ಬಳ್ಳಾರಿ: ಹೈಕೋರ್ಟ್ ಆದೇಶದ ಮೇರೆಗೆ ಸರಕು ಸಾಗಾಣಿಕೆ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಕರೆದೊಯ್ಯಬಾರದು ಎಂದು ಜಿಲ್ಲಾಡಳಿತ ಇತ್ತೀಚೆಗಷ್ಟೇ ಆದೇಶ ಹೊರಡಿಸಿದ್ದರೂ, ಕಾರ್ಮಿಕ ಪ್ರಯಾಣಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿಲ್ಲ. ಸರ್ಕಾರಿ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರೇ ಕೂಲಿ ಕಾರ್ಮಿಕರನ್ನು ಸರಕು ಸಾಗಿಸುವ ವಾಹನಗಳಲ್ಲಿ ಕರೆದೊಯ್ಯುತ್ತಿದ್ದು, ಜಿಲ್ಲಾಡಳಿತದ ಆದೇಶಕ್ಕೆ ಕಿಮ್ಮತ್ತಿಲ್ಲ ಎನ್ನುವಂತಾಗಿದೆ.
ಕೃಷಿ, ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದಾಗಿ ಇತ್ತೀಚೆಗಷ್ಟೇ ಹೈಕೋರ್ಟ್ ಸರಕು ಸಾಗಣೆ ವಾಹನಗಳಲ್ಲಿ ಕೃಷಿ, ಕೂಲಿ ಕಾರ್ಮಿಕರನ್ನು ಸಾಗಿಸಬಾರದು ಎಂದು ಆದೇಶ ಹೊರಡಿಸಿ, ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ನೀಡಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಹ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿ ಮಾಡಿಸುವ ಗುತ್ತಿಗೆದಾರರು, ಉದ್ಯೋಗದಾತರು ತಮ್ಮ ಕಾರ್ಮಿಕರ ಬಗ್ಗೆ ಕಳಕಳಿ, ಸಂವೇದನಾಶೀಲತೆ ಹೊಂದಿರಬೇಕು. ಕಾರ್ಮಿಕರ ಬಗ್ಗೆ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿ ಆದೇಶ ಹೊರಡಿಸಿತ್ತು. ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಸರಕು ಸಾಗಣೆ ವಾಹನದಲ್ಲಿ ಕರೆತರದೇ, ಪ್ರಯಾಣಿಕರಿಗೆಂದೇ ಮೀಸಲಿಟ್ಟಿರುವ ವಾಹನಗಳಲ್ಲಿ ಕರೆತರಬೇಕು ಎಂದು ಆದೇಶದಲ್ಲಿ ಸೂಚಿಸಿತ್ತು. ಆದೇಶ ಪಾಲಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ಸಹ ನೀಡಿತ್ತು. ಆದರೆ, ಈ ಆದೇಶ ಜಾರಿಯಾಗಿ ಎರಡು ವಾರಗಳು ಗತಿಸಿದರೂ, ಕಾರ್ಮಿಕರನ್ನು ಸರಕು ವಾಹನಗಳಲ್ಲಿ ಕರೆದೊಯ್ಯುವುದಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿಲ್ಲ. ತಿಮ್ಮಲಾಪುರ ಬಳಿ ನಡೆಯುತ್ತಿರುವ ಎಚ್ಎಲ್ಸಿ ಕಾಲುವೆ ಆಧುನೀಕರಣ ಕಾಮಗಾರಿಗೆ ಕಾರ್ಮಿಕರನ್ನು ಸರಕು ಸಾಗಣೆ ವಾಹನಗಳಲ್ಲೇ ಕರೆದೊಯ್ಯಲಾಗುತ್ತಿದ್ದು, ಗುತ್ತಿಗೆದಾರರು ನಿಯಮ ಪಾಲಿಸದಿರುವುದು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ. ಇದಲ್ಲದೆ ಇಡೀ ಜಿಲ್ಲೆಯ ಹಲವೆಡೆ ಕಾರ್ಮಿಕರನ್ನು ಸರಕು ಸಾಗಿಸುವ ವಾಹನಗಳಲ್ಲೇ ಕರೆದೊಯ್ಯಲಾಗುತ್ತಿದೆ.
ತುಂಗಭದ್ರಾ ಜಲಾಶಯದ ಬಲದಂಡೆಯ ಎಚ್ಎಲ್ಸಿ ಕಾಲುವೆಯ 65, 66ನೇ ಕಿಮೀ ಬಳಿ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ಆಂಧ್ರ ಮೂಲದ ಗುತ್ತಿಗೆದಾರರು ಕಾಮಗಾರಿ ಕೈಗೊಂಡಿದ್ದು, ಕೂಲಿ ಕಾರ್ಮಿಕರನ್ನು ಅಲ್ಲಿಂದಲೇ ಕರೆತಂದಿದ್ದಾರೆ. ಕಾಮಗಾರಿ ಸ್ಥಳದಿಂದ ಮೂರ್‍ನಾಲ್ಕು ಕಿಮೀ ದೂರದಲ್ಲಿ ತಾತ್ಕಾಲಿಕ ಟೆಂಟ್‌ಗಳ ವ್ಯವಸ್ಥೆ ಮಾಡಿರುವ ಗುತ್ತಿಗೆದಾರರು, ಕಾರ್ಮಿಕರನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅಲ್ಲಿಂದಲೇ ಸರಕು ಸಾಗಿಸುವ ವಾಹನದಲ್ಲಿ ಕರೆದೊಯ್ಯುತ್ತಿದ್ದಾರೆ. ಕಾರ್ಮಿಕರನ್ನು ಹೊತ್ತ ಸರಕು ಸಾಗಾಣಿಕೆ ವಾಹನ ಕಾಲುವೆಯ ದಂಡೆ ಮೇಲೆಯೇ ಹತ್ತಾರು ಕಿಮೀ ಸಂಚರಿಸಲಿದ್ದು, ಯಾವಾಗ ಬೇಕಾದರೂ ಅವಘಡ ಸಂಭವಿಸಬಹುದಾಗಿದೆ. ಹೀಗಾಗಿ ಕಾರ್ಮಿಕರು ಆತಂಕದಲ್ಲೇ ಈ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.
ಕಾಲುವೆಗೆ ಉರುಳಿದ್ದ ಆಟೋ: ಕಾಲುವೆ ಆಧುನೀಕರಣ ನಡೆಯುವ ಸ್ಥಳಕ್ಕೆ ವಾಹನಗಳು ಸಾಗಲು ಸುಸಜ್ಜಿತ ರಸ್ತೆಗಳಿಲ್ಲ. ಕಾಲುವೆ ದಂಡೆ ಮೇಲೆಯೇ ಸಂಚರಿಸಬೇಕು. ಇಲ್ಲಿ ವಾಹನ ಚಲಾಯಿಸುವಾಗ ಚಾಲಕ ಒಂದಿಷ್ಟು ಮೈ ಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಸಮಯದಲ್ಲಿ ವಾಹನಗಳಲ್ಲಿ 20ಕ್ಕೂ ಹೆಚ್ಚು ಜನರನ್ನು ಪ್ರಾಣಿಗಳಂತೆ ತುಂಬಿಕೊಂಡು ಪ್ರಯಾಣ ಮಾಡಿದರೆ ಅಪಾಯ ತಪ್ಪಿದ್ದಲ್ಲ. 2009ರಲ್ಲಿ ಪ್ರಯಾಣಿಕ ಆಟೋವೊಂದು ಕೃಷಿ ಕಾರ್ಮಿಕರನ್ನು ಹೊತ್ತು ಎಚ್ಎಲ್ಸಿ ಕಾಲುವೆ ದಂಡೆ ಮೇಲೆ ಸಂಚರಿಸುತ್ತಿದ್ದಾಗ ಚಾಲಕನ ನಿರ್ಲಕ್ಷ್ಯದಿಂದ ಆಯತಪ್ಪಿ ಕಾಲುವೆಗೆ ಉರುಳಿತ್ತು. ಆಗ ಕಾಲುವೆಯಲ್ಲಿ ನೀರು ಹರಿಯುತ್ತಿದ್ದ ಪರಿಣಾಮ ಸುಮಾರು 9ಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಮೃತಪಟ್ಟಿದ್ದರು. ಹೀಗೆ ಸರಕು ಸಾಗಣೆ ವಾಹನದಲ್ಲಿ ಜನ ಪ್ರಯಾಣ ಮಾಡುವುದರಿಂದ ಪದೇ ಪದೇ ಅವಘಡಗಳ ತಡೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಬ್ರೇಕ್ ಹಾಕಬೇಕಿದ್ದು, ವಾಹನಗಳ ಮಾಲೀಕರು ಸಹ ಇನ್ನಾದರೂ ಜಿಲ್ಲಾಡಳಿತದ ಸೂಚನೆ ಪಾಲಿಸಬೇಕಾಗಿದೆ.
ಹೈಕೋರ್ಟ್ ನೀಡಿದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ವಹಿಸಲಾಗುತ್ತಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ದಿಢೀರ್ ದಾಳಿ ಮಾಡಿ, ಜನರನ್ನು ಕರೆದೊಯ್ಯುವ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಇದುವರೆಗೆ 135 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುಂದೆ ಕಾರ್ಯಾಚರಣೆ ಚುರುಕುಗೊಳಿಸಲಾಗುವುದು.
•
ಶ್ರೀಧರ್ ಮಲ್ನಾಡ್
ಪ್ರಾದೇಶಿಕ ಸಾರಿಗೆ ಅಧಿಕಾರಿ, ಬಳ್ಳಾರಿ.
ಹೈಕೋರ್ಟ್ ನಿರ್ದೇಶನ ಮೇರೆಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಸಮಗ್ರ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. 10 ರಿಂದ 12 ಇಲಾಖೆಗಳು ಇದರ ವ್ಯಾಪ್ತಿಗೆ ಬರಲಿವೆ. ಜಿಲ್ಲೆಯಲ್ಲೂ ಈ ಕುರಿತು ಹಲವು ಸಭೆ ನಡೆಸಲಾಗಿದೆ. ಶೀಘ್ರದಲ್ಲೇ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಲಾಗುವುದು. ಜಿಲ್ಲೆಯಲ್ಲೂ ಸರಕು ಸಾಗಣೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
•
ಲಕ್ಷ್ಮಣ ನಿಂಬರಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು.
•
ವೆಂಕೋಬಿ ಸಂಗನಕಲ್ಲು