ಬಳ್ಳಾರಿ: ಪ್ರತಿ ದಿನ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ತಾಪಂ ಸದಸ್ಯ ಯು. ಬೋಗರಾಜ್ ಹೇಳಿದರು.
ತಾಲೂಕಿನ ಕೋಳಗಲ್ಲು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ಬಳ್ಳಾರಿ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗ್ರಾಮ ಪಂಚಾಯತಿ ಕೋಳಗಲ್ಲು ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಯೋಗದ ಮಹತ್ವ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಗವು ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಕೊಡುಗೆಯಾಗಿದ್ದು, ಭಾರತೀಯರಾದ ನಾವು ಪ್ರತಿ ದಿನ ಯೋಗವನ್ನು ಮಾಡುವುದರಿಂದ ಮಾನಸಿಕ ಒತ್ತಡದಿಂದ ಬರುವ ಅನೇಕ ರೋಗಗಳನ್ನು ನಿಗ್ರಹಿಸಬಹುದು ಎಂದರು.
ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ಉಪನಿರ್ದೇಶಕ ಡಾ. ಜಿ.ಡಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನದಲ್ಲಿ ಯೋಗ ಮತ್ತು ಧ್ಯಾನ ಅಳವಡಿಸಿಕೊಂಡರೆ ಮನಸ್ಸಿನ ಮೇಲೆ ಹಿಡಿತ ಸಾಧಿಸಬಹುದು ಎಂದರು.
ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಗ್ರಾಪಂ ಅಧ್ಯಕ್ಷ ಸಿದ್ದಮನಹಳ್ಳಿ ಹುಲಗೆಪ್ಪ ಚಾಲನೆ ನೀಡಿದರು. ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ಯೋಗದ ಅಭ್ಯಾಸ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಕೆ. ಗಾದಿಲಿಂಗಪ್ಪ, ದೈಹಿಕ ಶಿಕ್ಷಕ ವರದೆಂದ್ರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೇಶಾವಲಿ, ಸದಸ್ಯ ಈರಣ್ಣ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು. ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರ ಸಹಾಯಕ ಎನ್. ರಾಮಕೃಷ್ಣ ಸ್ವಾಗತಿದರು.