Advertisement

ಸಾರಿಗೆ ಅಧಿಕಾರಿಗಳ ವಾಹನ ಬೇಟೆ ಚುರುಕು

11:16 AM May 20, 2019 | Team Udayavani |

ಬಳ್ಳಾರಿ: ಹೈಕೋರ್ಟ್‌ ನಿರ್ದೇಶನ, ಕೆಎಸ್‌ಆರ್‌ಟಿಸಿ ಸೇರಿ ವಿವಿಧ ಸಂಘ ಸಂಸ್ಥೆಗಳು ನೀಡಿರುವ ದೂರನ್ನು ಆಧರಿಸಿ ಕಳೆದ ಕೆಲ ದಿನಗಳಿಂದ ಪ್ರಯಾಣಿಕ, ಸರಕು ಸಾಗಣೆ ವಾಹನಗಳ ತಪಾಸಣೆ (ಪ್ರವರ್ತನಾ ಕಾರ್ಯ) ನಡೆಸುತ್ತಿರುವ ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೇವಲ ಮೂರು ದಿನಗಳಲ್ಲಿ 80ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಮೇ 31ರವರೆಗೂ ತಪಾಸಣಾ ಕಾರ್ಯ ಮುಂದುವರಿಯಲಿದೆ.

Advertisement

ಸರಕು ಸಾಗಣಿಕಾ ವಾಹನಗಳಲ್ಲಿ ಕೃಷಿ, ಕೂಲಿ ಕಾರ್ಮಿಕರನ್ನು, ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಅಂತಹ ವಾಹನಗಳಲ್ಲಿ ಮದುವೆ ದಿಬ್ಬಣಗಳು ಹೋಗುವಂತಿಲ್ಲ. ಅದಕ್ಕಾಗಿ ಮೀಸಲಿಟ್ಟಿರುವ ವಾಹನಗಳಲ್ಲೇ ಸಂಚರಿಸಬೇಕು ಎಂದು ಇತ್ತೀಚೆಗಷ್ಟೇ ಹೈಕೋರ್ಟ್‌ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಇದರೊಂದಿಗೆ ಸರ್ಕಾರಿ ಬಸ್‌ ನಿಲ್ದಾಣಗಳ ಬಳಿ ಖಾಸಗಿ ಪ್ರಯಾಣಿಕ ವಾಹನಗಳು ನಿಲ್ಲಿಸುವಂತಿಲ್ಲ. ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು ಮಾಡುವಂತಿಲ್ಲ. ನಿಲ್ದಾಣದಿಂದ 500 ಮೀಟರ್‌ ದೂರದಲ್ಲಿ ವಾಹನಗಳನ್ನು ನಿಲ್ಲಿಸಬೇಕು ಎಂದು ಇಲ್ಲಿನ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ದೂರು ನೀಡಿದ್ದರು. ಅದೇ ರೀತಿ ಸಿರುಗುಪ್ಪ ಭಾಗದಲ್ಲಿ ಟ್ರ್ಯಾಕ್ಟರ್‌ಗಳಲ್ಲೇ ಭತ್ತದ ಮೂಟೆಗಳನ್ನು ಸಾಗಿಸುತ್ತಿದ್ದು, ಕ್ರಮ ಕೈಗೊಳ್ಳುವಂತೆ ಲಾರಿ ಅಸೋಸಿಯೇಷನ್‌ ಮುಖಂಡರು ದೂರು ನೀಡಿದ್ದರು. ನಗರ ಪ್ರದೇಶದಿಂದ ಸಮೀಪದ ಹಳ್ಳಿಗಳಿಗೆ ತೆರಳುವ ಆಟೋಗಳಲ್ಲೇ ಜನ ಸಂಚರಿಸುತ್ತಿದ್ದು, ಈ ಆಟೋಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಖಾಸಗಿ ಪ್ರಯಾಣಿಕ ವಾಹನಗಳ ಸಂಘದಿಂದ ದೂರು ಸಲ್ಲಿಸಲಾಗಿತ್ತು. ಈ ಎಲ್ಲ ದೂರುಗಳನ್ನು ಆಧರಿಸಿ ಕಳೆದ ಮೇ 17 ರಿಂದ ಕಾರ್ಯಾಚರಣೆಗೆ ಇಳಿದಿರುವ ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಮೂರು ದಿನಗಳಲ್ಲಿ 80 ಪ್ರಕರಣಗಳನ್ನು ದಾಖಲಿಸಿದ್ದು, ಸಂಬಂಧಪಟ್ಟ ವಾಹನಗಳು, ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್‌ ಮಲ್ನಾಡ್‌, ಇಲಾಖೆಯ ಅಧಿಕಾರಿಗಳಾದ ಶ್ರೀನಿವಾಸ್‌ ಗಿರಿ, ಮೂರ್ತಿ ರವಿ, ಹೇಮಂತ್‌ ಕುಮಾರ್‌, ಇತರೆ ಜಿಲ್ಲೆ ಸಾರಿಗೆ ಅಧಿಕಾರಿಗಳಾದ ದಿಲೀಪ್‌ ಮಹೇಂದ್ರಕರ್‌, ಧರ್ಮರಾಜ್‌ ಪವಾರ್‌, ಪದ್ಮೇಶಾ ಸೇರಿ ಒಟ್ಟೂ ನಾಲ್ಕು ತಂಡಗಳನ್ನು ರಚಿಸಿದ್ದು, ಮೇ 17 ರಿಂದ ತಪಾಸಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಮೊದಲಿಗೆ ಸಿರುಗುಪ್ಪ ಪಟ್ಟಣದಲ್ಲಿ ಒಂದು ಟ್ರ್ಯಾಕ್ಟರ್‌ಗೆ ಎರಡೆರಡು ಟ್ರಾಲಿಗಳನ್ನು ಅಳವಡಿಸಿಕೊಂಡು ಭತ್ತದ ಮೂಟೆಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳ ಮೇಲೆ ದಾಳಿ ನಡೆಸಲಾಗಿದೆ.

ಬಳ್ಳಾರಿಯಲ್ಲಿ ಬಸ್‌ ನಿಲ್ದಾಣದ ಎದುರುಗಡೆಯೇ ಖಾಸಗಿ ಬಸ್‌, ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಅಂತಹವುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಸಮೀಪದ ಹಳ್ಳಿಗೆ ಕೆಎಸ್ಸಾರ್ಟಿಸಿ ಬಸ್‌ಗಳು ಸಂಚರಿಸುತ್ತಿದ್ದರೂ, ಆಟೋ ಚಾಲಕರು ಪ್ರಯಾಣಿಕರನ್ನು ತಮ್ಮ ಆಟೋಗಳಲ್ಲಿ ಕರೆದೊಯ್ಯುತ್ತಿದ್ದಾರೆ. ಇದರಿಂದ ಸಾರಿಗೆ ಬಸ್‌ಗಳಿಗೆ ತೊಂದರೆಯಾಗಲಿದೆ. ಇಂತಹ ಪ್ರಯಾಣ ಪ್ರಯಾಣಿಕರಿಗೂ ಸೂಕ್ತವಲ್ಲ. ನಗರದಲ್ಲಿನ ಬಹುತೇಕ ಖಾಸಗಿ ಪ್ರಯಾಣಿಕ ಬಸ್‌ಗಳಲ್ಲಿ ಸುಮಾರು 5-6 ಟನ್‌ ಸರಕನ್ನು ನಿತ್ಯ ಸಾಗಿಸುವ ವಾಹನಗಳ ವಿರುದ್ಧ ಸೇರಿ ಒಟ್ಟು 80ಕ್ಕೂ ಹೆಚ್ಚು ಪ್ರಕರಣಗಳನ್ನು ಕೇವಲ ಮೂರು ದಿನಗಳಲ್ಲಿ ದಾಖಲಿಸಲಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

Advertisement

ಮೇ 31ರವರೆಗೆ ತಪಾಸಣೆ: ವಾಹನಗಳ ತಪಾಸಣಾ ಕಾರ್ಯ ಮೇ 31ವರೆಗೆ ಮುಂದುವರಿಯಲಿದೆ. ಸ್ಥಳೀಯ, ಹೊರಗಿನ ಅಧಿಕಾರಿಗಳು ಸೇರಿ ತಂಡವೊಂದರಲ್ಲಿ ಇಬ್ಬರು ಅಧಿಕಾರಿಗಳಂತೆ ಒಟ್ಟು ನಾಲ್ಕು ತಂಡ ರಚಿಸಲಾಗಿದೆ. ಸೋಮವಾರ ಬೆಳಗಾವಿ ಅಧಿಕಾರಿಗಳು ಬಳ್ಳಾರಿಯಲ್ಲಿ ತಪಾಸಣಾ ಕಾರ್ಯದಲ್ಲಿ ತೊಡಗಲಿದ್ದು, ಇನ್ನು ಹಲವು ವಾಹನಗಳ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆಯಿದೆ.

ಸಿರುಗುಪ್ಪದಲ್ಲಿ ಟ್ರ್ಯಾಕ್ಟರ್‌ಗಳಿಗೆ ಎರಡೆರಡು ಟ್ರಾಲಿಗಳನ್ನು ಅಳವಡಿಸಿಕೊಂಡು ಭತ್ತದ ಮೂಟೆ ಸಾಗಿಸುತ್ತಿರುವ ಬಗ್ಗೆ ತಪಾಸಣೆ ನಡೆಸಲಾಗಿದೆ. ಅದು ಬೆಳೆ ಕಟಾವು ಮಾಡುವ ಡಿಸೆಂಬರ್‌-ಜನವರಿ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಅಲ್ಲಿನ ರೈಸ್‌ಮಿಲ್ ಮಾಲೀಕರನ್ನೆಲ್ಲ ಸಂಪರ್ಕಿಸಿ ಮೂರು ಟ್ರ್ಯಾಕ್ಟರ್‌ಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನುಳಿದಂತೆ ಬಸ್‌ ನಿಲ್ದಾಣಗಳ ಬಳಿ ಖಾಸಗಿ ಸಾರಿಗೆ ವಾಹನಗಳ ನಿಲುಗಡೆ, ಸರಕು ಸಾಗಾಣಿಕೆ ವಾಹನಗಳಲ್ಲಿ ಕಾರ್ಮಿಕರ ಕರೆದೊಯ್ಯುವುದು, ಆಟೋಗಳಲ್ಲಿ ಪ್ರಯಾಣಿಕರ ಸಾಗಾಣಿಕೆ ಸೇರಿ ಕೇವಲ ಮೂರು ದಿನಗಳಲ್ಲಿ 80 ಪ್ರಕರಣಗಳನ್ನು ದಾಖಲಿಸಲಾಗಿದೆ.
•ಶ್ರೀಧರ್‌ ಮಲ್ನಾಡ್‌,
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬಳ್ಳಾರಿ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next