Advertisement

ದಾಹ ನೀಗಿಸದ ನೀರು ಶುದ್ಧೀಕರಣ ಘಟಕ!

12:38 PM May 13, 2019 | Naveen |

ಬಳ್ಳಾರಿ: ಫ್ಲೋರೈಡ್‌ಯುಕ್ತ ನೀರು ಸೇವನೆ ಮುಕ್ತಗೊಳಿಸಿ ಕನಿಷ್ಠ ಶುದ್ಧ ಕುಡಿವ ನೀರು ಪೂರೈಸುವ ಸಲುವಾಗಿ ಜಿಲ್ಲೆಯಾದ್ಯಂತ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದ್ದು, ನಾನಾ ಕಾರಣಗಳಿಂದ ಬಹುತೇಕ ಘಟಕಗಳು ನಿರ್ದಿಷ್ಟ ಉದ್ದೇಶದಿಂದ ದೂರ ಉಳಿದಿವೆ.

Advertisement

ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ, ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲದೇ, ಬೋರ್‌ವೆಲ್ ನೀರೇ ಆಶ್ರಯವಾಗಿದೆ. ಬೇಸಿಗೆ ದಿನಗಳಲ್ಲಂತೂ ಅಂತರ್ಜಲ ಕುಸಿದು ಕುಡಿಯುವ ನೀರಿನ ಸಮಸ್ಯೆಯಂತೂ ಹೇಳತೀರದು. ಕುಡಿವ ನೀರಿನ ಸಮಸ್ಯೆಯನ್ನು ನೀಗಿಸುವುದರ ಜತೆಗೆ ಫ್ಲೋರೈಡ್‌ನಿಂದ ಮುಕ್ತಗೊಳಿಸಿ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬ ಉದ್ದೇಶದಿಂದ ಜಿಲ್ಲೆಯಾದ್ಯಂತ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ, ಎಚ್ಕೆಆರ್‌ಡಿಬಿ, ಸಹಕಾರಿ ಸಂಘ, ಸಂಸದರು, ಶಾಸಕರ ಅನುದಾನದಡಿ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಬಹುತೇಕ ಘಟಕಗಳು ಸಾರ್ವಜನಿಕ ಬಳಕೆಗೆ ಅಣಿಯಾಗಿವೆ ಎಂದು ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆಯಾದರೂ, ಬಹುತೇಕ ಘಟಕಗಳು ಇಂದಿಗೂ ಚಾಲನೆ ಪಡೆದುಕೊಳ್ಳದಿರುವುದು ವಿಪರ್ಯಾಸ.

ಈಚೆಗೆ ಸೇರ್ಪಡೆಯಾದ ಹರಪನಹಳ್ಳಿ ತಾಲೂಕು ಸೇರಿ ಜಿಲ್ಲೆಯ 8 ತಾಲೂಕುಗಳ ಪೈಕಿ ಒಟ್ಟು 855 ಶುದ್ಧ ಕುಡಿಯುವ ನೀರಿನ ಘಟಕಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ 353 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 26 ಇಂದಿಗೂ ಕಾಮಗಾರಿ ಹಂತದಲ್ಲಿದ್ದು, 324 ಸಾರ್ವಜನಿಕ ಬಳಕೆಗೆ ಅಣಿಯಾಗಿವೆ. ಅದೇ ರೀತಿ ಕೆಆರ್‌ಐಡಿಎಲ್ ಅನುದಾನದಡಿ 146ರಲ್ಲಿ 142 ಘಟಕಗಳಲ್ಲಿ ಯಂತ್ರಗಳನ್ನು ಅಳವಡಿಸಲಾಗಿದ್ದು, 134 ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿವೆ. ಸಹಕಾರ ಇಲಾಖೆಯಿಂದ ನಿರ್ಮಿಸಲಾಗಿರುವ 42 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಎಚ್ಕೆಆರ್‌ಡಿಬಿ ಅನುದಾನದಲ್ಲಿ 314 ಘಟಕಗಳನ್ನು ನಿರ್ಮಿಸಲಾಗಿದ್ದು, 294 ಘಟಕಗಳು ಲೋಕಾರ್ಪಣೆಗೊಂಡಿವೆ. 20 ಘಟಕಗಳು ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ. ಹೀಗೆ ಒಟ್ಟು 855 ಘಟಕಗಳಲ್ಲಿ 807 ಘಟಕಗಳು ಸಾರ್ವಜನಿಕ ಬಳಕೆಗೆ ಉಪಯೋಗವಾಗುತ್ತಿವೆ ಎಂದು ಸಂಬಂಧ ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆಯಾದರೂ, ವಾಸ್ತವದಲ್ಲಿ ಬಹುತೇಕ ಘಟಕಗಳು ನಿರ್ವಹಣೆ ಸೇರಿ ನಾನಾ ಕಾರಣಗಳಿಂದ ಜನರ ದಾಹ ನೀಗಿಸುವಲ್ಲಿ ವಿಫಲವಾಗಿವೆ.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ನಾನಾ ಕಾರಣಗಳನ್ನು ಎದುರಿಸುತ್ತಿವೆ. ಸಮರ್ಪಕ ನಿರ್ವಹಣೆ ಕೊರತೆ, ವಿದ್ಯುತ್‌ ಸಮಸ್ಯೆ, ಅಂತರ್ಜಲ ಕುಸಿತ ಹೀಗೆ ಹಲವಾರು ಕಾರಣಗಳಿಂದಾಗಿ ಘಟಕಗಳು ಬಳಕೆಯಾಗದೆ ಬೀಗ ಜಡಿಯಲಾಗಿದೆ. ಇನ್ನು ಕೆಲವೆಡೆ ನೀರು ಶುದ್ಧೀಕರಿಸುವ ಯಂತ್ರಗಳಲ್ಲಿನ ದೋಷಗಳಿಂದಾಗಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಪರಿಣಾಮ ನೀರಿಗಾಗಿ ಪರದಾ ಡುತ್ತಿರುವ ಸ್ಥಳೀಯ ಗ್ರಾಮಸ್ಥರು ನೆರೆಹೊರೆಯ ಗ್ರಾಮಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ, ಬೋರ್‌ವೆಲ್ಗಳಿಗೆ ಆಟೋ, ಬೈಕ್‌, ಸೈಕಲ್ಗಳಲ್ಲಿ ತೆರಳಿ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

300 ಜನವಸತಿ ಪ್ರದೇಶದಲ್ಲಿಲ್ಲ ಶುದ್ಧ ನೀರು: ಜಿಲ್ಲೆಯ ಸುಮಾರು 300 ಸಣ್ಣ ಸಣ್ಣ ಜನವಸತಿ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇಲ್ಲವಾಗಿದೆ. ಇಂಥ ಪ್ರದೇಶಗಳನ್ನು ಗುರುತಿಸಿರುವ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ, ಆ ಪ್ರದೇಶಗಳನ್ನು ಶುದ್ಧ ಕುಡಿಯುವ ನೀರಿನ ಘಟಕವಿರುವ ಪಕ್ಕದ ಗ್ರಾಮಗಳಿಗೆ ತೆರಳಿ ನೀರು ಪಡೆಯುವಂತೆ ಸೂಚಿಸಲಾಗಿದೆ. ಬಳ್ಳಾರಿ ತಾಲೂಕು 29, ಹಡಗಲಿ 37, ಹರಪನಹಳ್ಳಿ 13, ಹ.ಬೊ.ಹಳ್ಳಿ 24, ಹೊಸಪೇಟೆ 18, ಕೂಡ್ಲಿಗಿ 86, ಸಂಡೂರು 20, ಸಿರುಗುಪ್ಪ ತಾಲೂಕು 21 ಸೇರಿ ಒಟ್ಟು 248 ಗ್ರಾಮಗಳಲ್ಲಿನ ಜನರು ಇಂದಿಗೂ ಫ್ಲೋರೈಡ್‌ ಅಂಶವುಳ್ಳ ನೀರನ್ನೇ ಸೇವನೆ ಮಾಡುತ್ತಿದ್ದು, ವಿವಿಧ ಕಾಯಿಲೆಗಳಿಂದ ಬಳಲುವಂತಾಗಿದೆ. ಫ್ಲೋರೈಡ್‌ ಅಂಶವುಳ್ಳ ಗ್ರಾಮಗಳಿಗೆ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದೆ.

Advertisement

ಜಿಲ್ಲೆಯಲ್ಲಿ ಇನ್ನೂ ಸುಮಾರು 300 ಜನವಸತಿ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆಯಿದೆ. ಅಂತಹ ಜನವಸತಿ ಪ್ರದೇಶಗಳಲ್ಲಿನ ಜನರನ್ನು ಪಕ್ಕದ ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಪಡೆಯುವಂತೆ ಸೂಚನೆ ನೀಡಲಾಗಿದೆ. ಮೇಲಾಗಿ ಇಂಥ ಜನವಸತಿ ಪ್ರದೇಶಗಳೆಲ್ಲ ಎಚ್ಎಲ್ಸಿ, ಎಲ್ಎಲ್ಸಿ ಕಾಲುವೆ ಪಕ್ಕದಲ್ಲೇ ಹೆಚ್ಚಿನ ಪ್ರಮಾಣದಲ್ಲಿದ್ದು, 6 ತಿಂಗಳ ಕಾಲ ನೀರಿನ ಸಮಸ್ಯೆ ಕಾಣಿಸದು. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಿರ್ಮಿಸಲಾಗಿರುವ ಶುದ್ದ ಕುಡಿವ ನೀರಿನ ಘಟಕಗಳಲ್ಲಿ ಕೆಲವು ಸಾರ್ವಜನಿಕ ಬಳಕೆಗೆ ಅಣಿಯಾಗಿಲ್ಲ. ಈ ಬಗ್ಗೆಯೂ ಕೂಡಲೇ ಕ್ರಮಕೈಗೊಳ್ಳಲಾಗುವುದು.
ಶಶಿಧರ,
ಗ್ರಾಮೀಣ ಕುಡಿಯುವ ನೀರು ಸಬರಾಜು ಯೋಜನೆ, ಬಳ್ಳಾರಿ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next