ಬಳ್ಳಾರಿ: ಬಿಜೆಪಿ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆಗೆ ಕಾರಣವಾಗಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ವಿವಾದಕ್ಕೆ ಅಧಿಕೃತ ತೆರೆಬಿದ್ದಿದೆ.
Advertisement
ಬುಡಾ ಕ್ಕೆ ನೇಮಕವಾಗಿದ್ದ ದಮ್ಮೂರು ಶೇಖರ್ ಅವರ ಅಧ್ಯಕ್ಷ ಸ್ಥಾನ ರದ್ದುಗೊಳಿಸಿ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧಿಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಮ್ಮೂರು ಶೇಖರ್ ಅವರನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಅ. 25ರಂದು ಆದೇಶ ಹೊರಡಿಸಿತ್ತು. ಅ. 27ರಂದು ಶೇಖರ್ ಅವರು ಅಧಿಕಾರವನ್ನೂ ಸ್ವೀಕರಿಸಿದ್ದರು. ಆದರೆ, ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಹಿರಿಯ ಮುಖಂಡರಾದ ಕೆ.ಎ.ರಾಮಲಿಂಗಪ್ಪ, ಎಚ್. ಹನುಮಂತಪ್ಪ, ಮುರಹರಿಗೌಡ ಸೇರಿದಂತೆ 40ಕ್ಕೂ ಹೆಚ್ಚು ಕಾರ್ಯಕರ್ತರು ಇದನ್ನು ವಿರೋಧಿಸಿದ್ದರು. ಜತೆಗೆ ಪಕ್ಷದ ಸದಸ್ಯತ್ವ ಸ್ಥಾನಕ್ಕೂ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಸಿಎಂ ಯಡಿಯೂರಪ್ಪ ಸೇರಿ ಪಕ್ಷದ ಹಿರಿಯ ಮುಖಂಡರ ಗಮನ ಸೆಳೆದಿದ್ದರು. ಕಾರ್ಯಕರ್ತರ ವಿರೋಧಕ್ಕೆ ಮಣಿದಿದ್ದ ಸಿಎಂ ಯಡಿಯೂರಪ್ಪ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಬುಡಾ ಅಧ್ಯಕ್ಷರ ನೇಮಕಾತಿ ಆದೇಶ ರದ್ದುಗೊಳಿಸಿ ಪಕ್ಷದಲ್ಲಿ ಭುಗಿಲೆದ್ದಿದ್ದ ವಿರೋಧಕ್ಕೆ ತೆರೆ ಎಳೆದಿದ್ದರು.
Related Articles
Advertisement
ಬುಡಾ ಅಧ್ಯಕ್ಷ ಸ್ಥಾನದಿಂದ ದಮ್ಮೂರು ಶೇಖರ್ ಕೆಳಗಿಳಿಸುವವರೆಗೆ ನಾವು ಹೋರಾಟ ಮಾಡುತ್ತೇವೆ. ರಾಜೀನಾಮೆ ಸಲ್ಲಿಕೆ ಇದೀಗ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ರಾಜೀನಾಮೆ ಪರ್ವವೇ ನಡೆಯಲಿದೆ. ನೇಮಕಾತಿ ಆದೇಶ ರದ್ದುಮಾಡುವ ತನಕ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿ ಪಕ್ಷದ ಹಿರಿಯ ಮುಖಂಡರ ಗಮನ ಸೆಳೆದಿದ್ದರು.
ಕೊನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಉಪ ಚುನಾವಣೆ ಮುಗಿಯುವ ತನಕ ನೇಮಕಾತಿ ರದ್ದುಗೊಳಿಸಿದ್ದರು. ಇದೀಗ ಸರ್ಕಾರದಿಂದ ಡಿ. 12ರಂದು ಪ್ರಕಟಗೊಂಡ ಸೂಚನಾ ಪತ್ರವೊಂದು ಜಿಲ್ಲಾಧಿಕಾರಿಗಳಿಗೆ ತಲುಪಿದೆ. ಅದರಂತೆ ಡಿ. 12ರಿಂದ ಜಾರಿಗೆ ಬರುವಂತೆ ದಮ್ಮೂರು ಶೇಖರ್ ಅವರ ನೇಮಕಾತಿಯನ್ನು ರದ್ದುಮಾಡಲಾಗಿದೆ. ಹೊಸ ಅಧ್ಯಕ್ಷರ ನೇಮಕಾತಿ ಮಾಡುವರೆಗೆ ಜಿಲ್ಲಾ ಧಿಕಾರಿ ಎಸ್.ಎಸ್. ನಕುಲ್ ಬುಡಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದರಿಂದ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡರು ಮೇಲುಗೈ ಸಾಧಿಸಿದಂತಾಗಿದೆ. ಹಿನ್ನಡೆಯಾಗಿರುವ ಶಾಸಕ ಜಿ. ಸೋಮಶೇಖರರೆಡ್ಡಿಯವರು ಮುಂದೇನು ಮಾಡುತ್ತಾರೆ ಎಂಬುದು ಸದ್ಯಕ್ಕೆ ಕುತೂಹಲ.