Advertisement

ಹೊಸ ಕೋರ್ಸ್‌ ಆರಂಭಕ್ಕೆ ವಿಶ್ವವಿದ್ಯಾಲಯ ಅನುಮತಿ

05:01 PM Jun 26, 2019 | Naveen |

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಅತಿಥಿ ಗೃಹದಲ್ಲಿ ನಡೆದ ವಿದ್ಯಾ ವಿಷಯಕ ಪರಿಷತ್‌ ಸಭೆಯಲ್ಲಿ ಕನ್ನಡ ಅಧ್ಯಯನ ವಿಭಾಗದಡಿ ಸ್ನಾತಕೋತ್ತರ ಪದವಿಯಲ್ಲಿ ಪ್ರದರ್ಶನ ಕಲೆ, ಎಂ.ಇಡಿ ಎಂಬ ಎರಡು ಹೊಸ ಕೋರ್ಸ್‌ ಆರಂಭಿಸಲು ಮಂಗಳವಾರ ನಿರ್ಣಯ ಕೈಗೊಳ್ಳಲಾಗಿದ್ದು, ವಿವಿಯಿಂದ ಅನುಮೋದನೆ ನೀಡಲಾಯಿತು.

Advertisement

ಸಭೆಯಲ್ಲಿ ವಿವಿ ಅಧಿಧೀನದಲ್ಲಿ ಬರುವ ಕಾಲೇಜುಗಳಲ್ಲಿ ಪಿ.ಎಚ್‌ಡಿ ಸಂಶೋಧನಾ ಕೇಂದ್ರ ಆರಂಭಿಸುವ ಕುರಿತು ಚರ್ಚಿಸಲಾಗಿದ್ದು, ಮೊದಲು ಆಯಾ ವಿಭಾಗಗಳ ಡೀನ್‌ಗಳನ್ನು ಕರೆದು ಅದರ ಸಾಧಕ-ಬಾಧಕಗಳ ಕುರಿತು ಪರಾಮರ್ಶಿಸಿದ ಬಳಿಕ ಜೇಷ್ಠತೆ ಆಧಾರದ ಮೇಲೆ ಕನಿಷ್ಠ ಐದು ವರ್ಷ ಶೈಕ್ಷಣಿಕ ಸಾಧನೆ ಪರಿಶೀಲಿಸಿ ಸಂಶೋಧನಾ ಕೇಂದ್ರಕ್ಕೆ ಅನುಮತಿ ನೀಡುವ ಕುರಿತ ಒಮ್ಮತದ ನಿರ್ಣಯಕ್ಕೆ ಸಭೆಯಲ್ಲಿ ಸಮ್ಮತಿ ಸೂಚಿಸಲಾಯಿತು.

ವಿದ್ಯಾ ವಿಷಯಕ ಪರಿಷತ್‌ ಸದಸ್ಯ ಬಸವರಾಜ ಮಳಿಮಠ, ವಿವಿ ಅಧಿಧೀನದ ಕೆಲ ಕಾಲೇಜುಗಳಲ್ಲಿ ನಿಗದಿಗಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಕುಲಸಚಿವೆ ಪ್ರೊ.ಬಿ.ಕೆ. ತುಳಸಿಮಾಲ, ವಿವಿ ಅಧಿಧೀನದಲ್ಲಿರುವ ಎಲ್ಲ ಮಹಾವಿದ್ಯಾಲಯಗಳಿಗೆ ಕೂಡಲೇ ಸುತ್ತೋಲೆ ಹೊರಡಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದೂರಶಿಕ್ಷಣ ಕೇಂದ್ರ ಆರಂಭಿಸಲು ಶಿವಮೊಗ್ಗದ ಕುವೆಂಪು ವಿವಿ ಅನುಮತಿ ನೀಡುವಂತೆ ವಿವಿಗೆ ಪತ್ರ ಬರೆದಿತ್ತು. ಈ ಕುರಿತು ಸದಸ್ಯರು ಚರ್ಚಿಸಿ, ಶೈಕ್ಷಣಿಕ ಹಿತದೃಷ್ಟಿಯಿಂದ ಶ್ರೀಕೃಷ್ಣದೇವರಾಯ ವಿವಿ ಮುಂಬರುವ ಕೆಲದಿನಗಳಲ್ಲಿ ದೂರಶಿಕ್ಷಣ ಅಧ್ಯಯನ ಸ್ವತಃ ಪರಿಚಯಿಸಲು ಮುಂದಾಗಲಿದೆ. ಈ ನಿಟ್ಟಿನಲ್ಲಿ ಕುವೆಂಪು ವಿವಿಗೆ ಅನುಮತಿ ನೀಡದಿರುವುದು ಸೂಕ್ತ ಎಂದು ನಿರ್ಧರಿಸಲಾಯಿತು. ಖನಿಜ ಸಂಸ್ಕರಣ ಅಧ್ಯಯನ ಸ್ನಾತಕೋತ್ತರ ವಿಭಾಗಕ್ಕೆ ಪ್ರವೇಶದ ನಿಯಮಗಳಲ್ಲಿ ಬದಲಾವಣೆ ಕಲ್ಪಿಸಿದ್ದು, ಬಿ.ಇ (ತಾಂತ್ರಿಕ ಶಿಕ್ಷಣ) ಪದವಿ ಪಡೆದ ವಿದ್ಯಾರ್ಥಿಗಳು ನೇರವಾಗಿ ಮೂರನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಬಹುದಾಗಿದೆ. ಈ ಕುರಿತು ಅಧಿಸೂಚನೆಯನ್ನು ಶೀಘ್ರದಲ್ಲಿಯೇ ವಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.

ಕೊಪ್ಪಳ ಮತ್ತು ಗಂಗಾವತಿಯಲ್ಲಿ ಎರಡು ನೂತನ ಮಹಾವಿದ್ಯಾಲಯಗಳಿಗೆ ಸಂಯೋಜನೆ ನೀಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಬಳ್ಳಾರಿಯ ಬಿಐಟಿಎಂ ಕಾಲೇಜಿನಲ್ಲಿರುವ ಬಿ.ಕಾಂ ಮತ್ತು ಬಿಬಿಎ ಕೋರ್ಸ್‌ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳಕ್ಕೆ ಸಲ್ಲಿಸಿದ್ದ ಅಂಶವನ್ನು ಅಂಗೀಕರಿಲಾಯಿತು.

Advertisement

ವಿವಿ ಕುಲಪತಿಗಳು ಮತ್ತು ಸಭೆಯ ಅಧ್ಯಕ್ಷರಾದ ಪ್ರೊ. ಕೆ. ಆರ್‌. ವೇಣುಗೋಪಾಲ ರೆಡ್ಡಿ, ಕುಲಸಚಿವರಾದ ಪ್ರೊ.ಬಿ.ಕೆ. ತುಳಸಿಮಾಲ, ಕುಲಸಚಿವರು (ಮೌಲ್ಯಮಾಪನ) ಪ್ರೊ.ರಮೇಶ ಕುಮಾರ ಕೆ., ಡೀನರು ಹಾಗೂ ಪ್ರೊ. ಭೀಮನಗೌಡ ಪಾಟೀಲ್, ಪ್ರೊ. ಶಾಂತಾನಾಯ್ಕ, ಪ್ರೊ. ಕೆ.ಎಸ್‌. ಲೋಕೇಶ್‌, ಪ್ರೊ.ಕೆ.ಎಂ. ಬಸವರಾಜ್‌, ಪ್ರೊ.ವೆಂಕಟೇಶಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next