Advertisement

ರೋಟಾ ವೈರಸ್‌ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲೇ ಲಭ್ಯ

07:13 PM Sep 05, 2019 | Naveen |

ಬಳ್ಳಾರಿ: ಮಕ್ಕಳಲ್ಲಿ ಕಂಡುಬರುವ ರೋಟಾ ವೈರಸ್‌ ಅತಿಸಾರ ಬೇಧಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ರೋಟಾ ವೈರಸ್‌ ಲಸಿಕಾ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಬುಧವಾರ ಚಾಲನೆ ನೀಡಿದರು.

Advertisement

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ಮಕ್ಕಳು ಆರೋಗ್ಯವಂತ ಮಕ್ಕಳಬಾಗಬೇಕು. ಈ ಮೂಲಕ ಸದೃಢ ಭಾರತ ನಿರ್ಮಾಣವಾಗಬೇಕು ಎಂಬ ಆಶಯದಿಂದ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈ ಮುಂಚೆ ಮಕ್ಕಳಿಗೆ ಬರುವ ವಿವಿಧ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಲಾಗುತ್ತಿತ್ತು. ರೋಟಾ ವೈರಸ್‌ ಲಸಿಕೆಗೆ ಹೆಚ್ಚಿನ ಹಣ ತೆತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಕಿಸಬೇಕಾಗಿತ್ತು. ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಈ ಲಸಿಕೆ ನೀಡಲಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಲಸಿಕೆ ಹಾಕಿಸಬೇಕು ಎಂದು ಅವರು ಮನವಿ ಮಾಡಿದರು.

ಮಗುವಿನ 6 ವಾರ, 10 ವಾರ ಮತ್ತು 14ನೇ ವಾರದಲ್ಲಿ ಲಸಿಕೆಯನ್ನು ಬಾಯಿ ಮೂಲಕ 2.5 ಮಿಲೀ ಪ್ರಮಾಣದಲ್ಲಿ ಲಸಿಕೆಯನ್ನು ಹಾಕಿಸಲಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಸಕಾರ ಎಲ್ಲ ಬಡವರಿಗೆ ಆರೋಗ್ಯ ಕಾಪಾಡುವ ಕೆಲಸವನ್ನು ಮಾಡಲಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಿಗೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಸಿಬ್ಬಂದಿ ಬೇಡಿಕೆ ಈಡೇರಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು, ಈಗಾಗಲೇ ವಿಜಯಪುರ, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ 24 ಗಂಟೆಯೂ ಊಟದ ವ್ಯವಸ್ಥೆ ಹಾಗೂ ಅವರೊಂದಿಗೆ ಆಸ್ಪತ್ರೆಗೆ ಆಗಮಿಸುವವರಿಗೆ ತಂಗಲು ಆಸ್ಪತ್ರೆ ಬಳಿ ಶೆಲ್ಟರ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಕ್ಯಾಂಟೀನ್‌ ಆರಂಭಿಸಿ ಊಟದ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದಲೇ ನೀಡಬೇಕೇ ಅಥವಾ ರಿಯಾಯ್ತಿ ದರದಲ್ಲಿ ಕೊಡಬೇಕೇ ಎಂಬುದನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯ ಜೊತೆಗೆ ಸ್ನಾನಗೃಹ ನಿರ್ಮಿಸಲಾಗುವುದು ಮತ್ತು ಬಿಸಿ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಸಚಿವ ಶ್ರೀರಾಮುಲು ಹೇಳಿದರು.

Advertisement

ಔಷಧಕ್ಕಾಗಿ ಹೊರಚೀಟಿ ಬರೆದ್ರೆ ದೂರು ನೀಡಿ: ಎಲ್ಲ ರೀತಿಯ ಲಸಿಕೆಗಳು ಹಾಗೂ ಔಷಧಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಲಭ್ಯವಾಗುವಂತೆ ನಮ್ಮ ಸರ್ಕಾರ ವ್ಯವಸ್ಥೆ ಮಾಡಿದ್ದು, ವೈದ್ಯರೇನಾದರೂ ಔಷಧಗಳಿಗೆ ಹೊರಚೀಟಿ ಬರೆದುಕೊಟ್ಟು ಹೊರಗಡೆಯಿಂದ ತೆಗೆದುಕೊಂಡು ಬನ್ನಿ ಅಂತ ಹೇಳಿದರೆ, ಸಹಾಯವಾಣಿಗೆ ದೂರು ನೀಡಬೇಕು ಎಂದು ಸಾರ್ವಜನಿಕರಲ್ಲಿ ಕೋರಿದ ಸಚಿವ ಬಿ. ಶ್ರೀರಾಮುಲು, ಕೆಲವೇ ದಿನಗಳಲ್ಲಿ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗುತ್ತದೆ. ಒಂದು ವೇಳೆ ಬೇರೆ ಔಷಧಗಳು ಬೇಕಿದ್ದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿನ ಜನೌಷಧ ಮಳಿಗೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಪಡೆಯಬಹುದು ಎಂದವರು ತಿಳಿಸಿದರು.

ನಾನಾ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಬಳ್ಳಾರಿಯ ಕೌಲ್ ಬಜಾರ್‌ ಬಳಿಯ ಸೂಪರ್‌ ಸ್ಪೇಶಾಲಿಟಿ ಆಸ್ಪತ್ರೆಯನ್ನು 3 ತಿಂಗಳೊಳಗೆ ಆರಂಭಿಸುವುದಕ್ಕೆ ಪ್ರಯತ್ನಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯಕ್ಕೆ ಸಂಬಂಧಿಸಿದಂತೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಕುರಿತು ಹೆಚ್ಚಿನ ಪ್ರಚಾರವನ್ನು ಜಿಲ್ಲಾಧಿಕಾರಿಗಳು ಮಾಡಬೇಕು. ಅದು ಬಳ್ಳಾರಿಯಿಂದಲೇ ಆರಂಭವಾಗಲಿ ಎಂದು ಸೂಚಿಸಿದರು.

ಶಾಸಕ ಜಿ. ಸೋಮಶೇಖರ್‌ ರೆಡ್ಡಿ, ಸಂಸದ ವೈ. ದೇವೇಂದ್ರಪ್ಪ ಮಾತನಾಡಿದರು. ಈ ವೇಳೆ ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್, ಜಿಪಂ ಸಿಇಒ ಕೆ.ನಿತೀಶ್‌, ಮಾಜಿ ಸಂಸದ ಎಸ್‌. ಫಕೀರಪ್ಪ, ಆರೋಗ್ಯ ಸುರಕ್ಷತಾ ಸಮಿತಿಯ ಲಕ್ಷ್ಮಣ, ರೇಹನಾ ಬೇಗಂ, ಡಿಎಚ್ಒ ಡಾ| ಶಿವರಾಜ ಹೆಡೆ, ಜಿಲ್ಲಾಸ್ಪತ್ರೆಯ ಸರ್ಜನ್‌ ಬಸರೆಡ್ಡಿ, ಮಹಿಪಾಲರೆಡ್ಡಿ, ಡಾ| ಬಿ.ಕೆ. ಸುಂದರ್‌, ಡಾ| ಗುರುನಾಥ ಚವ್ಹಾಣ, ಡಾ| ಆರ್‌. ಅನಿಲಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next