Advertisement

ಮಾಸ್ಕ್ ಗಳ ಬೆಲೆ ಏರಿಸಿದರೆ ಕಠಿಣ ಕ್ರಮ: ಆಸೀಫ್‌

05:10 PM Mar 16, 2020 | Naveen |

ಬಳ್ಳಾರಿ/ಹೊಸಪೇಟೆ: ತಾಲೂಕಿನಾದ್ಯಂತ ಈಗಾಗಲೇ ಕೊರೊನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತಾಲೂಕು ಆಡಳಿತ ವತಿಯಿಂದ ಕೈಗೊಳ್ಳಲಾಗಿದೆ. ಅದರಂತೆ ಮೆಡಿಕಲ್‌ ಶಾಪ್‌ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಮಾಸ್ಕ್ ಗಳ ಕೃತಕ ಬೇಡಿಕೆ ಸೃಷ್ಟಿಸಿ ಬೆಲೆ ಏರಿಸುವುದು ಅಪರಾಧವಾಗಿದ್ದು, ಅಂಥ ಪ್ರಕರಣಗಳು ಕಂಡುಬಂದಲ್ಲಿ ಅಗತ್ಯ ಸರಕುಗಳ ಕಾಯ್ದೆ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದೆಂದು ಸಹಾಯಕ ಆಯುಕ್ತರಾದ ಶೇಖ್‌ ತನ್ವೀರ್‌ ಆಸೀಫ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಹೊಸಪೇಟೆಯ ತಾಲೂಕು ಕಚೇರಿಯ ಪತ್ರಿಕಾ ಭವನದಲ್ಲಿ ಭಾನುವಾರ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಖಾಸಗಿ ಸಂಸ್ಥೆಗಳ ಸದಸ್ಯರೊಂದಿಗೆ ಕೊರೊನಾ ವೈರಸ್‌ ಕುರಿತು ಏರ್ಪಡಿಸಿದ್ದ ಜಾಗೃತಿ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಾಗೂ ವಿಶ್ವಪಾರಂಪರಿಕ ತಾಣವಾದ ಹಂಪಿಯಲ್ಲಿ ಯಾವುದೇ ರೀತಿಯಾದ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ. ವಿದೇಶದಿಂದ ಆಗಮಿಸಿದ ಕೆಲ ಭಾರತೀಯರ ತಪಾಸಣೆಗಳನ್ನು ಮಾತ್ರ ನಡೆಸಲಾಗಿದೆ. ಅದೇ ರೀತಿಯಾಗಿ ಹಂಪಿಗೆ ಪ್ರವಾಸಿಗರಿಗೆ ಭೇಟಿ ನಿರ್ಬಂಧಿ ಸಲಾಗಿದ್ದು, ವೈರಸ್‌ ಹರಡದಂತೆ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳು ಕೈಗೊಂಡಿದೆ ಎಂದರು.

ಹಂಪಿಯ ವಿರೂಪಾಕ್ಷ ದೇವಸ್ಥಾನ, ವಿಜಯವಿಠuಲ ದೇವಸ್ಥಾನ ಆವರಣ, ಕಮಲಾಪುರದ ಹಳೇ ಪಂಚಾಯತ್‌ ರಾಜ್‌ ಇಲಾಖೆ ಕಚೇರಿ ಸೇರಿದಂತೆ ನಗರದ ರೈಲ್ವೆ ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಪ್ರವಾಸಿಗರ ನಿಷೇಧದ ಪರಿಣಾಮ ಹಂಪಿಯ 2 ಸ್ಕ್ರೀನಿಂಗ್‌ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ದೇವಸ್ಥಾನಗಳ ಪ್ರವೇಶಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಮಂಜಾಗ್ರತವಾಗಿ ಉತ್ಸವ, ಜಾತ್ರಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಮುಜರಾಯಿ ಇಲಾಖೆಗೆ ಸೂಚಿಸಲಾಗಿದೆ ಎಂದರು. ವಿದೇಶದಿಂದ ಮರಳಿ ಬಂದವರ ಪಟ್ಟಿ ಇನ್ನೂ ತಡವಾಗಿ ಸಿಗುವ ಕಾರಣ ಸಾರ್ವಜನಿಕರು ಖುದ್ದಾಗಿ ತಮ್ಮ ಸುತ್ತಮುತ್ತಲಿನಲ್ಲಿ ಕಾಣುವ ವಿದೇಶದಿಂದ ಬಂದ ಪ್ರವಾಸಿಗರ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದು ತಿಳಿಸಿದರು.

Advertisement

ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮಾದರಿಯಲ್ಲಿ ತಾಲೂಕು ಮಟ್ಟದಲ್ಲಿ ಸಹ ಸಹಾಯವಾಣಿ ತೆರೆದಿದ್ದು 08394-224208 ದಿನದ 24 ಗಂಟೆಯು ಸಹಾಯವಾಣಿಗೆ ಬರುವ ದೂರುಗಳಿಗೆ ತಕ್ಷಣ ಪ್ರತಿಕ್ರಿಯಿಸಿ ಪರಿಹಾರ ಸೂಚಿಸಲಾಗುತ್ತದೆ. ಸಾರ್ವಜನಿಕರು ವಿದೇಶ ದಿಂದ ಮರಳಿದವರ ಮಾಹಿತಿ ನೀಡಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ತಾಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಅನುಮಾನಾಸ್ಪದ ಲಕ್ಷಣ ಕಂಡುಬಂದವರ ತಪಾಸಣೆ ಹಾಗೂ ರಕ್ತಪರೀಕ್ಷೆ ಮಾತ್ರ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಭೀತಿ ಇಲ್ಲದೇ ಸುರಕ್ಷತೆ ಕಾಪಾಡಿ ವೈರಸ್‌ ಹರಡದಂತೆ ಕ್ರಮವಹಿಸಿ ಎಂದು ತಿಳಿಸಿದರು.

ತಹಶೀಲ್ದಾರ್‌ ವಿಶ್ವನಾಥ್‌, ಡಿವೈಎಸ್ಪಿ ವಿ. ರಘುಕುಮಾರ್‌, ನಗರಸಭೆ ಪೌರಾಯುಕ್ತೆ ಜಯಲಕ್ಷ್ಮೀ , ತಾಲೂಕು ವೈದ್ಯಾಧಿಕಾರಿ ಭಾಸ್ಕರ್‌, ಸರ್ಜನ್‌ ಸಲೀಂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next