Advertisement

Bellary: ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

04:44 PM Jan 04, 2025 | Team Udayavani |

ಬಳ್ಳಾರಿ: ಸಚಿನ್ ಪಾಂಚಾಳ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಬಸ್ ದರ ಏರಿಕೆಯನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ಅಲ್ಲಿಂದ ಬೃಹತ್ ಪ್ರತಿಭಟನೆ ನಡೆಸಿದರು. ರಸ್ತೆಯುದ್ದಕ್ಕೂ ಬಸ್ ದರ ಏರಿಕೆಯನ್ನು ಖಂಡಿಸಿದ್ದಲ್ಲದೆ, ಬೀದರ್‌ ನ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಗತ್ಯೆಗೆ ಕಾರಣರಾದ ಎನ್ನಲಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ರಾಜ್ಯ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆಗಳು, ರಾಜ್ ಸರ್ಕಾರಿ ಕುಮ್ಮಕ್ಕಿನ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಸರ್ಕಾರ, ಸಚಿವರು, ಆಡಳಿತ ಪಕ್ಷದ ಶಾಸಕರ ಕುಮ್ಮಕ್ಕಿನಿಂದ ಹಿಂದೆಂದೂ ಕಂಡರಿಯದಂತಹ ಸರಣಿ ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ಇದೀಗ ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಅಧಿಕಾರದ ಚುಕ್ಕಾಣಿ ಹೊಡಿದ ಬಳಿಕ ರಾಜ್ಯಕ್ಕೆ ಆತ್ಮಹತ್ಯೆ ಭಾಗ್ಯವನ್ನು ದಯ ಪಾಲಿಸಿದ್ದಾರೆ. ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ನಿಗಮದ ಅಕ್ರಮ ಬಹಿರಂಗವಾಗಿ ಮೊದಲ ಆತ್ಮಹತ್ಯೆ ನಡೆಯಿತು. ಬಿಜೆಪಿ ಹೋರಾಟದಿಂದ ಸವಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಸಲ್ಲಿಸಿದರು. ಬಳಿಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರನ್ನು ಬರೆದಿಟ್ಟು ರುದ್ರಣ್ಣ ಯಡವಣ್ಣವರ್ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ದಾವಣಗೆರೆಯಲ್ಲಿ ಬಾಕಿ ಹಣ ಸಿಗದೆ ಗುತ್ತಿಗೆದಾರರು ಅತ್ಮಹತ್ಯೆ ಮಾಡಿಕೊಂಡಿದ್ದರು. ಯಾದಗಿರಿಯಲ್ಲಿ ಸ್ಥಳೀಯ ಶಾಸಕನ ಪುತ್ರನ ಒತ್ತಡಕ್ಕೆ ಅಲ್ಲಿನ ಪಿಎಸ್ ಐ ಪರಶುರಾಮ್ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೇ, ಸಿದ್ದಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮೂಡ್, ಮಣಿಕಂಠ ರಾಠೋಡ್ ಸೇರಿ ಹಲವರ ಕೊಲೆಗೂ ಸಂಚು ರೂಪಿಸಿದ್ದಾಗಿ ಡೆತ್ ನೋಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ಸಿದ್ದಲಿಂಗ ಸ್ವಾಮೀಜಿ ಧ್ವನಿ ಅಡಗಿಸಲು ಮಹಾರಾಷ್ಟ್ರದ ಸುಪಾರಿ ಕಿಲ್ಲರ್ ಗಳನ್ನು ಬಳಸುವ ವಿಚಾರವೂ ಡೆತ್ ನೋಟ್ ನಲ್ಲಿದೆ. ಹಾಗಾಗಿ ಸಚಿನ್ ಪಾಂಚಾಳ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗುರುಲಿಂಗನಗೌಡ, ಹಿರಿಯ ಮುಖಂಡರಾದ ಮಹಿಪಾಲ್, ಮಲ್ಲನಗೌಡ, ಐನಾಥರೆಡ್ಡಿ, ಹೆಚ್.ಹನುಮಂತಪ್ಪ, ರಘು, ಮಲ್ಲೇಶ್ ಕುಮಾರ್, ಸುಗುಣಾ, ಷಣ್ಮುಖ ಸೇರಿದಂತೆ ಹಲವಾರು ಜನರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next