Advertisement

ಪಶುವೈದ್ಯೆ ಹತ್ಯಾಚಾರಿಗಳನ್ನು ಗಲ್ಲಿಗೇರಿಸಿ

01:31 PM Dec 06, 2019 | Naveen |

ಬಳ್ಳಾರಿ: ಹೈದ್ರಾಬಾದ್‌ನಲ್ಲಿ ಪಶುವೈದ್ಯೆ ಹತ್ಯೆ, ಅತ್ಯಾಚಾರವನ್ನುಖಂಡಿಸಿ ಹಂತಕರಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಗಡಗಿ ಚನ್ನಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದರು. ರಸ್ತೆಯುದ್ದಕ್ಕೂ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅತ್ಯಾಚಾರಿಗಳನ್ನು ಕೂಡಲೇ ಗಲ್ಲಿಗೆ ಏರಿಸಲು ಆದೇಶ ಹೊರಡಿಸುವಂತೆ ರಾಷ್ಟ್ರಪತಿಗಳಲ್ಲಿ ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಮೋರ್ಚಾದ ಜಿಲ್ಲಾಧ್ಯಕ್ಷೆ ಕೆ.ಶಶಿಕಲಾ, ಹೈದ್ರಾಬಾದ್‌ ಪಶುವೈದ್ಯೆ ಹತ್ಯೆ ಮಾನವ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಹಂತಕರನ್ನು ಕೂಡಲೇ ಗಲ್ಲಿಗೇರಿಸಬೇಕು. ಈ ನಿಟ್ಟಿನಲ್ಲಿ ದೇಶದ ರಾಷ್ಟ್ರಪತಿಗಳು ಸಹ ಕೂಡಲೇ ಆದೇಶ ಹೊರಡಿಸಬೇಕು. ಜತೆಗೆ ದೇಶದಲ್ಲಿ ಇನ್ನುಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನನ್ನು ರೂಪಿಸಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೇಶದ ಎಲ್ಲ ಮಹಿಳೆಯರಿಗೆ ಸೂಕ್ತ ಭದ್ರತೆ ದೊರೆಯುವ ನಿಟ್ಟಿನಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಶುವೈದ್ಯೆ ಹತ್ಯೆ ಪ್ರಕರಣದ ಹಂತಕರು ದೊರೆತಿದ್ದರೂ, ಕಠಿಣ ಶಿಕ್ಷೆ ವಿ ಧಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಅಲ್ಲಿನ ಸರ್ಕಾರ ಮತ್ತು ನ್ಯಾಯಾಲಯಗಳ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ. ದೆಹಲಿಯಲ್ಲಿ ನಿರ್ಭಯಾ ಘಟನೆ ನಂತರ ರಚನೆಯಾದ ಜಸ್ಟೀಸ್‌ ವರ್ಮಾ ಆಯೋಗ ಶಿಫಾರಸ್ಸು ಮಾಡಿದಂಥ ಸಲಹೆಗಳನ್ನು ಜಾರಿಗೊಳಿಸಿಲ್ಲ. ಪರಿಣಾಮ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಇಂಥ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದರಿಂದ ಸಮಾಜ ಇನ್ನು ಅಧೋಗತಿಗೆ ತಲುಪುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ದೇಶದಲ್ಲಿ ಮಹಿಳೆಯರಿಗೆ ಭದ್ರತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅತ್ಯಾಚಾರ ನಡೆದ ನಂತರ ಆರೋಪಿಗಳಿಗೆ ರಕ್ಷಣೆ ಸಿಗುತ್ತಿರುವುದು ದೇಶದ ದುರಂತವೇ ಸರಿ. ಇಂಥ ವ್ಯವಸ್ಥೆಯಲ್ಲಿ ನಮ್ಮ ಹೆಣ್ಣು ಮಕ್ಕಳು ಬದುಕುತ್ತಿದ್ದಾರೆ. ಇಂಥ ಕೊಳೆತ ಸಮಾಜವನ್ನು ಕಿತ್ತುಹಾಕಿ ಮಹಿಳೆಯರನ್ನು ಗೌರವಿಸುವಂಥ ಸಮಾಜವನ್ನು ನಾವೆಲ್ಲರೂ ಸೇರಿ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದವರು ಸ್ಪಷ್ಟಪಡಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ಪ್ರತಿಭಟನೆಯಲ್ಲಿ ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ್‌, ಮಹಿಳಾ ಘಟಕದ ಡಾ| ಅರುಣಾ ಕಾಮಿನೇನಿ, ಸುಮಾರೆಡ್ಡಿ, ಸುಗುಣಾ, ಮುಖಂಡರಾದ ಕೆ.ಎ.ರಾಮಲಿಂಗಪ್ಪ, ಜಿ. ವಿರೂಪಾಕ್ಷಗೌಡ, ಕೆ.ಎಸ್‌. ಅಶೋಕ್‌ಕುಮಾರ್‌, ಪಾಲಿಕೆ ಸದಸ್ಯ ಮೋತ್ಕರ್‌ ಶ್ರೀನಿವಾಸ್‌, ಹುಂಡೇಕರ್‌ ರಾಜೇಶ್‌, ಶಿವಾರೆಡ್ಡಿ, ಶ್ರೀನಿವಾಸ ಪಾಟೀಲ್‌ ಸೇರಿದಂತೆ ಇಲ್ಲಿನ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ವಿದ್ಯಾರ್ಥಿನಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next