Advertisement

ಫಾಸ್ಟಾಗ್‌ ವಿತರಣೆ ಚುರುಕು

01:07 PM Nov 25, 2019 | Team Udayavani |

ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ಕೇಂದ್ರ ಸರ್ಕಾರ ಡಿಸೆಂಬರ್‌ 1 ರಿಂದ ಜಾರಿಗೆ ತರಲು ಉದ್ದೇಶಿಸಿರುವ “ಫಾಸ್ಟಾಗ್‌’ ಸಿಸ್ಟ್‌ಂಗೆ ಅಳವಡಿಕೆಗೆ ಜಿಲ್ಲೆಯಲ್ಲಿ ಸಿದ್ಧತೆ ನಡೆದಿದೆ. ಹೊಸಪೇಟೆ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಳೆದ ನವೆಂಬರ್‌ 1ರಿಂದ “ಫಾಸ್ಟಾಗ್‌’ ವಿತರಿಸಲಾಗುತ್ತಿದ್ದು ಟೋಲ್‌ ಗೇಟ್‌ ಗಳನ್ನು ಮಾನವರಹಿತವಾಗಿ ಮುನ್ನಡೆಸುವುದರ ಜತೆಗೆ ಅಲ್ಲಿ ನಡೆಯುತ್ತಿದ್ದ ಅಕ್ರಮ, ಅವ್ಯವಹಾರಕ್ಕೆ ಬ್ರೇಕ್‌ ಹಾಕಲು ಮುಂದಾಗಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ಗ‌ಳಲ್ಲಿ ಟೋಲ್‌ ಶುಲ್ಕ ನೆಪದಲ್ಲಿ ಅಕ್ರಮ, ಅವ್ಯವಹಾರ ನಡೆಯುತ್ತಿತ್ತು. ನಿಗದಿತಕ್ಕಿಂತಲೂ ಹೆಚ್ಚು ಟೋಲ್‌ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ವಾಹನಗಳ ಸಂಖ್ಯೆ ಅದಲು-ಬದಲು ಮಾಡಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಈ ಎಲ್ಲ ಅವ್ಯವಹಾರಗಳ ನಡುವೆ ವಾಹನಗಳ ದಟ್ಟಣೆಯೂ ಹೆಚ್ಚಾಗಿ ಪ್ರಯಾಣಿಕರ ಸಮಯ ವ್ಯರ್ಥ, ವಿಳಂಬಕ್ಕೂ ಕಾರಣವಾಗುತ್ತಿತ್ತು.

ಜತೆಗೆ ವಾಹನಗಳು ಹೆಚ್ಚಿನ ಸಮಯ ನಿಂತಲ್ಲೇ ನಿಲ್ಲುವ ಮೂಲಕ ಅಲ್ಲಿನ ಪರಿಸರ ಮಾಲಿನ್ಯಕ್ಕೂ ಒಂದು ರೀತಿಯಲ್ಲಿ ಕಾರಣವಾಗುತ್ತಿತ್ತು. ಆದರೆ, ಇವೆಲ್ಲವುಗಳಿಗೆ ಬ್ರೇಕ್‌ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ ಹೊಸ ಮಾರ್ಗವನ್ನು ಕಂಡುಕೊಂಡಿದೆ. ಎಲ್ಲ ಟೋಲ್‌ಗ‌ಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ರೀಡರ್‌ಗಳನ್ನು ಅಳವಡಿಸಿ, ವಾಹನಗಳಿಗೆ ಅಂಟಿಸಲು “ಫಾಸ್ಟಾಗ್‌’ಗಳನ್ನು ವಿತರಿಸಲು ಮುಂದಾಗಿದ್ದು, ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಟೋಲ್‌ಗೇಟ್‌ನಲ್ಲೂ ಸಹ ವಾಹನಗಳ ಮಾಲೀಕರಿಗೆ “ಫಾಸ್ಟಾಗ್‌’ಗಳನ್ನು ವಿತರಿಸುವ ಕಾರ್ಯ ನವೆಂಬರ್‌ 1ರಿಂದ ಚಾಲನೆ ಪಡೆದುಕೊಂಡಿದೆ.

ಏನಿದು ಫಾಸ್ಟಾಗ್‌?: ಇಷ್ಟು ವರ್ಷಗಳ ಕಾಲ ಮಾನವ ಸಹಿತವಾಗಿ ಕಾರ್ಯನಿರ್ವಹಿಸುತ್ತಿದ್ದ ಟೋಲ್‌ಗೇಟ್‌ಗಳು ರೀಡರ್‌ ಅಳವಡಿಕೆ, ಫಾಸ್ಟಾಗ್‌ಗಳ ಮೂಲಕ ಮಾನವ ರಹಿತವಾಗಿ ಕಾರ್ಯನಿರ್ವಹಿಸಲಿವೆ. ಮಾಲೀಕರು “ಫಾಸ್ಟಾಗ್‌ ‘ಗಳನ್ನು ತಮ್ಮ ವಾಹನದ ಮುಂದಿನ ಗಾಜಿನ ಮೇಲೆ ಅಂಟಿಸಬೇಕು. ಈ ಫಾಸ್ಟಾಗ್‌ ಅತ್ಯಾಧುನಿಕ ಮೈಕ್ರೋ ತಂತ್ರಜ್ಞಾನವನ್ನು ಹೊಂದಿದೆ. ವಾಹನ 10 ಮೀಟರ್‌ ದೂರದಲ್ಲಿರುವಾಗಲೇ ಟೋಲ್‌ ಗೇಟ್‌ನಲ್ಲಿನರುವ ರೀಡರ್‌ ವಾಹನದ ಮೇಲಿನ ಫಾಸ್ಟಾಗ್‌ನ್ನು ರೀಡ್‌ ಮಾಡುತ್ತಿದ್ದಂತೆ ಟೋಲ್‌ ಶುಲ್ಕ ಆನ್‌ಲೈನ್‌ ಮೂಲಕವೇ ವರ್ಗಾವಣೆಯಾಗಿ ಗೇಟ್‌ಗಳು ತೆರೆದುಕೊಳ್ಳಲಿವೆ. ಕೂಡಲೇ ಮೊಬೈಲ್‌ ಗಳಿಗೆ ಸಂದೇಶ ರವಾನೆಯಾಗಲಿದೆ. ಟೋಲ್‌ ನಲ್ಲಿ ಎಷ್ಟು ಬಾರಿ ಸಂಚರಿಸಿದರೂ ಅಷ್ಟು ಬಾರಿ ಶುಲ್ಕವೂ ಕಡಿತವಾಗಲಿದೆ. ಈ ಎಲ್ಲ ಪ್ರಕ್ರಿಯೆಯು ಮಾನವ ರಹಿತವಾಗಿಯೇ ನಡೆಯಲಿದೆ.

Advertisement

ಇದರಿಂದ ಟೋಲ್‌ಗೇಟ್‌ನಲ್ಲಿ ವಾಹನ ದಟ್ಟಣೆ ನಿಯಂತ್ರಣವಾಗಲಿದೆ. ಪ್ರಯಾಣಿಕರ ಸಮಯ ಉಳಿಯಲಿದೆ. ಅಕ್ರಮ, ಅವ್ಯವಹಾರಗಳಿಗೂ ಬ್ರೇಕ್‌ ಬೀಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾ ಕಾರದ ಯೋಜನಾ ನಿರ್ದೇಶಕ ಅಜಯ್‌ ಮಣಿಕುಮಾರ್‌ ಸ್ಪಷ್ಟಪಡಿಸಿದರು.ಜಿಲ್ಲೆಯ ಹೊಸಪೇಟೆಯಲ್ಲಿನ ಎನ್‌ ಎಚ್‌ 50ರಲ್ಲಿನ ಟೋಲ್‌ಗೇಟ್‌ನಲ್ಲಿ ಫಾಸ್ಟಾಗ್‌ ವಿತರಣಾ ಕಾರ್ಯ ಈಗಾಗಲೇ ನಡೆಯುತ್ತಿದೆ.

ಕಳೆದ ನವೆಂಬರ್‌ 1 ರಿಂದ ಮೂರು ಟೋಲ್‌ ಗೇಟ್‌ಗಳಲ್ಲಿ 85 ವಾಹನಗಳಿಗೆ ಫಾಸ್ಟಾಗ್‌ಗಳನ್ನು ವಿತರಿಸಲಾಗಿದೆ. ಶೇ.100 ರಷ್ಟು ಗುರಿ ತಲುಪುವ ನಿರೀಕ್ಷೆಯಿದೆ. ಆದರೆ, ಡಿಸೆಂಬರ್‌ 1ರೊಳಗಾಗಿ ಈ ರಸ್ತೆಯಲ್ಲಿ ಸಂಚರಿಸುವ ಶೇ. 50ರಷ್ಟು ವಾಹನಗಳಿಗೆ ವಿತರಿಸಲಾಗುವುದು. ಈ ಟೋಲ್‌ಗ‌ಳಲ್ಲಿ ಪ್ರತಿದಿನ ಸರಾಸರಿ 8 ಸಾವಿರದಿಂದ 10 ಸಾವಿರ ವಾಹನಗಳು ಸಂಚರಿಸಲಿದೆ. ನಾಲ್ಕು ಚಕ್ರ ವಾಹನಗಳಿಗೆ 50 ರೂ, ಸರಕು ಸಾಗಿಸುವ ಲಘು ವಾಹನ, 6 ಚಕ್ರದ ವಾಹನಗಳಿಗೆ 80 ರೂ, ಬಸ್‌, ಟ್ರಕ್‌ಗಳಿಗೆ 170 ರೂ, ಭಾರಿ ವಾಹನಗಳಿಗೆ 265, ಓವರ್‌ಸೈಜ್‌ ವಾಹನಗಳಿಗೆ 320 ರೂ. ಟೋಲ್‌ ಶುಲ್ಕವನ್ನು ಪಡೆಯಲಾಗುತ್ತಿದೆ. ಇದೀಗ ಫಾಸ್ಟಾಗ್‌ ಅಳವಡಿಕೆಯಿಂದಾಗಿ ಇನ್ನಷ್ಟು ಅನುಕೂಲವಾಗಲಿದೆ ಎಂದವರು ಸ್ಟಪಡಿಸಿದ್ದಾರೆ.

ದುಪ್ಪಟ್ಟು ಶುಲ್ಕ ವಸೂಲಿ: ಡಿಸೆಂಬರ್‌ ಒಂದರಿಂದ ಫಾಸ್ಟಾಗ್‌ನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಒಂದುವೇಳೆ ಫಾಸ್ಟಾಗ್‌ ಅಳವಡಿಕೆ ಇಲ್ಲದಿದ್ದಲ್ಲಿ ವಾಹನಗಳಿಂದ ದುಪ್ಪಟ್ಟು ಶುಲ್ಕು ವಸೂಲಿ ಮಾಡುವಂತೆ ಕೇಂದ್ರ ಸರ್ಕಾರವೇ ಸೂಚಿಸಿದೆ. ಕ್ರೆಡಿಟ್‌, ಡೆಬಿಟ್‌ ಕಾರ್ಡ್‌, ಯುಪಿಐ ಮತ್ತು ಇತರ ಜನಪ್ರಿಯ ವಿಧಾನಗಳಿಂದ ಪುನರ್‌ ಭರ್ತಿ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next