Advertisement

ಸಸ್ಯಸಂತೆಯಲ್ಲಿ ವೈವಿಧ್ಯಮಯ ಸಸಿಗಳ ಪ್ರದರ್ಶನ-ಮಾರಾಟ

01:19 PM Jul 17, 2019 | Naveen |

ಬಳ್ಳಾರಿ: ವಿವಿಧ ಬಗೆಯ ತೋಟಗಾರಿಕೆ ಸಸಿಗಳು ಎಲ್ಲರಿಗೂ ದೊರೆಯಲಿ ಎಂಬ ಸದುದ್ದೇಶದಿಂದ ಇದೇ ಮೊದಲ ಬಾರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಿದ್ದ ಸಸ್ಯ ಸಂತೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ತಮಗಿಷ್ಟವಾದ ಸಸ್ಯಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಸಂತೆಯಲ್ಲಿ ಕಂಡು ಬಂತು. ಸಸ್ಯಸಂತೆಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ಜಿ.ಚಿದಾನಂದ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಖಾಸಗಿ ನರ್ಸರಿಗಳಲ್ಲಿ ಅಧಿಕ ಬೆಲೆಗೆ ಸಸ್ಯಗಳು, ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ವಿಚಾರ ಗಮನಕ್ಕೆ ಬಂದಿದೆ. ರೈತರಿಗೆ, ಕೈ ತೋಟ ಬೆಳೆಸುವ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಡಿಮೆ ದರಕ್ಕೆ ಸಸ್ಯಗಳನ್ನು ಮಾರಾಟ ಮಾಡಲಾಗುತ್ತದೆ ಎಂದರು.

ಜಿಲ್ಲೆಯ ಸಿರುಗುಪ್ಪ, ಸಂಡೂರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ ಹೂವಿನ ಹಡಗಲಿ, ಹರಪನಹಳ್ಳಿ ತಾಲೂಕಿನಲ್ಲಿರುವ ಇಲಾಖೆಯ ಸಸ್ಯ ಕ್ಷೇತ್ರಗಳಿಂದ ಬಂದ ವೈವಿಧ್ಯಮಯ ಸಸಿಗಳನ್ನು ಜಿಲ್ಲಾ ತೋಟಗಾರಿಕೆ ಇಲಾಖೆ ಕೇಂದ್ರದಿಂದ ಮಾರಾಟ ಮಾಡಲಾಗುತ್ತದೆ. ಜಿಲ್ಲಾ ಕೇಂದ್ರದಿಂದ ಇದು ಮೊದಲ ಸಸ್ಯಸಂತೆ ಆಗಿರುವುದರಿಂದ ಪ್ರಚಾರದ ಮೂಲಕ ಸಸಿಗಳನ್ನು ಕಡಿಮೆ ಬೆಲೆಗೆ ಖರೀದಿಸುವಂತೆ ಮಾರಾಟ ಮಾಡಲು ಪ್ರೇರೇಪಿಸಲಾಗುತ್ತದೆ ಎಂದರು.

ವೈವಿಧ್ಯಮಯ ಸಸಿಗಳ ಕಲರವ: ತೋಟಗಾರಿಕೆ ಇಲಾಖೆಯ ಕೇಂದ್ರದಲ್ಲಿ ಅರೇಲಿಯಾ, ಎರಾಂಥಿಮಮ್‌, ಅರೇಫಾಮ್ಸ್‌, ಅಲಂಕಾರಿಕಾ ಗಿಡಗಳು (ಪಾಲಿಥೀನ್‌ ಚೀಲ) ಹಾಗೂ ಅಲಂಕಾರಿಕ (ಕುಂಡಗಳಲ್ಲಿ), ಪೇರಲ, ಫ್ರೂಟ್ ಪ್ಲಾಂಟ್, ನೇರಳೆ, ಅಂಜೂರ, ತೆಂಗು (ಹೈಬ್ರಿಡ್‌), ತೆಂಗು (ಎತ್ತರದ ತಳಿ), ನುಗ್ಗೆ, ಕರಿಬೇವು, ಮ್ಯಾಂಗೋ, ಸೀತಾಫಲ, ಅಶೋಕ, ಮಲ್ಲಿಗೆ ಗಿಡ, ನಿಂಬೆ ಸೇರಿದಂತೆ 10 ಸಾವಿರಕ್ಕೂ ಅಧಿಕ ವಿವಿಧ ವೈವಿಧ್ಯಮಯ ಗಿಡಗಳನ್ನು ಪ್ರದರ್ಶನಕ್ಕಿಡಲಾಗಿದ್ದು ನೋಡುಗರಿಗೆ ಕಣ್ಮನ ಸೆಳೆಯುತ್ತಿವೆ.

ದರಗಳು ಹೀಗಿವೆ: ಖಾಸಗಿ ನರ್ಸರಿಯಲ್ಲಿ ಸಾಮಾನ್ಯವಾಗಿ ಗಿಡಗಳ ಬೆಲೆ ದುಪ್ಪಟ್ಟಾಗಿವೆ. ಇದರಿಂದ ಎಚ್ಚೆತ್ತುಕೊಂಡ ತೋಟಗಾರಿಕೆ ಇಲಾಖೆ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಾದ ತೋರಣಗಲ್ಲು, ದೇಶನೂರು, ಧರ್ಮಾಪುರ, ರಾಗಪುರ, ಮಾಲ್ವಿ, ಆನಂದದೇವನಹಳ್ಳಿ, ಬುಕ್ಕಸಾಗರದಿಂದ ವೈವಿಧ್ಯಮಯ ಪ್ರಭೇದಗಳ ಸಸಿಗಳನ್ನು ತರಿಸಲಾಗಿದ್ದು, ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

Advertisement

ನಿಗದಿಪಡಿಸಿದ ದರ: ಅರೇಲಿಯಾ- 15 ರೂ, ಎರಾಂಥಿಮಮ್‌ – 15 ರೂ, ಅರೇಫಾಮ್ಸ್‌ – 25 ರೂ, ಅಲಂಕಾರಿಕಾ ಗಿಡಗಳು (ಪಾಲಿಥೀನ್‌ ಚೀಲ) ಹಾಗೂ ಅಲಂಕಾರಿಕ (ಕುಂಡಗಳಲ್ಲಿ) – 110 ರೂ. ಅಶೋಕ – 8 ರೂ. ಮಲ್ಲಿಗೆ ಗಿಡ – 12 ರೂ. ಮಾವು – 25 ರೂ. ಪೇರಲ – 35 ರೂ. ತೆಂಗು – 60 ರೂ. ನಿಂಬೆ – 12 ರೂ. ಕರಿಬೇವು – 10 ರೂ. ನುಗ್ಗೆಕಾಯಿ ಗಿಡ – 8 ರೂ. ಗಳು ಅಂತ ಗಿಡ ಒಂದಕ್ಕೆ ದರ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರತ್ನಪ್ರಿಯಾ ಸೇರಿದಂತೆ ರೈತರು, ಸಾರ್ವಜನಿಕರು ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next