Advertisement

ಶಾಲೆಯತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

01:23 PM May 30, 2019 | Team Udayavani |

ಬಳ್ಳಾರಿ: ಸತತ ಎರಡು ತಿಂಗಳ ಕಾಲ ರಜೆಯ ಮಜಾ ಅನುಭವಿಸಿದ ವಿದ್ಯಾರ್ಥಿಗಳು ಮೇ 29 ರಿಂದ ಚಾಲನೆ ಪಡೆದುಕೊಂಡ ಶಾಲೆಗಳತ್ತ ಖುಷಿಯಿಂದಲೇ ಬುಧವಾರ ಹೆಜ್ಜೆ ಹಾಕಿದರು.

Advertisement

ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲೆಗಳನ್ನು ತಳೀರು ತೋರಣಗಳಿಂದ ಸಿಂಗರಿಸಲಾಗಿದ್ದು, ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು. ಕೆಲ ವಿದ್ಯಾರ್ಥಿಗಳು ಮುಖ್ಯಶಿಕ್ಷಕರ ಪಾದಗಳಿಗೆ ನಮಸ್ಕರಿಸಿ ತರಗತಿ ಕೊಠಡಿಯೊಳಗೆ ಕಾಲಿಟ್ಟರು. ಇದೇ ವೇಳೆ ಮೊದಲ ದಿನವಾಗಿದ್ದರಿಂದ ಇಸ್ಕಾನ್‌ ಸಂಸ್ಥೆಯಿಂದ ತಯಾರಿಸಲಾಗಿದ್ದ ಸಿಹಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಅಲ್ಲದೇ, ಮೊದಲ ದಿನವೇ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ, 1 ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕ ವಿತರಿಸಲಾಯಿತು. ಬಳಿಕ ಶಾಲಾ ವ್ಯಾಪ್ತಿ ಪ್ರದೇಶದಲ್ಲಿ ವಿದ್ಯಾರ್ಥಿಗಳಿಂದ ಮೆರವಣಿಗೆ ತೆರಳಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಾತಿ ಮಾಡಿಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸಿದರು. ಆಂಗ್ಲ ಮಾಧ್ಯಮ ಆರಂಭವಾಗುತ್ತಿರುವ ಶಿಕ್ಷಕರು, ಬ್ಯಾನರ್‌ಗಳನ್ನು ಹಿಡಿದು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದರ ಬಗ್ಗೆ ಜಾಗೃತಿ ಮೂಡಿಸಿದರು.

ಜಿಲ್ಲೆಯಲ್ಲಿ 1400ಕ್ಕೂ ಹೆಚ್ಚು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 197 ಸರ್ಕಾರಿ ಪ್ರೌಢಶಾಲೆ, 230 ಅನುದಾನಿತ, 87 ಅನುದಾನ ರಹಿತ, ಸಮಾಜ ಕಲ್ಯಾಣ ವ್ಯಾಪ್ತಿಯ ಶಾಲೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 2,750 ಶಾಲೆಗಳು ಇವೆ. ಈ ಎಲ್ಲ ಶಾಲೆಗಳು ಇಂದಿನಿಂದ ಚಾಲನೆ ಪಡೆದುಕೊಂಡಿದ್ದು, ಕೇಂದ್ರೀಯ ವಿದ್ಯಾಲಯ ಸೇರಿ ಜಿಲ್ಲೆಯಾದ್ಯಂತ ಒಟ್ಟು 4.81 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸರ್ಕಾರಿ ಹಿರಿಯ, ಕಿರಿಯ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪೂರೈಸುವ ಪಠ್ಯಪುಸ್ತಕಗಳನ್ನು ಎಲ್ಲ ಶಾಲೆಗಳಿಗೂ ಈಗಾಗಲೇ ಪೂರೈಕೆ ಮಾಡಲಾಗಿದೆ. ಕೆಲ ಶಾಲೆಗಳಲ್ಲಿ ಮೊದಲ ದಿನವೇ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಶಿಕ್ಷಕರು ವಿತರಿಸಿದ್ದಾರೆ. ಉರ್ದು ಸೇರಿ ಇತರೆ ಭಾಷಾ ಪಠ್ಯ ಪುಸ್ತಕಗಳು ಇನ್ನು ಬಂದಿಲ್ಲ. ಈ ವಾರದೊಳಗೆ ಬರುವ ಸಾಧ್ಯತೆಯಿದ್ದು, ಬಂದಾಕ್ಷಣ ಮಕ್ಕಳ ಕೈ ಸೇರಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next