ಬಳ್ಳಾರಿ: ವಿದ್ಯಾರ್ಥಿಗಳಿಗೆ ತ್ವರಿತವಾಗಿ ಬಸ್‌ಪಾಸ್ ವಿತರಿಸಬೇಕು. ಬಸ್ ಪಾಸ್ ದರ ಏರಿಕೆ ಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಅಖೀಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಎಸ್ಸಾರ್ಟಿಸಿ ಡಿಪೊ ಎದುರು ಪ್ರತಿಭಟನೆ ನಡೆಸಿದರು.
ಶಾಲಾ-ಕಾಲೇಜುಗಳು ಕಳೆದ ಮೇ ತಿಂಗಳಲ್ಲೇ ರಾಜ್ಯಾದ್ಯಂತ ಪ್ರಾರಂಭವಾಗಿವೆ. ವಿದ್ಯಾರ್ಥಿಗಳು ಸುಗಮವಾಗಿ ತರಗತಿಗಳಿಗೆ ಹಾಜರಾಗಲು ಬಸ್ ಪಾಸ್ ಅತ್ಯಗತ್ಯವಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಬಸ್ ಪಾಸ್ ದೊರೆಯದೆ ಪ್ರತಿದಿನ ವಿದ್ಯಾರ್ಥಿಗಳು ಬಸ್ ಟಿಕೆಟ್‌ಗೆ ಅಧಿಕ ಹಣ ವ್ಯಯಿಸಿ ಪ್ರಯಾಣಿಸುವಂತಾಗಿದೆ. ಬಡ ವಿದ್ಯಾರ್ಥಿಗಳು ಇನ್ನು ತರಗತಿಗಳಿಗೆ ಬರುತ್ತಿಲ್ಲ. ಇವರ ಪಾಲಕರಿಗೆ ಶಾಲಾ-ಕಾಲೇಜು ಶುಲ್ಕ ಕಟ್ಟಿ ಬಸ್ ಪಾಸ್‌ಗೆ ಸಾವಿರ ರೂ. ಪಾವತಿಸುವುದೇ ಹೊರೆಯಾಗಿದೆ. ಇಂತಹ ಸಂದರ್ಭದಲ್ಲಿ ಸಾರಿಗೆ ಇಲಾಖೆ ಪಾಸ್‌ನ್ನು ತಿಂಗಳುಗಟ್ಟಲೇ ತಡ ಮಾಡಿಕೊಟ್ಟರೆ ಬಸ್ ಪಾಸ್ ದರದ ಎರಡರಷ್ಟು ಹಣವನ್ನು ಕೇವಲ ಒಂದು ತಿಂಗಳಲ್ಲಿ ಬಸ್ ಟಿಕೆಟ್‌ಗೆ ವ್ಯಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಬಸ್ ಪಾಸ್ ಇನ್ನೂ ಮುದ್ರಣವಾಗದಿರುವುದು ಸರ್ಕಾರದ ಬೇಜವಾಬ್ದಾರಿ ಎತ್ತಿ ತೋರಿಸುತ್ತದೆ. ಕೇವಲ ಈ ಬಾರಿ ಮಾತ್ರವಲ್ಲ. ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲೂ ಈ ಸಮಸ್ಯೆ ಮರುಕಳಿಸುತ್ತಿದೆ. ಮೇ ತಿಂಗಳಲ್ಲೇ ಶಾಲಾ ಕಾಲೇಜುಗಳನ್ನು ಆರಂಭಿಸುವಂತೆ ಆದೇಶ ಹೊರಡಿಸುವ ಸರ್ಕಾರ ಯಾವುದೇ ಪೂರ್ವ ತಯಾರಿ ಇಲ್ಲದೇ ಕೇವಲ ನಾಮಕಾವಸ್ಥೆಗೆ ಆದೇಶ ಹೊರಡಿಸಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಕೂಡಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಿ, ಅಲ್ಲಿಯವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಶುಲ್ಕ ಕಟ್ಟಿದ ರಶೀದಿ/ಗುರುತಿನ ಚೀಟಿಯೊಂದಿಗೆ ಓಡಾಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಸ್ ಪಾಸ್ ದರ ಏರಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಬರ ಪರಿಸ್ಥಿತಿ ಆವರಿಸಿರುವ ಹಿನ್ನೆಲೆಯಲ್ಲಿ ಜನಜೀವನ ಸಂಕಷ್ಟದಲ್ಲಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಇಂಥ ನಿರ್ಧಾರವನ್ನು ಕೈಗೊಂಡಿರುವುದು ಸಮಂಜಸವಲ್ಲ. ಆದ್ದರಿಂದ ಕೂಡಲೇ ನಿರ್ಣಯ ಕೈ ಬಿಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಗೋವಿಂದ, ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಜಗದೀಶ್ ನೇಮಕಲ್, ಜಂಟಿ ಕಾರ್ಯದರ್ಶಿ ರವಿಕಿರಣ, ಸದಸ್ಯರಾದ ರಂಗಸ್ವಾಮಿ, ಕಂಬ್ಳಿ ಮಂಜುನಾಥ, ನಿಂಗರಾಜ, ರವಿಕುಮಾರ್ ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಇದ್ದರು.