ಬಳ್ಳಾರಿ: ನರ್ಸಿಂಗ್ ಪರೀಕ್ಷೆ ಬರೆಯಲೆಂದು ವಿವಿಧ ರಾಜ್ಯಗಳಿಂದ ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳಲ್ಲಿ 68 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ದೇಶದ ಹರ್ಯಾಣ, ಬಿಹಾರ, ಪಂಜಾಬ್ ಸೇರಿ ವಿವಿಧ ರಾಜ್ಯಗಳಿಂದ 400ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೆಂದು ಕಳೆದ ಭಾನುವಾರ ನಗರಕ್ಕೆ ಆಗಮಿಸಿದ್ದರು. ರೈಲು ಮೂಲಕ ಆಗಮಿಸಿದ್ದ ಇವರು, ನಿಲ್ದಾಣದಿಂದ ಲಾಡ್ಜ್ ನತ್ತ ಸಾಮಾಜಿಕ ಅಂತರವಿಲ್ಲದೇ, ಗುಂಪು ಗುಂಪಾಗಿ ತೆರಳುತ್ತಿದ್ದನ್ನು ಗಮನಿಸಿದ ಸಂಚಾರಿ ಪೊಲೀಸರು, ಗಡಗಿ ಚೆನ್ನಪ್ಪ ವೃತ್ತದಲ್ಲಿ ತಡೆದು ವಿಚಾರಿಸಿದರು. ಎರಡು ಡೋಸ್ ಲಾಸಿಕೆ ಹಾಕಿಸಿಕೊಂಡಿರುವ ವರದಿ, ನೆಗೆಟಿವ್ ವರದಿ ತೋರಿಸುವಂತೆ ಕೇಳಿದಾಗ ಯಾರ ಬಳಿಯೂ ಸಮರ್ಪಕ ವರದಿಗಳು ಇಲ್ಲದಿರುವುದು ಪತ್ತೆಯಾಗಿತ್ತು.
ಇದನ್ನೂ ಓದಿ:ಚೀನಾದ “ಶೂನ್ಯ ಕೊರೊನಾ ಮಾದರಿ” ಎಷ್ಟು ಪರಿಣಾಮಕಾರಿ?
ಬೆರಳೆಣಿಕೆಯಷ್ಟು ಜನರಲ್ಲಿ ಲಸಿಕೆ ಹಾಕಿಸಿಕೊಂಡಿದ್ದ ವರದಿಯನ್ನು ಹೊರತುಪಡಿಸಿದರೆ, ಬಹುತೇಕರ ಬಳಿ ನೆಗೆಟಿವ್ ವರದಿ ಇರಲಿಲ್ಲ. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಆರೋಗ್ಯ ಇಲಾಖೆ ವಿದ್ಯಾರ್ಥಿಗಳು ತಂಗಿದ್ದ ಲಾಡ್ಜ್ ಗೆ ತೆರಳಿ ಕೋವಿಡ್ ಟೆಸ್ಟ್ ಮಾಡಿದ್ದು, ಅವರಲ್ಲಿ ಇಂದು 68 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಖಚಿತ ಪಡೆಸಿದೆ.
ಲಾಡ್ಜ್ ಗಳ ವಿರುದ್ಧ ಪ್ರಕರಣ: ಹೊರ ರಾಜ್ಯಗಳಿಂದ ಯಾರೇ ಬಂದರೂ ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರೂಮ್ ನೀಡಬೇಕು ಎಂಬ ನಿಯಮಗಳಿದ್ದರೂ, ಉಲ್ಲಂಘಿಸಿ ಹೊರ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಕೋವಿಡ್ ನೆಗೆಟಿವ್ ವರದಿ ಇರದಿದ್ದರೂ ರೂಮ್ ನೀಡಿರುವ ನಗರದ 8 ಲಾಡ್ಜ್ ಗಳ ವಿರುದ್ಧ ತಹಸೀಲ್ದಾರ್ ರೆಹಾನ್ ಪಾಶಾ ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರುವ ನರ್ಸಿಂಗ್ ಕಾಲೇಜುಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.