Advertisement

ಹಾಲಿನ ಉತ್ಪನ್ನ ಎಫ್‌ಟಿಎ ವ್ಯಾಪ್ತಿಗೆ ಬೇಡ

04:50 PM Oct 12, 2019 | Team Udayavani |

ಬಳ್ಳಾರಿ: ಅಂತಾರಾಷ್ಟ್ರೀಯ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ವ್ಯಾಪ್ತಿಯಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ ಇಲ್ಲಿನ ರಾಬಕೋ ಆಡಳಿತ ಮಂಡಳಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹಾಲು ಉತ್ಪಾದಕರ ಸಂಘದ ನೂರಾರು ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಮುಕ್ತ ವ್ಯಾಪಾರ ಒಪ್ಪಂದವನ್ನು ಕೇಂದ್ರ ಸರ್ಕಾರ ಕೂಡಲೇ ಕೈಬಿಡಬೇಕು. ಎಫ್‌ಟಿಎಯಿಂದ ರೈತರ ಹಿತ ಕಾಪಾಡಬೇಕು. ಎಫ್‌ಟಿಎ ನೀತಿ ಹಾಲು ಉತ್ಪಾದಕರಿಗೆ ಮಾರಕವಾಗಿದ್ದು, ಕೂಡಲೇ
ಸರ್ಕಾರ ಕೈಬಿಟ್ಟು ರೈತರ ಆದಾಯ ಹೆಚ್ಚಿಸಬೇಕು. ವಿದೇಶಿ ಹಾಲಿನ ದಾಳಿಯಿಂದ ಸ್ವದೇಶಿ ಹಾಲಿನ ಹಿತವನ್ನು ಸರ್ಕಾರ ಕಾಪಾಡಬೇಕು. ಅಗ್ಗದ ಹಾಲಿನ ಉತ್ಪನ್ನಗಳಿಂದ ಸ್ವದೇಶಿ ಹೈನು ಉದ್ಯಮಕ್ಕೆ ಆಪತ್ತು ಬರಲಿದೆ. ಕೂಡಲೇ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಪ್ರತಿಭಟನಾನಿರತರು
ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿ 376 ಹಾಲು ಉತ್ಪಾದಕರ ಸಂಘಗಳಿದ್ದು, ಸುಮಾರು 30 ಸಾವಿರ ರೈತ ಕುಟುಂಬಗಳು ಇದನ್ನೇ ಆಶ್ರಯಿಸಿದ್ದಾರೆ. ಇದರಿಂದ ಅವರೆಲ್ಲರ ಬದುಕು ಮೂರಾಬಟ್ಟೆಯಾಗಲಿದೆ. ಜಿಲ್ಲೆಯಲ್ಲಿ ಈಗಾಗಲೇ ಬರಗಾಲ ಆವರಿಸಿದ್ದು, ಈ ವ್ಯಾಪ್ತಿಯ ಜಿಲ್ಲೆಯಲ್ಲಿ ಹೈನುಗಾರಿಕೆಯೇ ಪ್ರಮುಖ ಮೂಲ ಕಸಬಾಗಿದೆ. ನಿತ್ಯ 30 ಸಾವಿರ ರೈತರು ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದು, ನಿತ್ಯ 1.2ಲಕ್ಷ ಲೀಟರ್‌ ಹಾಲನ್ನು ಉತ್ಪಾದಿಸಿ ರಾಬಕೋ ಹಾಲು ಒಕ್ಕೂಟಕ್ಕೆ ಸರಬರಾಜು ಮಾಡಲಾಗುತ್ತಿದೆ. ಪ್ರತಿದಿನ ಅಂದಾಜು 40 ಲಕ್ಷ ರೂ.ವಹಿವಾಟು ನಡೆಯುತ್ತಿದ್ದು, ವಾರ್ಷಿಕವಾಗಿ ಸುಮಾರು
135 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಯುತ್ತಿದೆ. ಇದರಿಂದ ರೈತರು ಸಹ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಜಾರಿಗೊಳಿಸಿದರೆ ರೈತರು ಬೀದಿಗೆ ಬರಲಿದ್ದಾರೆ. ಕೂಡಲೇ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು. ನಿರ್ಲಕ್ಷಿಸಿದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್‌ ಬುಕ್ಕಾ, ಮಾರುಕಟ್ಟೆ ವ್ಯವಸ್ಥಾಪಕ ಡಾ| ಸುನೀಲ್‌, ಮಾರುಕಟ್ಟೆ ಅಧಿಕಾರಿ ವೈ.ಚಂದ್ರಶೇಖರ ರೆಡ್ಡಿ, ರವಿ ಕುಮಾರ್‌, ಉದಯಕುಮಾರ್‌, ದಾಸನಗೌಡ, ರಾಬಕೋ ಒಕ್ಕೂಟದ ನಿರ್ದೇಶಕಿ ಜಿಂಕಲ್‌ ನಾಗಮಣಿ, ರಾಬಕೊ ಒಕ್ಕೂಟದ ನಿರ್ದೇಶಕ ಮರುಳಸಿದ್ದನಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಗೋಣಿಬಸಪ್ಪ ಸೇರಿದಂತೆ ನೂರಾರು ಪದಾಧಿಕಾರಿಗಳು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next