅದನ್ನು ಬಿಟ್ಟು ಉಳಿದ ಚುನಾವಣಾ ಗುರುತಿನ ಚೀಟಿಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದರು. ಸಣ್ಣ ಪುಟ್ಟ ದೋಷಗಳು, ಹೆಸರು ಬದಲಾವಣೆ, ಅಂಕಿ-ಸಂಖ್ಯೆ ಸೇರಿದಂತೆ ಕೆಲ ಬದಲಾವಣೆಗಳು ಮತ್ತು ಲಾಜಿಕಲ್ ಎರರ್ ಕೋರಿ 261 ಅರ್ಜಿಗಳು ಇದುವರೆಗೆ ದಾಖಲಾಗಿದ್ದು, ಅವುಗಳಲ್ಲಿ 151 ಸರಿಪಡಿಸಲಾಗಿದೆ.
ಉಳಿದವುಗಳನ್ನು ಶೀಘ್ರ ಸರಿಪಡಿಸಲಾಗುವುದು. ವಿಶೇಷ ಕರಡು ಮತದಾರರ ಪಟ್ಟಿಯನ್ನು ನೋಂದಾಯಿತ ರಾಜಕೀಯ ಪಕ್ಷಗಳಿಗೆ ಈಗಾಗಲೇ ನೀಡಲಾಗಿದೆಯೇ ಎಂಬ ಕುಮಾರ್ ನಾಯಕ್ ಕೇಳಿದ ಪ್ರಶ್ನೆಗೆ ಎಸಿ ರಮೇಶ ಕೋನರೆಡ್ಡಿ ಅವರು ಉತ್ತರಿಸಿದರು.
ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತ ವ್ಯತ್ಯಾಸವಿರುವ ಕಡೆ ಸಹಾಯಕ ಆಯುಕ್ತರು, ತಹಶೀಲ್ದಾರ್‌ರು ವಿಶೇಷ ಮುತುವರ್ಜಿ ವಹಿಸಿ ಪರಿಶೀಲಿಸಬೇಕು. ಜನಸಂಖ್ಯೆಯ ಲಿಂಗಾನುಪಾತಕ್ಕೂ ಮತ್ತು ಮತದಾರರ ಪಟ್ಟಿಯ ಲಿಂಗಾನುಪಾತಕ್ಕೂ ವ್ಯತ್ಯಾಸಗಳಿದ್ದು, ಹೋಲಿಕೆ ಮಾಡಿ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ವೀಕ್ಷಕ ಕುಮಾರನಾಯಕ್ ಅವರು ಸೂಚನೆ ನೀಡಿದರು. ಸಭೆಯಲ್ಲಿ ಸಹಾಯಕ ಆಯುಕ್ತ ಪ್ರಸನ್ನ, ಹವಾಮಾ ಆಯುಕ್ತ ಪಿ.ಎನ್.ಲೋಕೇಶ್, ತಹಸೀಲ್ದಾರರು, ಚುನಾವಣಾ ಸಿಬ್ಬಂದಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.