Advertisement

ಬಸ್‌ ಪಾಸ್‌ ಉಚಿತವಾಗಿ ವಿತರಿಸಲು ಆಗ್ರಹ

03:48 PM Jun 19, 2019 | Team Udayavani |

ಬಳ್ಳಾರಿ: ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ಪಾಸ್‌ ವಿತರಿಸಬೇಕು. ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಎದುರು ವಾಹನ ನಿಲುಗಡೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಸರ್ಕಾರ ಕಳೆದ 2018-19ನೇ ಸಾಲಿನ ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ ಸೇರಿದಂತೆ ರಾಜ್ಯದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ ಪಾಸ್‌ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಯೋಜನೆ ಜರಿಗೆ ತರದೇ ರಾಜ್ಯ ಸರ್ಕಾರ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿದೆ. ರಾಜ್ಯಾದ್ಯಂತ ಬರಗಾಲ ಪರಿಸ್ಥಿತಿ ಆವರಿಸಿದ್ದು, ರೈತಾಪಿ ಕುಟುಂಬಗಳು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿವೆ. ಇಂದಿನ ಖಾಸಗಿ ಕಾಲೇಜುಗಳ ಡೊನೇಷನ್‌ ಹಾವಳಿ ಮತ್ತು ಶಿಕ್ಷಣ ಮಾರಾಟದ ವಸ್ತುವಾಗಿರುವಂತಹ ಈ ಪರಿಸ್ಥಿತಿಯಲ್ಲಿ ರಾಜ್ಯದ ಹಿಂದುಳಿದ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ದಿನಗಳಲ್ಲಿ ಹೆಚ್ಚಾಗಿ ಬಸ್‌ಪಾಸ್‌ ಪಡೆಯುತ್ತಿರುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರೇ ಆಗಿದ್ದು, ರಾಜ್ಯದಲ್ಲಿನ ಎಲ್ಲ ವರ್ಗದ, ಎಲ್ಲಾ ಸ್ತರದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.

ಇನ್ನು ಕಾಲೇಜು ಎದುರು ರಸ್ತೆಯ ಒಂದು ಬದಿಯಲ್ಲಿ ಹಲವಾರು ವಾಹನಗಳು ನಿಲುಗಡೆಯಾಗಿರುತ್ತವೆ. ಮತ್ತೂಂದು ಬದಿಯಲ್ಲಿ ಹಣ್ಣು, ಬಟ್ಟೆಯ ಅಂಗಡಿಗಳು ಇದ್ದು, ರಸ್ತೆಯಲ್ಲಿ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಈಗಾಗಲೇ ಹಲವಾರು ಬಾರಿ ಅಪಘಾತಗಳು ಸಂಭವಿಸಿದ್ದರೂ, ಈ ಸಮಸ್ಯೆ ಇತ್ಯರ್ಥವಾಗುತ್ತಿಲ್ಲ. ವಾಹನಗಳು ನಿಲುಗಡೆ ಮಾಡುವುದರಿಂದ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಕಾಲೇಜಿನ ಎಡಭಾಗದಲ್ಲಿ ಕಸದ ಗುಂಡಿಯನ್ನು ಸಹ ಮಾಡಿದ್ದು, ಸ್ವಚ್ಛತೆ ಕಾಪಾಡುವುದು ಕಷ್ಟಕರವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿನಿಯರು ಸುಗಮವಾಗಿ ಸಂಚರಿಸಲು ಪಾದಚಾರಿ ರಸ್ತೆಯನ್ನು ನಿರ್ಮಿಸಬೇಕು. ವಾಹನ ನಿಲುಗಡೆ, ಅಂಗಡಿಗಳನ್ನು ನಿಷೇಧಿಸಬೇಕು ಎಂದು ಅವರು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಎಬಿವಿಪಿ ನಗರ ಕಾರ್ಯದರ್ಶಿ ಮಂಜುನಾಥ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಯುವರಾಜ, ಜಿಲ್ಲಾ ಹಾಸ್ಟೆಲ್ ಪ್ರಮುಖ ಹೇಮರೆಡ್ಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ಕೌಶಿಕ್‌, ತಾಲೂಕು ಪ್ರಮುಖ ಪ್ರಮೋದ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next