ಬಳ್ಳಾರಿ: ದುಡಿಯಲು ವಲಸೆ ಹೋಗಿ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಬಂದು ಆರ್ಥಿಕ ಸಂಕಷ್ಟ ಎದುರಿಸಿದ್ದ ಜಿಲ್ಲೆಯ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ.
ಲಾಕ್‌ಡೌನ್ ಅವಧಿಯಲ್ಲೂ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳನ್ನು ಹಿಂದಿಕ್ಕಿರುವ ಗಣಿನಾಡು ಬಳ್ಳಾರಿ ಜಿಲ್ಲೆ ನಂ.1 ಪಟ್ಟವನ್ನು ಅಲಂಕರಿಸಿದೆ. ಹಲವು ವರ್ಷಗಳ ಕಾಲ ಬೆಂಗಳೂರು ಸೇರಿ ಬೃಹತ್ ನಗರಗಳಿಗೆ ಹೋಗಿದ್ದ ಗ್ರಾಮೀಣ ಭಾಗದ ಬಹುತೇಕ ಜನರು ಕೊರೊನಾ ಸೋಂಕು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕರು ವಾಪಸ್ ತಮ್ಮ ಗ್ರಾಮಗಳಿಗೆ ಬಂದಿದ್ದಾರೆ.
ಇಲ್ಲಿಯೂ ಲಾಕ್‌ಡೌನ್ ಇರುವುದರಿಂದ ಎಲ್ಲ ಕ್ಷೇತ್ರಗಳು ಬಂದ್ ಆಗಿ ನಗರ ಪ್ರದೇಶಗಳಲ್ಲೂ ಕೆಲಸವಿಲ್ಲದ ಸಮಸ್ಯೆ ಎದುರಿಸುತ್ತಿದ್ದ ಗ್ರಾಮೀಣ ಭಾಗದ ವಲಸೆ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ. ನವ ನಿರುದ್ಯೋಗಿಗಳ ಪಾಲಿಗೆ ವರದಾನವಾಗಿದ್ದು, ಜಿಲ್ಲೆಯ ಅಧಿಕಾರಿಗಳು ಸಹ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳುವಲ್ಲಿ ದುಡಿವ ಕೈಗಳಿಗೆ ಕೆಲಸದ ಜೊತೆಗೆ ಸಮಯಕ್ಕೆ ಸರಿಯಾಗಿ ಕೂಲಿಯನ್ನೂ ನೀಡುವ ಮೂಲಕ ಅವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಇದನ್ನು ಗಮನಿಸಿರುವ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತಾಲಯ ಉದ್ಯೋಗ ಖಾತ್ರಿ ಯೋಜನೆಯಡಿ ಗಣಿನಾಡು ಬಳ್ಳಾರಿ ನಂ.1 ಸ್ಥಾನದಲ್ಲಿದೆ ಎಂದು ಘೋಷಣೆ ಮಾಡಿದೆ. ಜತೆಗೆ ಜಿಲ್ಲೆಯ ಪ್ರಗತಿ ಕಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಗದಿಗಿಂತಲೂ ಹೆಚ್ಚು ಮಾನವ ದಿನಗಳು: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಜೂನ್ ತಿಂಗಳವರೆಗೆ 28 ಲಕ್ಷ ಮಾನವ ದಿನ ಸೃಜನೆಯ ಗುರಿ ನೀಡಲಾಗಿತ್ತು. ಇದನ್ನು ಮೀರಿದ ಜಿಲ್ಲಾ ಪಂಚಾಯತ್ ಅ ಧಿಕಾರಿಗಳು ಒಟ್ಟಾರೆ 33,97,526 ಮಾನವ ದಿನ ಸೃಜಿಸಿ, ಶೇ.118ರಷ್ಟು ಸಾಧನೆ ಮೆರೆದಿದ್ದಾರೆ. ಒಟ್ಟಾರೆ 1,00,225 ದುಡಿಯುವ ಕೈಗಳಿಗೆ ಉದ್ಯೋಗ ನೀಡಿದ್ದಾರೆ. 3,566 ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ನಿಗದಿತ ಗುರಿ ಸಾಧನೆಯಲ್ಲಿ 125.38ರಷ್ಟು ಅಂಕ ಸಂಪಾದಿಸಿದೆ. ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡುವ ವಿಷಯದಲ್ಲಿ ಶೇ.99.87ರಷ್ಟು ಸಾಧನೆ ತೋರಿದೆ. ಕೈಗೆತ್ತಿಕೊಂಡ ಕಾಮಗಾರಿ ಪೂರ್ಣಗೊಳಿಸುವಲ್ಲಿ ಶೇ.98.28ರಷ್ಟು ಸಾಧನೆ ತೋರಿದೆ.
ತೋಟಗಾರಿಕೆ, ಅರಣ್ಯ ಇಲಾಖೆ, ಕೃಷಿ ಇಲಾಖೆ ಮೂಲಕ ಕಾಮಗಾರಿ ಕೈಗೊಳ್ಳುವಲ್ಲೂ ಸಹ ಜಿಲ್ಲಾಡಳಿತ ಉತ್ತಮ ಸಾಧನೆ ತೋರಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಆಯುಕ್ತಾಲಯ 5.84ರಷ್ಟು ಅಂಕ ನೀಡಿದೆ. ಆಸ್ತಿಗಳನ್ನು ಜಿಪಿಎಸ್ ಮಾಡುವ ವಿಚಾರ, ವೇತನ ಪಾವತಿ ಮತ್ತು ಮಟರಿಯಲ್ ಬಿಲ್ ಪಾವತಿ ವಿಷಯದಲ್ಲಿ ಶೇ.95.68ರಷ್ಟು ಸಾಧನೆ ತೋರಿರುವ ಜಿಪಂ ಒಟ್ಟಾರೆ 89.99ರಷ್ಟು ಸಾಧನೆ ತೋರಿ ನಂ.1. ಎನ್ನಿಸಿಕೊಂಡಿದೆ. ಶೇ.89.68ರಷ್ಟು ಸಾಧನೆ ತೋರಿರುವ ರಾಮಗನರ ಜಿಲ್ಲೆ 2ನೇ ಸ್ಥಾನ, ಶೇ.88.06 ಅಂಕ ಗಳಿಸಿರುವ ಉತ್ತರ ಕನ್ನಡ ಮೂರನೇ ಸ್ಥಾನದಲ್ಲಿದೆ. ನೆರೆಯ ರಾಯಚೂರು ಜಿಲ್ಲೆ 5ನೇ ಸ್ಥಾನದಲ್ಲಿದೆ.
ವೆಂಕೋಬಿ ಸಂಗನಕಲ್ಲು