ಬಳ್ಳಾರಿ: ನನ್ನ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿ ಮಾಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವೆ ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಭರವಸೆ ನೀಡಿದರು.
ಇಲ್ಲಿನ 17ನೇ ವಾರ್ಡ್ ವ್ಯಾಪ್ತಿಯ ವಿಶಾಲ್‌ನಗರದಲ್ಲಿ ಭಾನುವಾರ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ನಗರದ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನನ್ನ ಅವ ಧಿಯಲ್ಲಿ ನಗರವನ್ನು ಸುಂದರ ಹಾಗೂ ಸ್ವತ್ಛ ನಗರವನ್ನಾಗಿ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೇನೆ. ಅದಕ್ಕೆ ನಗರದ ಜನರ ಸಹಕಾರ ಅಗತ್ಯವಾಗಿದೆ ಎಂದರು.
ನಗರದ 17ನೇ ವಾರ್ಡ್‌ನ ವಿಶಾಲ್ ನಗರ ಬಡಾವಣೆಯ ಸ್ವಚ್ಛತೆಗೆ ಹಾಗೂ ಅಭಿವೃದ್ಧಿಗೆ ಇಲ್ಲಿವರೆಗೆ ಸಾಕಷ್ಟು ಶ್ರಮಿಸಿರುವೆ. ನಾಗರಿಕರಿಗೆ ಅನುಕೂಲವಾಗಲೆಂದು 400 ಮೀಟರ್ ಉದ್ದದ 25ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿರುವೆ. ಬರುವ ದಿನಗಳಲ್ಲಿ ಇನ್ನೂ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರು ಕಾಟಾಚಾರಕ್ಕೆ ಎನ್ನುವಂತೆ ಕಾಮಗಾರಿ ಪೂರ್ಣಗೊಳಿಸದೇ ಗುಣಮಟ್ಟದಿಂದ ಕೂಡಿರಬೇಕು. ಯಾವುದೇ ಕಾರಣಕ್ಕೂ ಕಳಪೆಯಾಗಬಾರದು. ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಕೂಡಲೇ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದವರು ಎಚ್ಚರಿಸಿದರು.
ಬಡಾವಣೆಯ ನಾಗರಿಕರು ಸ್ವತ್ಛತೆಗೆ ಪ್ರತಿಯೊಬ್ಬರೂ ಮೊದಲ ಆದ್ಯತೆ ನೀಡಬೇಕು. ನಮ್ಮ ಪರಿಸರ ಸ್ವತ್ಛವಾಗಿದ್ದರೆ, ಆವರಿಸುವ ನಾನಾ ಖಾಯಿಲೆಗಳು ದೂರವಾಗಲಿವೆ. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲೇ ಎಸೆಯದೆ, ಪಾಲಿಕೆ ವಾಹನದಲ್ಲೇ ತ್ಯಾಜ್ಯ ವಸ್ತುಗಳನ್ನು ವಿಲೇವಾರಿಮಾಡಬೇಕು. ಇದರಿಂದ ನಗರವು ಸುಂದರವಾಗಿರುವುದರ ಜೊತೆಗೆ ಆವರಿಸುವ ನಾನಾ ಕಾಯಿಲೆಗಳು ದೂರವಾಗಲಿವೆ ಎಂದು ವಿವರಿಸಿದರು.
ನಿಗದಿತ ಅವಧಿಯಲ್ಲಿ ನಾಗರಿಕರಿಗೆ ಶುದ್ಧ ಕುಡಿವ ನೀರು ಸರಬರಾಜು ಆಗಬೇಕು, ನಾನಾ ನೆಪ ಹೇಳಿದರೇ ಕೇಳ್ಳೋಲ್ಲ ನಾಗರಿಕರಿಂದ ದೂರುಗಳು ಬಂದಲ್ಲಿ ಕೂಡಲೇ ಕ್ರಮಕ್ಕೆ ಮುಂದಾಗುವೆ ಎಂದು ಸ್ಥಳದಲ್ಲಿದ್ದ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ವೀರಶೇಖರ ರೆಡ್ಡಿ, ಬಡಾವಣೆಯವ ವಿವಿಧ ಮುಖಂಡರು, ಪಾಲಿಕೆ ಅಧಿಕಾರಿಗಳು, ಎಂಜಿನಿಯರ್ ಇತರರಿದ್ದರು.