ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಆಡಿಯೋ ತುಣುಕುಗಳು ವೈರಲ್ ಆಗಿದ್ದು, ಅಕ್ರಮದ ಆರೋಪಕ್ಕೆ ಮತ್ತಷ್ಟು ಪುಷ್ಟಿ ಬಂದಂತಾಗಿದೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಹೈ.ಕ ಭಾಗಕ್ಕೆ ಮೀಸಲಾದ 371(ಜೆ)ಯಡಿ 55 ಬೋಧಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಯಲ್ಲಿ ಆರಂಭದಿಂದಲೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರೇ ಬೋಧಕೇತರ ಹುದ್ದೆಗಳಿಗೆ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಈ ನೇಮಕಾತಿಗಾಗಿ ಪ್ರತಿ ಹುದ್ದೆಗೆ 10ರಿಂದ 15 ಲಕ್ಷ ರೂ. ಡೀಲ್ ನಡೆಯುತ್ತಿದೆ ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಈಗಾಗಲೇ ಆರೋಪಿಸಿದೆ. ಈ ಆರೋಪಕ್ಕೆ ಪುಷ್ಟಿ ಎಂಬಂತೆ ನೇಮಕಾತಿ ಸಂಬಂಧ ನಡೆದ ಮೊಬೈಲ್ ಸಂಭಾಷಣೆಯ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ವೈರಲ್ ಆಗಿರುವ ಒಂದು ಆಡಿಯೋ ತುಣುಕಲ್ಲಿ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ವ್ಯಕ್ತಿಗಳು ಬೋಧಕೇತರ ಹುದ್ದೆಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ. ಇದರಲ್ಲಿ ಆಕಾಂಕ್ಷಿಯು ‘ತನ್ನೊಂದಿಗೆ ತನ್ನ ಪತ್ನಿಯನ್ನೂ ಖಾಯಂ ಮಾಡಿಕೊಡಲು ಹಣ ಎಷ್ಟಾಗಬಹುದು? ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕೂಡಲೇ ಬುಕ್ ಮಾಡಿಸಿ’ ಎನ್ನುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೂಬ್ಬ ವ್ಯಕ್ತಿ ‘ಸಾಹೇಬರೇ ಮಾಡ್ತೀನಿ ಅಂತಿದ್ದಾರೆ’ ಎಂದು ಉತ್ತರಿಸಿದ್ದಾನೆ. ಇದೇ ಆಡಿಯೋದಲ್ಲಿ ವಿವಿಯ ಇನ್ನಿಬ್ಬರ ಹೆಸರುಗಳನ್ನೂ ಪ್ರಸ್ತಾಪಿಸಲಾಗಿದೆ.
ಮತ್ತೂಂದು ಆಡಿಯೋದಲ್ಲಿ ಹೆಸರು ಗೊತ್ತಿಲ್ಲದ ವ್ಯಕ್ತಿಯೊಬ್ಬ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬರೊಂದಿಗೆ ಮಾತನಾಡಿ ಹುದ್ದೆಗಳ ಖಾಯಂಗೆ ನಡೆದಿರುವ ಪ್ರಕ್ರಿಯೆ ಬಗ್ಗೆ ಕೇಳುತ್ತಾನೆ. ಇದಕ್ಕೆ ಮಹಿಳೆ ‘ಎಲ್ಲ ಮಾತುಕತೆ ಆಗಿದೆ. ಸಂಬಂಧಪಟ್ಟವರಲ್ಲೂ ಮಾತನಾಡಿರುವೆ. 10 ಲಕ್ಷ ರೂ. ಕೊಡಬೇಕಂತೆ. ಹಣ ಕೊಟ್ಟರೆ, ಹುದ್ದೆ ಖಾಯಂ ಆಗಲಿದೆ ಎಂದೂ ಹೇಳಿದ್ದಾರೆ. ಅಲ್ಲದೇ, ಶೀಘ್ರದಲ್ಲೇ ಅವಧಿ ಮುಗಿಯಲಿರುವ ವಿಸಿಯವರು, ಹೋಗುವ ಮುನ್ನ ಆಪಾಯಿಟ್ಮೆಂಟ್ ಆರ್ಡರ್‌ಗಳನ್ನು ಕೊಟ್ಟು ಹೋಗುತ್ತಾರೆ ಎಂಬ ಅಂಶವನ್ನು ಸಹ ಮಹಿಳೆ ಆ ವ್ಯಕ್ತಿಯ ಬಳಿ ಹೇಳಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿದೆ. ಒಟ್ಟಾರೆ, ಈ ಆಡಿಯೋ ತುಣುಕುಗಳ ಸೂಕ್ತ ತನಿಖೆ ನಡೆಸಿದರೆ ಮಾತ್ರ ಸತ್ಯಾಸತ್ಯತೆ ಹೊರಬೀಳಲಿದೆ.
ಎಬಿವಿಪಿ ಆರೋಪ-ದೂರು: ವಿಎಸ್‌ಕೆ ವಿವಿಯಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಈಗಾಗಲೇ ಆರೋಪಿಸಿ ವಿವಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರು ಸಲ್ಲಿಸಿದ ಕಾರ್ಯಕರ್ತರು, ಕುಲಪತಿಗಳ ಮೊಬೈಲ್ ಟ್ರ್ಯಾಪ್ ಮಾಡುವಂತೆಯೂ ದೂರಿನಲ್ಲಿ ಕೋರಿದ್ದಾರೆ. ಅಲ್ಲದೇ, ಬೆಂಗಳೂರಿಗೆ ತೆರಳಿ ರಾಜ್ಯಪಾಲರಿಗೂ ದೂರು ಸಲ್ಲಿಸಿದ್ದು, ಸೂಕ್ತ ತನಿಖೆಯಾದಾಗ ಮಾತ್ರ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳು ಬಹಿರಂಗವಾಗಲಿವೆ.
ವಿಎಸ್‌ಕೆ ವಿವಿಯಲ್ಲಿ ಗುತ್ತಿಗೆ ಆಧಾರಿತ ನೌಕರರಲ್ಲಿ ಎರಡು ಗುಂಪುಗಳಿವೆ. ಅರ್ಹರಿರುವ ಒಂದು ಗುಂಪು ನೇಮಕಾತಿಗೆ ಒತ್ತಾಯಿಸುತ್ತಿದೆ. ಅನರ್ಹರಿರುವ ಮತ್ತೂಂದು ಗುಂಪು ನೇಮಕಾತಿ ತಡೆಯುವಂತೆ ಒತ್ತಡ ಹೇರುತ್ತಿದೆ. ನೇಮಕಾತಿ ಸ್ಥಗಿತಗೊಂಡರೆ ಇವರು ಗುತ್ತಿಗೆ ನೌಕರರಾಗಿ ಮುಂದುವರೆಯಬೇಕೆಂಬ ಉದ್ದೇಶದಿಂದ ಕ್ರಿಮಿನಲ್ ಮೈಂಡ್‌ಸೆಟ್ನಿಂದ ಎಬಿವಿಪಿ ನೇತೃತ್ವದಲ್ಲಿ ಈ ಷಡ್ಯಂತ್ರ ನಡೆಸುತ್ತಿದ್ದಾರೆ. ಆದರೂ, 371(ಜೆ) ಅಡಿ ನೇಮಕಾತಿ ನಡೆಯಬೇಕು. ಇದರಲ್ಲಿ ಏನಾದರೂ ಅಕ್ರಮ ನಡೆದಿದೆ ಎಂದಾದರೆ ತನಿಖೆಯಾಗಲಿ.
•
ಪ್ರೊ| ಎಂ.ಎಸ್.ಸುಭಾಷ್,
ಕುಲಪತಿಗಳು, ವಿಎಸ್‌ಕೆ ವಿವಿ, ಬಳ್ಳಾರಿ.