Advertisement

ವಿಎಸ್‌ಕೆ ವಿವಿಗೆ ಸಿಕ್ತು 12 ಬಿ ಮಾನ್ಯತೆ

01:09 PM Sep 08, 2019 | Naveen |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಸದಾ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಿರುವ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಕೊನೆಗೂ ಕೇಂದ್ರದ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ)ದಿಂದ 12 ಬಿ ಮಾನ್ಯತೆ ಲಭಿಸಿದ್ದು ವಿವಿ ಕುಲಪತಿಗಳ ಹಲವು ವರ್ಷಗಳ ಪ್ರಯತ್ನಕ್ಕೆ ಫಲ ದೊರೆತಂತಾಗಿದೆ.

Advertisement

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಶಕದ ಹಿಂದೆ (2010-2011) ಆರಂಭಗೊಂಡಿದ್ದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳು ವಿವಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಲಭಿಸುವ ವಿವಿಧ ರೀತಿಯ ಅನುದಾನ ಪಡೆಯಲು ಆರಂಭದಿಂದಲೂ 12 ಬಿ ಮಾನ್ಯತೆಗಾಗಿ ಪ್ರಯತ್ನ ನಡೆಸಿದ್ದರು. ವಿವಿಯ ಮೊದಲ ಕುಲಪತಿ ಮಂಜಪ್ಪ ಹೊಸಮನಿ, ಎಂ.ಎಸ್‌.ಸುಭಾಶ್‌ ಸೇರಿ ಹಲವು ಕುಲಪತಿಗಳು ಯುಜಿಸಿಯಿಂದ 12ಬಿ ಮಾನ್ಯತೆ ಪಡೆಯಲು ಪ್ರಯತ್ನಿಸಿದ್ದರು. ಆದರೆ, ವಿವಿಯಲ್ಲಿ ಮೂಲಸೌಲಭ್ಯ, ಅಗತ್ಯ ಬೋಧಕರ ಹುದ್ದೆಗಳ ಕೊರತೆಯಿಂದಾಗಿ ಯುಜಿಸಿಯಿಂದ 12 ಬಿ ಮಾನ್ಯತೆ ಲಭಿಸುವುದು ವಿಳಂಬವಾಗಿತ್ತು. ಆದರೆ ಈಚೆಗೆ ವಿವಿಯಲ್ಲಿ ಅಗತ್ಯ ಪ್ರಾಧ್ಯಾಪಕರ ನೇಮಕಾತಿಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಯುಜಿಸಿಯಿಂದ 12 ಬಿ ಮಾನ್ಯತೆ ಲಭಿಸಿದ್ದು, ಸೆ. 7ರಂದು ಶನಿವಾರ ಕೇಂದ್ರ ಸರ್ಕಾರದ ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್‌ ವತಿಯಿಂದ 12 ಬಿ ಮಾನ್ಯತೆಯ ಪರವಾನಗಿ ಪತ್ರ ವಿವಿಗೆ ಲಭಿಸಿದೆ.

ಯುಜಿಸಿಯ 12ಬಿ ಮಾನ್ಯತೆಯಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಅನುದಾನವನ್ನು ಈ ವಿಶ್ವವಿದ್ಯಾಲಯಕ್ಕೆ ಬಿಡುಗಡೆ ಮಾಡಲಿದೆ. ಯುಜಿಸಿ ನಿಯಮಾನುಸಾರ ಪ್ರಾಧ್ಯಾಪಕ ಹಾಗೂ ಉಪನ್ಯಾಸಕರ ನೇಮಕಾತಿಯೂ ನಡೆಯಲಿದೆ. ಈ ಮಾನ್ಯತೆ ನ್ಯಾಕ್‌ ಕಮಿಟಿಗೂ ಪೂರಕ ಆಗಲಿದೆ. ಹೈದರಾಬಾದ್‌ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೂ ಇದು ಸಹಕಾರಿಯಾಗಲಿದೆ. ಜತೆಗೆ ಸಂಶೋಧನಾ ಕೇಂದ್ರಗಳ ಆರಂಭಕ್ಕೂ ಅಗತ್ಯ ಅನುದಾನ ಮೀಸಲಿರಿಸಲು ಅನುಕೂಲಕರವಾಗಲಿದೆ ಎಂದು ವಿವಿ ಕುಲಪತಿ ಸಿದ್ದು ಪಿ. ಅಲಗೂರು ಹೇಳುತ್ತಾರೆ.

ನ್ಯಾಕ್‌, 12 ಬಿ ಮಾನ್ಯತೆಗೆ ಕಸರತ್ತು: 010ರಲ್ಲೇ ಬಳ್ಳಾರಿ, ಕೊಪ್ಪಳ ಜಿಲ್ಲೆಗಳನ್ನೊಳಗೊಂಡಂತೆ ಆರಂಭವಾಗಿದ್ದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಇನ್ನು ಅಂಬೆಗಾಲಿಡುತ್ತಿದೆ. ಈಗಾಗಲೇ 2 ಎಫ್‌ ಮಾನ್ಯತೆ ಪಡೆದಿದ್ದ ವಿಎಸ್‌ಕೆ ವಿವಿಯು ಯುಜಿಸಿಯಿಂದ ಅನುದಾನ ಪಡೆಯುವ ನಿಟ್ಟಿನಲ್ಲಿ, ನ್ಯಾಕ್‌ ಮತ್ತು 12ಬಿ ಮಾನ್ಯತೆ ಪಡೆಯುವ ಗುರಿ ಇಟ್ಟುಕೊಂಡು ನಾನಾ ಪ್ರಯತ್ನ ನಡೆಸಿತ್ತು. ಈ ನಿಟ್ಟಿನಲ್ಲಿ ವಿವಿಯ ಹಿಂದಿನ ಕುಲಪತಿಗಳು ನಡೆಸಿದ್ದ ಸತತ ಪ್ರಯತ್ನ ಇದೀಗ ಯಶ ಕಂಡಂತಾಗಿದೆ.

ವಿಎಸ್‌ಕೆ ವಿವಿಗೆ 12ಬಿ ಮಾನ್ಯತೆ ಲಭಿಸಬೇಕೆಂಬುದು ಬಹುದಿನಗಳ ಕನಸಾಗಿದ್ದು, ಇದೀಗ 12 ಬಿ ಮಾನ್ಯತೆ ಪರವಾನಗಿ ದೊರೆತಿರೋದು ಹೆಮ್ಮೆಯ ವಿಷಯವಾಗಿದೆ. ಈ ಹಿಂದಿನ ಕುಲಪತಿಗಳು, ಮೌಲ್ಯಮಾಪನ ಕುಲಸಚಿವರ ಶತಾಯಗತಾಯ ಪ್ರಯತ್ನದಿಂದಾಗಿ ಈ ದಿನ ನಮಗೆ ಈ ಮಾನ್ಯತೆ ದೊರೆತಿರೋದು ಒಂದು ರೀತಿಯ ಖುಷಿ ತಂದಿದೆ.
ಪ್ರೊ. ಸಿದ್ದು ಪಿ.ಅಲಗೂರು,
 ಕುಲಪತಿಗಳು, ವಿಎಸ್‌ಕೆ ವಿವಿ, ಬಳ್ಳಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next