Advertisement

ವಿಎಸ್‌ಕೆ ವಿವಿಗೆ ನ್ಯಾಕ್‌ನಿಂದ ಸಿ ಗ್ರೇಡ್‌

03:53 PM Nov 20, 2019 | Naveen |

„ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ನ್ಯಾಕ್‌ (ನ್ಯಾಷನಲ್‌ ಅಸಸ್ಮೆಂಟ್‌ ಆ್ಯಂಡ್‌ ಅಕ್ರಿಡಿಟೇಷನ್‌ ಕೌನ್ಸಿಲ್‌) ವತಿಯಿಂದ “ಸಿ’ ಗ್ರೇಡ್‌ ಲಭಿಸಿದೆ. ಆದರೆ ಇನ್ನೂ ಉತ್ತಮ ಗ್ರೇಡ್‌ ನೀಡುವಂತೆ ಸಮಿತಿಗೆ ಮೇಲ್ಮನವಿ ಸಲ್ಲಿಸಲು ವಿವಿ ಕುಲಪತಿಗಳು ಸಿದ್ಧತೆ ನಡೆಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ, ಸಂಶೋಧನೆ ಸೇರಿ ಇತರೆ ಮೂಲಸೌಲಭ್ಯಗಳಿಗಾಗಿ ನ್ಯಾಕ್‌ ವತಿಯಿಂದ ಅನುದಾನ ಲಭಿಸಲಿದೆ.

Advertisement

ಅದಕ್ಕಾಗಿ ದಶಕದ ಅಂಚಿನಲ್ಲಿರುವ ವಿಎಸ್‌ ಕೆ ವಿವಿಯ ಹಿಂದಿನ ಐದು ವರ್ಷಗಳ ಸಾಧನೆ, ಬೋಧಕ, ಬೋಧಕೇತರ ಸಿಬ್ಬಂದಿ ಲಭ್ಯತೆ, ಮೂಲಸೌಲಭ್ಯಗಳು, ಸಂಶೋಧನೆ, ವಿದ್ಯಾರ್ಥಿಗಳ ಸಂಖ್ಯೆ ಸೇರಿದಂತೆ ಇನ್ನಿತರೆ ಅಂಶಗಳುಳ್ಳ ವರದಿಯನ್ನು ಕಳೆದ 2018ರಲ್ಲಿ ಅಂದಿನ ಕುಲಪತಿಗಳು ನ್ಯಾಕ್‌ ಸಮಿತಿಗೆ ಸಲ್ಲಿಸಿದ್ದರು. ಈ ವರದಿಯನ್ನು ಆಧರಿಸಿ ಇಲ್ಲಿನ ಕಟ್ಟಡ, ರಸ್ತೆಗಳು ಸೇರಿದಂತೆ ಇನ್ನಿತರೆ ಮೂಲಸೌಲಭ್ಯಗಳ ಬಗ್ಗೆ ಆನ್‌ಲೈನ್‌ ಮೂಲಕ ಪರಿಶೀಲನೆ ನಡೆಸಿರುವ ಪುಣೆ ವಿಶ್ವವಿದ್ಯಾಲಯದ ಕುಲಪತಿಗಳ ನೇತೃತ್ವದ ಸಮಿತಿ ಈಚೆಗೆ ವಿವಿಗೆ ಖುದ್ದು ಭೇಟಿ ನೀಡಿತ್ತು.

ವಿವಿಯಲ್ಲಿನ ಬೋಧನೆಯ ಗುಣಮಟ್ಟ, ಗ್ರಂಥಾಲಯ, ಬೋಧಕ,ಬೋಧಕೇತರ ಸಿಬ್ಬಂದಿ ಲಭ್ಯತೆ, ವಿದ್ಯಾರ್ಥಿಗಳ ಸಂಖ್ಯೆ, ಸಂಶೋಧನೆಗೆ ಪೂರಕ ವಾತಾವರಣ ಸೇರಿದಂತೆ ಇನ್ನಿತರೆ ವಿಷಯಗಳನ್ನುಪರಿಶೀಲನೆ ನಡೆಸಿದ ತಂಡ ಈ ವೇಳೆ ವಿವಿಯಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ.

ಇದರಿಂದ ನ್ಯಾಕ್‌ ಸಮಿತಿಯಿಂದ ವಿಎಸ್‌ಕೆ ವಿವಿಗೆ “ಸಿ’ ಗ್ರೇಡ್‌ ಲಭಿಸಿದ್ದು, ಉತ್ತಮ ಗ್ರೇಡ್‌ಗಾಗಿ ಸಮಿತಿಗೆ ಶೀಘ್ರದಲ್ಲೇ ಕುಲಪತಿಗಳು ಮೇಲ್ಮನವಿ ಸಲ್ಲಿಸಲಿದ್ದಾರೆ. ವಿಎಸ್‌ಕೆ ವಿವಿಯಲ್ಲಿ ಈಚೆಗೆ 40ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಹಿಂದಿನ ಕುಲಪತಿಗಳು ಬೋಧಕ ಸಿಬ್ಬಂದಿ ನೇಮಕಾತಿ ಬಳಿಕ ನ್ಯಾಕ್‌ ಮಾನ್ಯತೆಗಾಗಿ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ, ನೇಮಕಾತಿ ಪೂರ್ವದಲ್ಲೇ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಕಳೆದ ಎರಡೂವರೆ ತಿಂಗಳಲ್ಲಿ ವಿವಿ ಆವರಣದಲ್ಲಿ ಸುಮಾರು 8 ಕೋಟಿ ರೂ.ಅನುದಾನದಲ್ಲಿ ರಸ್ತೆ, ಸಭಾಂಗಣ, ಲೈಪ್‌ ಸೈನ್ಸ್‌ ಬ್ಲಾಕ್‌ ಸೇರಿ ಅಗತ್ಯ ಮೂಲಸೌಲಭ್ಯಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಉತ್ತಮ ವಾತಾವರಣ ನಿರ್ಮಿಸಲು 460ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ನ್ಯಾಕ್‌ ಸಮಿತಿಗೆ ಬೇಕಾದ ಎಲ್ಲ ಸೌಲಭ್ಯ, ವ್ಯವಸ್ಥೆಯನ್ನೂ ಮಾಡಲಾಗಿದೆ.
ಹೀಗಾಗಿ ಸಿ ಗಿಂತಲೂ ಉತ್ತಮ ಗ್ರೇಡ್‌ಗಾಗಿ 15 ದಿನಗಳೊಳಗಾಗಿ ನ್ಯಾಕ್‌ಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಕುಲಪತಿ ಪ್ರೊ. ಸಿದ್ದು ಪಿ. ಅಲಗೂರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next