Advertisement
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಆರು ಜಿಲ್ಲೆಗಳ ರೈತರ ಪಾಲಿಗೆ ಈ ಜಲಾಶಯ ಜೀವನಾಡಿಯಾಗಿದೆ. ಈ ಮೊದಲು ಪ್ರತಿವರ್ಷ ಎರಡು ಬೆಳೆಗೆ ನೀರುಣಿಸುತ್ತಿದ್ದ ಜಲಾಶಯ, ಕಳೆದ ಕೆಲ ವರ್ಷಗಳಿಂದ ಸಮರ್ಪಕ ಮಳೆ ಕೊರತೆ ಮತ್ತು ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳಿನಿಂದಾಗಿ ಎರಡು ಬೆಳೆಗೆ ನೀರು ಪೂರೈಸುತ್ತಿಲ್ಲ. ಕಳೆದ ಎರಡು ದಶಕಗಳಲ್ಲಿ ಹಲವು ವರ್ಷ ಬರ ಪರಿಸ್ಥಿತಿ ಎದುರಾಗಿದ್ದರೂ, ಕನಿಷ್ಠ ಒಂದು ಬೆಳೆಗಾದರೂ ಜಲಾಶಯದಿಂದ ನೀರು ಒದಗಿಸಲಾಗುತ್ತಿತ್ತು. ಆದರೆ, ಈ ವರ್ಷ ಇನ್ನೂ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಸುರಿಯದ್ದರಿಂದ ಭಾರೀ ಸಮಸ್ಯೆ ಎದುರಾಗಿದೆ. ಕನಿಷ್ಠ ಒಂದು ಬೆಳೆ ಬೆಳೆಯಲಾದರೂ ಜಲಾಶಯದಿಂದ ನೀರು ದೊರೆಯಲಿದೆಯೋ, ಇಲ್ಲವೋ ಎಂಬ ಆತಂಕ ರೈತರನ್ನು ಕಾಡಲಾರಂಭಿಸಿದೆ.
Related Articles
Advertisement
ಭದ್ರಾ ಜಲಾಶಯದಿಂದ ನೀರು ಅನುಮಾನ: ತುಂಗಭದ್ರಾ ಜಲಾಶಯದಲ್ಲಿ ನೀರು ತಳಮಟ್ಟ ಸೇರುತ್ತಿದ್ದು, ಡೆಡ್ ಸ್ಟೋರೇಜ್ ನೀರನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ, ಭದ್ರಾ ಜಲಾಶಯದಿಂದ ನೀರು ಲಭಿಸುವುದು ಅನುಮಾನವಾಗಿದೆ. ಮೇಲಾಗಿ ಇಂಥ ಸಂದರ್ಭದಲ್ಲಿ ಈ ವರೆಗೂ ಒಮ್ಮೆಯೂ ಭದ್ರಾ ಜಲಾಶಯದಿಂದ ನೀರು ಪಡೆದಿರುವ ಉದಾಹರಣೆಗಳಿಲ್ಲ. ಹಡಗಲಿಯಲ್ಲಿನ ಮೈಲಾರಲಿಂಗ ಜಾತ್ರೆ ನಿಮಿತ್ತ ಅಲ್ಲಿನ ಭಕ್ತರ ಅನುಕೂಲಕ್ಕಾಗಿ ಒಂದಷ್ಟು ನೀರನ್ನು ಭದ್ರಾ ಜಲಾಶಯದಿಂದ ಪಡೆಯಲಾಗುತ್ತಿತ್ತು.
ಸದ್ಯ ಭದ್ರಾ ಜಲಾಶಯದಿಂದಲೂ ನದಿಗೆ ಹರಿಸಲಾಗಿರುವ 1400 ಕ್ಯೂಸೆಕ್ ನೀರು ತುಂಗಭದ್ರಾ ಜಲಾಶಯಕ್ಕೆ ಬರಲ್ಲ. ನದಿ ಪಾತ್ರದಲ್ಲಿರುವ ಪ್ರಾಣಿಗಳ ಅನುಕೂಲಕ್ಕಾಗಿ ಈ ನೀರನ್ನು ಹರಿಸಲಾಗಿದೆ ಎನ್ನಲಾಗುತ್ತಿದೆ.
ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಈವರೆಗೂ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ವರುಣನ ಆಗಮನಕ್ಕಾಗಿ ಜಪ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಮುಂಗಾರು ಆರಂಭವಾಗಿದ್ದರೂ, ಬಿತ್ತನೆಗಾಗಿ ಕಾದು ಕುಳಿತಿರುವ ರೈತರಿಗೆ ವರುಣನ ಕೃಪೆ ಇಲ್ಲದಂತಾಗಿದೆ. ಮೋಡ ಕವಿದ ವಾತಾವರಣವಿದ್ದರೂ, ಒಂದೆರಡು ತುಂತುರು ಹನಿ ಉದುರಿಸಿ ಗಾಳಿಗೆ ಮೋಡಗಳು ಮರೆಯಾಗುತ್ತಿವೆ. ಜಲಾಶಯಕ್ಕೆ ನೀರು ಹರಿದು ಬರುವ ಮಲೆನಾಡಿನಲ್ಲೂ ಈ ಬಾರಿ ಮಳೆಯಾಗದಿರುವುದು ರೈತರನ್ನು ಮತ್ತಷ್ಟು ಚಿಂತೆಗೀಡುಮಾಡಿದೆ.