ಬಳ್ಳಾರಿ: ಸಮಾಜದಲ್ಲಿ ಮಹಿಳೆಯರು ಸಮಾನತೆ ಸಾಧಿಸಲು ವಿದ್ಯಾವಂತರಾಗಬೇಕು. ಮಹಿಳೆಯರು ಶಿಕ್ಷಣ ಶಕ್ತಿಯಿಂದ ಮಾತ್ರ ಸಮಾನತೆಯನ್ನು ಸಾಧಿಸಲು ಸಾಧ್ಯ ಎಂದು ಎಮ್ಮಿಗನೂರು ಕ್ಷೇತ್ರದ ಜಿಪಂ ಸದಸ್ಯೆ ಬನಶಂಕರಿ ವೀರೇಂದ್ರರೆಡ್ಡಿ ಹೇಳಿದರು.
ಜಿಲ್ಲೆಯ ಎಮ್ಮಿಗನೂರು ಗ್ರಾಪಂ ಆವರಣದಲ್ಲಿ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಜಿಪಂ, ವಾರ್ತಾ ಇಲಾಖೆ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ತಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಎಮ್ಮಿಗನೂರು ಗ್ರಾಪಂ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರು ಸರ್ಕಾರ ಕಲ್ಪಿಸಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿ ಸಿದರೆ ಮಾತ್ರ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯ ಎಂದು ಹೇಳಿದರು. ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪನಿರ್ದೇಶಕ ಜಿ.ಡಿ. ಹಳ್ಳಿಕೇರಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾದಲ್ಲಿ ಮಾತ್ರ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲು ಸಾಧ್ಯವಾಗುತ್ತದೆ. ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ಪಡೆದು ಎಲ್ಲ ರಂಗಗಳಲ್ಲಿ ಮುನ್ನಡೆ ಸಾಧಿಸಲು ಪ್ರಯುತ್ನಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಎಸಿಡಿಪಿಓ ಮಾಲಾಂಭ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಪ್ರತಿಮಾ ಆರ್.ಲಕ್ಷ್ಮೀಕಾಂತರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಯಂಕಮ್ಮ ಗೋವಿಂದಪ್ಪ ಇದ್ದರು. ಜಿಲ್ಲಾ ಮಹಿಳಾ ಕಲ್ಯಾಣ ಅಧಿಕಾರಿ ರೂಪಾ, ಆರೋಗ್ಯ ಇಲಾಖೆಯ ನಂದ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜಾನಾಯ್ಕ ಅವರು ಮಾತನಾಡಿದರು.
ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಎನ್. ರಾಮಕೃಷ್ಣ ಸ್ವಾಗತಿಸಿ ದರು. ಶಾಲಾ ಶಿಕ್ಷಕ ಎಸ್. ರಾಮುಲು ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಸೈಕಲ್ ಜಾಥಾ, ಗ್ರಾಮೀಣ ಕ್ರೀಡಾ ಸ್ಪರ್ಧೆ, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು, ಗ್ರಾಪಂ ಸದಸ್ಯರುಗಳು ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.