Advertisement

8ರಂದು ಅಖೀಲ ಭಾರತ ಸಾರ್ವತ್ರಿಕ ಮುಷ್ಕರ

03:36 PM Jan 06, 2020 | Team Udayavani |

ಬಳ್ಳಾರಿ: 12 ಅಂಶಗಳ ಬೇಡಿಕೆ ಈಡೇರಿಕೆ ಆಗ್ರಹಿಸಿ ಕೇಂದ್ರ ಜಂಟಿ ಕಾರ್ಮಿಕ  ಸಮಿತಿಯಿಂದ ಜನವರಿ 8ರಂದು ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎ.ಆರ್‌.ಎಂ. ಇಸ್ಮಾಯಿಲ್‌ ಹೇಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ  ಸ್ಥಿತಿ ಗಂಭೀರವಾಗಿದೆ. ಹೊಸ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಬದಲು ಪ್ರಸ್ತುತ ಇರುವ  ಉದ್ಯೋಗ ನಾಶವಾಗುತ್ತಿವೆ. ಜಿಡಿಪಿ ಶೇ. 4ಕ್ಕೆ ಕುಸಿದಿದೆ. ಆರ್ಥಿಕ ಹಿಂಜರಿತದಿಂದ ಹಲವಾರು ಕಾರ್ಖಾನೆಗಳು ಮುಚ್ಚಿಹೋಗಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿ ಯಲ್ಲಿ 2ಲಕ್ಷ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ಸುಳ್ಳಾಗಿದೆ. ಈ ಎಲ್ಲ ವಿಷಯಗಳನ್ನು ಖಂಡಿಸಿ ಭಾರತ್‌ ಬಂದ್‌ಗೆ ಕರೆನೀಡಲಾಗಿದೆ ಎಂದರು.

ಅಂದು ಬಳ್ಳಾರಿಯಲ್ಲೂ ಸಹ ಬಂದ್‌ ಮಾಡಬೇಕೆಂದು ಈಗಾಗಲೇ ವರ್ತಕರು, ಕಚೇರಿ ಅಧಿ ಕಾರಿ ವರ್ಗ, ಆಟೋ ಚಾಲಕರು, ಖಾಸಗಿ ಬಸ್‌ ಮಾಲೀಕರು, ವಾಣಿಜ್ಯೋದ್ಯಮಿ,
ಕೈಗಾರಿಕೋದ್ಯಮಿಗಳಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ನಾಳೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲೂ ಅನೇಕ ಕಾರ್ಖಾನೆಗಳು ಮುಚ್ಚಿಹೋಗಿವೆ. ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಎನ್‌ಎಂಡಿಸಿ ಹಸ್ತಾಂತರಕ್ಕೆ ಒಳಗೊಳಗೆ ತಯಾರಿ ನಡೆದಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಹೆಚ್ಚಳ ಆಗಿದ್ದರಿಂದ ಸಾರ್ವಜನಿಕ ಜೀವನ
ದುಬಾರಿಯಾಗಿದೆ ಎಂದು ಅವರು ಹೇಳಿದರು.

ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕೆಂದು
ಆಗ್ರಹಿಸಿ ಈ ಬಂದ್‌ಗೆ ಕರೆನೀಡಲಾಗಿದೆ. ಬಂದ್‌ಗೆ ಬಳ್ಳಾರಿ ಜನ ಸಹ ಬೆಂಬಲಿಸಬೇಕು. ರೈತರೂ ಸಹ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವಂತೆ ಆಗಬೇಕೆಂಬುದು
ನಮ್ಮ ಉದ್ದೇಶ. ಇದೇ ಕಾರಣಕ್ಕೆ ರೈತ ಸಂಘಟನೆಗಳು ಸಹ ನಮ್ಮ ಹೋರಾಟ ಬೆಂಬಲಿಸಿವೆ ಎಂದು ಅವರು ತಿಳಿಸಿದರು.

Advertisement

ಎನ್‌ಆರ್‌ಸಿ, ಸಿಎಎ ಕಾಯ್ದೆ ವಿರುದ್ಧ ಸಹ ನಮ್ಮ ಹೋರಾಟ ನಡೆಯಲಿದೆ.
ದೇಶದ ಸಾಕಷ್ಟು ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಇಂಥ ಸಂದರ್ಭದಲ್ಲಿ ಕೇಂದ್ರ
ಸರ್ಕಾರಕ್ಕೆ ನಾಗರಿಕ ಕಾಯ್ದೆ ತಿದ್ದುಪಡಿ ಬೇಕಿತ್ತಾ ಎಂದು ಅವರು ಪ್ರಶ್ನಿಸಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ. ಸತ್ಯಬಾಬು, ಎಐಯುಟಿಯುಸಿ ಅಧ್ಯಕ್ಷ ಸೋಮಶೇಖರ ಗೌಡ, ಪ್ರಧಾನ ಕಾರ್ಯದರ್ಶಿ ಎ. ದೇವದಾಸ್‌, ಐಎನ್‌ ಟಿಯುಸಿ ಅಧ್ಯಕ್ಷ ಎಂ. ಜಯಕುಮಾರ, ಪ್ರಧಾನ ಕಾರ್ಯದರ್ಶಿ ಕೆ. ತಾಯಪ್ಪ, ಕಟ್ಟೆಬಸಪ್ಪ, ಕೆ. ನಾಗಭೂಷಣ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next