ಬಳ್ಳಾರಿ: ಶಿಕ್ಷಕರ ವರ್ಗಾವಣೆಯಲ್ಲಿ ಒತ್ತಡ ಹೇರುತ್ತಿರುವ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಉನ್ನತ ಶಿಕ್ಷಣ ಸಚಿವರು ಬಹಿರಂಗ ಪಡಿಸಬೇಕು ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಅರುಣ್ ಶಹಾಪೂರ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎಸ್.ಆರ್. ಶ್ರೀನಿವಾಸ್ ಅವರು ಈಗಷ್ಟೇ ಶಿಕ್ಷಣ ಇಲಾಖೆಯ ಅಧಿಕಾರ ವಹಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆ ಏನು ಎಂಬುದರ ಕುರಿತು ಅರಿಯಬೇಕಿದೆ. ಆದರೆ, ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರು ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ವಿಧಾನ ಪರಿಷತ್ ಸದಸ್ಯರು ಒತ್ತಡ ಹೇರುತ್ತಿರುವ ಹೇಳಿಕೆ ನೀಡಿದ್ದಾರೆ. ಅವರು ಇಷ್ಟು ಅಸಮರ್ಥರಾಗಬಾರದು. ಇದನ್ನು ನಿಭಾಯಿಸುವ ಮಟ್ಟಕ್ಕೆ ಅಧಿಕಾರ ನಡೆಸಬೇಕು ಎಂದರು.
ಸಮ್ಮಿಶ್ರ ಸರ್ಕಾರ ಬಂದು ಒಂದು ವರ್ಷ ಆಗಿದೆ. ಎನ್.ಮಹೇಶ್ ಮೊದಲು ಶಿಕ್ಷಣ ಸಚಿವರಾಗಿದ್ದರು. ಅವರು ರಾಜೀನಾಮೆ ಕೊಟ್ಟ ನಂತರ ಸಿಎಂ ಬಳಿ ಶಿಕ್ಷಣ ಖಾತೆ ಇತ್ತು. ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಲಿಲ್ಲ. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಕುಸಿದಿದೆ. ಹೊಸ ಶಿಕ್ಷಣ ಸಚಿವರು ವರ್ಗಾವಣೆ ವಿಚಾರವಾಗಿ, ವಿಪ ಸದಸ್ಯರು ಒತ್ತಡ ಹೇರಿದ್ದಾರೆ ಅಂತಿದ್ದಾರೆ. ಇಂತಹ ವಿಷಯಗಳು ಬಂದಾಗ ಶಿಕ್ಷಣ ಕ್ಷೇತ್ರದ ಸಂಘಗಳ ಸಭೆ ಕರೆದು, ಸಲಹೆ ಪಡೆದುಕೊಳ್ಳಿ, ಮುಕ್ತವಾಗಿ ವರ್ಗಾವಣೆ ನಡೆಯಬೇಕಿದೆ. ಬಿಇಒ, ಡಿಡಿಪಿಐಗಳು ಹಣ ಪಡೆಯದೇ, ನಿಯಮ ಪಾಲಿಸಿ, ಶಿಕ್ಷಕರ ವರ್ಗಾವಣೆ ಮಾಡಲಿ ಎಂದು ಒತ್ತಾಯ ಮಾಡಿದರು.
ರಾಜ್ಯದಲ್ಲಿ ಕಳೆದ ಹಲವು ತಿಂಗಳಿನಿಂದ ಸಂಬಳ ನೀಡಿಲ್ಲ. ಈ ಹಿಂದೆ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ಗೌರವ ಧನ ನೀಡಿಲ್ಲ. ಈ ಸಮಸ್ಯೆಗಳ ಕುರಿತು ಚಿಂತನೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕಾದ ಸಚಿವರು ಇತರೆ ರಾಜ್ಯಗಳ ಮಾದರಿ ಅರಿಯುವ, ಅಧ್ಯಯನ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಕೇರಳ, ಗೋವಾ, ದೆಹಲಿ ಶಿಕ್ಷಣ ಮಾದರಿ ಅಧ್ಯಯನ ಕುರಿತು ಮಾತನಾಡುತ್ತಿರುವ ಸಚಿವ ಶ್ರೀನಿವಾಸ ಮೊದಲು ನಮ್ಮ ರಾಜ್ಯದ ಮಾದರಿ ಅರಿತು ಮುಂದುವರಿಯಬೇಕು ಎಂದು ಅವರು ತಿಳಿಸಿದರು.
ವಿಎಸ್‌ಕೆ ವಿವಿ ವಿವರಣೆ ಕೇಳಿದ ಸರ್ಕಾರ: ಇದೇ ವೇಳೆ ಇಲ್ಲಿನ ವಿಜಯನಗರ ಕೃಷ್ಣದೇವರಾಯ ವಿವಿಯಲ್ಲಿ ನಡೆಯುತ್ತಿರುವ ನೇಮಕಾತಿ ವಿವಾದ ಕುರಿತು ವಿವರಣೆ ನೀಡುವಂತೆ ಸರ್ಕಾರ ವಿವಿ ಆಡಳಿತ ಮಂಡಳಿಯನ್ನು ಕೇಳಿದೆ ಎಂದ ಅವರು, ವಿವಿಯಲ್ಲಿ ನಡೆಯುತ್ತಿರುವ ನೇರ ನೇಮಕಾತಿ ಕುರಿತು ದೃಶ್ಯಮಾಧ್ಯಮದಲ್ಲಿ ವರದಿ ಪ್ರಸಾರ ಆದ ಜತೆಗೆ ಮೇ 29ರಂದು ಅಖೀಲ ಭಾರತ ವಿದ್ಯಾರ್ಥಿ ಪರಿಷತ್ ದೂರು ನೀಡಿತ್ತು. ಎಬಿವಿಪಿ ಕಾರ್ಯಕರ್ತರು ಈ ಕುರಿತು ನನಗೂ ಸಹ ದೂರು ಸಲ್ಲಿಸಿದ್ದರು. ಇವನ್ನು ಆಧರಿಸಿ, ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಅಪರ ಮುಖ್ಯ ಕಾರ್ಯದರ್ಶಿ ವಿವಿಯ ಕುಲಪತಿ, ಕುಲಸಚಿವರಿಗೆ ಪತ್ರ ಬರೆದು ವಿವರಣೆ ಕೇಳಿದ್ದಾರೆ ಎಂದರು. ಅಗತ್ಯ ಎನಿಸಿದರೆ ಮುಂದಿನ ಅಧಿವೇಶನದ ವೇಳೆ ಸದನದಲ್ಲೂ ಸಹ ಈ ಕುರಿತು ವಿಷಯ ಪ್ರಸ್ತಾಪ ಮಾಡಲಿದ್ದೇನೆ ಎಂದರು.