ಬಳ್ಳಾರಿ: ವಿಶ್ವದ ಪ್ರಭಾವಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಯಾವುದೇ ವಿಶ್ವವಿದ್ಯಾಲಯ ಸ್ಥಾನ ಪಡೆಯದಿರುವುದು ದುರದೃಷ್ಟಕರ ಸಂಗತಿ ಎಂದು ವಿಎಸ್‌ಕೆ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಂ.ಎಸ್. ಸುಭಾಶ್ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಅಂಬೇಡ್ಕರ್ ಸಭಾಂಗಣದಲ್ಲಿ ವಿವಿಯ ಎಸ್‌ಸಿ, ಎಸ್‌ಟಿ ನೌಕರರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ವಿವಿಯ ಪ್ರಸಕ್ತ ವರ್ಷದ ಕಾರ್ಯ ಚಟುವಟಿಕೆ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ಈಗಾಗಲೇ ಖಾಸಗೀಕರಣವಾಗಿದೆ. ಇದು ವಿವಿಗಳಿಗೂ ಆವರಿಸಿದ್ದು, ಶೀಘ್ರದಲ್ಲೇ ಖಾಸಗೀಕರಣ ಉನ್ನತ ಶಿಕ್ಷಣಕ್ಕೂ ಕಾಲಿರಿಸಿದರೂ ಅಚ್ಚರಿಪಡುವಂತಿಲ್ಲ ಎಂದ ಅವರು, ಸಂಶೋಧನಾ ವಿದ್ಯಾರ್ಥಿಗಳು ಯಾವುದೇ ಕೆಲಸ ಕೈಗೆತ್ತಿಕೊಂಡರೂ ತಮ್ಮದೇ ಅದ ಛಾಪು ಮೂಡಿಸಬೇಕು. ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆಯಾ ಭಾಷಾಜ್ಞಾನಕ್ಕೆ ತಕ್ಕಂತೆ ಉದ್ಯೋಗಾವಕಾಶಗಳು ಹೇರಳವಾಗಿವೆ ಎಂದು ತಿಳಿಸಿದರು. ವಿವಿಯಲ್ಲಿ ಉದ್ಯೋಗ ನಿಶ್ಚಿತತೆ, ಗ್ರಂಥಾಲಯ ಮತ್ತು ಮೂಲಸೌಲಭ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದ ಸುಭಾಷ್ ಅವರು, ಬೋಧಕ ಸಿಬ್ಬಂದಿ ನೇಮಕ, ನ್ಯಾಕ್, 12ಬಿ ಮಾನ್ಯತೆ ಇವು ತಮ್ಮ ಅವಧಿಯಲ್ಲಾದ ಮುಖ್ಯ ಕೆಲಸಗಳು ಎಂದು ಸ್ಮರಿಸಿದರು.
ಮುಖ್ಯ ಅತಿಥಿ ಕನ್ನಡ ವಿವಿಯ ಪ್ರೊ. ಗಣೇಶ ಮೊಗಳ್ಳಿ ಮಾತನಾಡಿ, ಮಾನವ ಸಂಪತ್ತು ಸದ್ಬಳಕೆ, ದಲಿತರಿಗೆ ಸೂಕ್ತ ಸ್ಥಾನಮಾನ ಹಾಗೂ ಅವಕಾಶಗಳ ಕುರಿತು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕಲ್ಯಾಣ (ಹೈದ್ರಾಬಾದ್) ಕರ್ನಾಟಕ ಭಾಗದಲ್ಲಿ ದಲಿತ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದರು.
ಸಂಘದ ಅಧ್ಯಕ್ಷ ಪ್ರೊ. ಶಾಂತಾನಾಯ್ಕ ಮಾತನಾಡಿ, ಉತ್ತಮ ಅಂಕ ಪಡೆದ ಹಿಂದುಳಿದ ವರ್ಗದ ವಿದ್ಯಾರ್ಥಿಗೆ ಸಂಘದ ವತಿಯಿಂದ ವಾರ್ಷಿಕ ಚಿನ್ನದ ಪದಕವನ್ನು ವಿತರಿಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರು ಮಾತನಾಡಿ, ಜಾತಿ, ಧರ್ಮ, ವರ್ಣಬೇಧ ಮರೆತು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಎಲ್ಲ ಬೋಧಕರು ಮುಂದಾಗಬೇಕು. ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯನ್ನು ಗಣನೀಯವಾಗಿ ಏರಿಸಿ ಮುಂಬರುವ ದಿನಗಳಲ್ಲಿ 5 ಸಾವಿರ ಪ್ರವೇಶಾತಿ ಹೊಂದುವ ಗುರಿ ಹೊಂದಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಆಡಳಿತ ಕುಲಸಚಿವೆ ಪ್ರೊ. ಬಿ.ಕೆ. ತುಳಸಿಮಾಲಾ, ಮೌಲ್ಯಮಾಪನ ಕುಲಸಚಿವ ಪ್ರೊ. ಕೆ.ರಮೇಶ ಮಾತನಾಡಿದರು. ದೈಹಿಕ ಶಿಕ್ಷಣ ವಿಭಾಗದ ಹನುಮಂತಯ್ಯ ಪೂಜಾರಿ ನಿರೂಪಿಸಿದರು. ಪ್ರೊ. ಓಲೇಕಾರ ವಂದಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.