Advertisement

ಕೋವಿಡ್ ನಿಯಂತ್ರಣ ಭಿತ್ತಿಪತ್ರ ಬಿಡುಗಡೆ

04:21 PM Jun 20, 2020 | Team Udayavani |

ಬಳ್ಳಾರಿ: ಕೋವಿಡ್‌-19 ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಯಶಸ್ವಿಯಾಗಿ ಪೂರ್ಣಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸುರಕ್ಷಿತ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಪೋಷಕರು ಪಾಲಿಸಬೇಕು ಎಂದು ಜಿಪಂ ಸಿಇಒ ಕೆ.ನಿತೀಶ್‌ ಕೋರಿದರು.

Advertisement

ನಗರದ ಬಿಡಿಎಎ ಫುಟ್‌ಬಾಲ್‌ ಮೈದಾನದ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್‌ ಸ್ಥಾಪಿಸಲಾಗಿದೆ. ನಿಗದಿತ ಆರೋಗ್ಯ ತಪಾಸಣಾ ಕೌಂಟರ್‌ ಗಳು ಪರೀಕ್ಷೆ ನಡೆಯುವ ದಿನಗಳಂದು ಬೆಳಗ್ಗೆ 8.30ರಿಂದ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ತೆರೆದಿರುತ್ತವೆ. ಪ್ರತಿ ವಿದ್ಯಾರ್ಥಿಯು ಆರೋಗ್ಯ ತಪಾಸಣೆಗೆ ಒಳಪಡುವುದರಿಂದ ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರ ತಲುಪಬೇಕು. ನಿಗದಿತ ಕೌಂಟರ್‌ಗಳಲ್ಲಿ ಆರೋಗ್ಯ ತಪಾಸಣೆ ನಂತರವೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಒಳಗಡೆ ಪ್ರವೇಶ ನೀಡಲಾಗುವುದು. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವಿಶೇಷ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಬರೆಯುವ ಸಮಯದಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ವಿದ್ಯಾರ್ಥಿಗಳು ಮೇಲ್ವಿಚಾರಕರಿಗೆ ತಿಳಿಸಬೇಕು. 18ರಿಂದ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಡೆಸ್ಕ್  ಗಳ ನಡುವೆ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಲಾಗಿದೆ ಹಾಗೂ ಪ್ರತಿ ಡೆಸ್ಕ್  ನಲ್ಲಿ ಗರಿಷ್ಠ ಇಬ್ಬರು ವಿದ್ಯಾರ್ಥಿಗಳು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷಾ ಪ್ರಕ್ರಿಯೆ ನಡೆಯುವ ಅವಧಿಯಲ್ಲಿ ಶಿಕ್ಷಕರು/ಮೇಲ್ವಿಚಾರಕರು/ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಅಂತರ ಕಾಯ್ದುಕೊಳ್ಳಬೇಕು ಎಂದವರು ಸೂಚಿಸಿದರು. ಡಿಡಿಪಿಐ ಸಿ. ರಾಮಪ್ಪ, ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರ ಹಾಗೂ ಇತರ ಅಗತ್ಯ ಸಲಕರಣೆಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತೆಗೆದುಕೊಂಡು ಹೋಗುವ ಬಗ್ಗೆ ಪೋಷಕರು ಖಚಿತಪಡಿಸಿಕೊಳ್ಳಬೇಕು. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬರುವುದರಿಂದ ಪ್ರತ್ಯೇಕ ಆಹಾರದ ಡಬ್ಬಿ, ನೀರಿನ ಬಾಟಲು ಹಾಗೂ ಕರವಸ್ತ್ರವನ್ನು ಕಳುಹಿಸಿಕೊಡುವುದು. ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಪರೀಕ್ಷಾ ಕೇಂದ್ರಗಳನ್ನು ತಲುಪುವಂತೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ತೆರಳಿದ ನಂತರ ಪೋಷಕರು ಪರೀಕ್ಷಾ  ಕೇಂದ್ರದ ಹತ್ತಿರ ಗುಂಪು ಸೇರದೇ ತೆರಳಬೇಕು ಎಂದರು. ಈ ಸಂದರ್ಭದಲ್ಲಿ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next