Advertisement

ಮಳೆ ಹಾನಿ ಪರಿಹಾರಕ್ಕೆ ಪ್ರಸ್ತಾವನೆ

03:48 PM Oct 06, 2019 | Naveen |

ಬಳ್ಳಾರಿ: ಜಿಲ್ಲೆಯಲ್ಲಿ ಇತ್ತೀಚೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಾದ್ಯಂತ 557 ಮನೆಗಳು ಭಾಗಶಃ ಕುಸಿದಿದ್ದು, 4049 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಇದಕ್ಕೆ ಅಗತ್ಯ ಪರಿಹಾರ ವಿತರಿಸಲು ಅಗತ್ಯ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಶನಿವಾರ ಮಧ್ಯಾಹ್ನ ನಡೆದ ಸಂವಾದದಲ್ಲಿ ಮಾತನಾಡಿದರು. ಈ ಮೊದಲು ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಒಟ್ಟು 1043 ಮನೆಗಳು ಕುಸಿದಿವೆ. ಇದರಲ್ಲಿ ಭಾಗಶಃ ಕುಸಿದಿದ್ದ 952 ಮನೆಗಳಿಗೆ ತಲಾ 25 ಸಾವಿರ ರೂ. ಪರಿಹಾರ, ಅದಕ್ಕೂ ಹೆಚ್ಚು ಕುಸಿತ ಮನೆಗಳಿಗೆ ಹೆಚ್ಚು ಪರಿಹಾರ ಸೇರಿ ಒಟ್ಟು 2.52 ಕೋಟಿ ರೂ.ಪರಿಹಾರ ನೀಡಲಾಗಿದೆ. ಅದೇ ರೀತಿ ಇತ್ತೀಚೆಗೆ ನಿರಂತರವಾಗಿ ಜಿಲ್ಲೆಯಲ್ಲಿ ಸುರಿದ ಮಳೆಗೆ ವಿವಿಧ ತಾಲೂಕುಗಳಲ್ಲಿ ಒಟ್ಟು 557 ಮನೆಗಳು ಭಾಗಶಃ
ಕುಸಿದಿವೆ.

4049 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದಕ್ಕೆ ಪರಿಹಾರ ವಿತರಿಸಲು ಅಗತ್ಯ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಮಳೆಯಿಂದಾಗಿ ರಸ್ತೆಗಳು ದುರಸ್ತಿಯಾಗಿದ್ದು, ಅದಕ್ಕಾಗಿ 4.55 ಕೋಟಿ ರೂ. ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಇನ್ನು ಬಳ್ಳಾರಿ ಡಿಸಿ ಕಚೇರಿಯಲ್ಲಿ ಇ-ಆಫೀಸ್‌ ತೆರೆಯಲಾಗಿದ್ದು, ಸಲ್ಲಿಕೆಯಾಗುವ ಎಲ್ಲ ರೀತಿಯ ಅರ್ಜಿಗಳನ್ನು 30 ದಿನಗಳೊಳಗಾಗಿ ಇತ್ಯರ್ಥ ಪಡಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಒಟ್ಟು 578 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 251 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 377 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇದರಿಂದ ಕಚೇರಿಗೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಇದೀಗ 700 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಎಸಿ ಕಚೇರಿಯಲ್ಲಿ ಇ-ಆಫೀಸ್‌ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಇನ್ನೆರಡು ಇ-ಆಫೀಸ್‌ಗಳನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇನ್ನು ಭೂಮಿಗೆ ಸಂಬಂಧಿಸಿದಂತೆ ನಾಡಕಚೇರಿಯಲ್ಲಿ 11,400 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದ್ದು, ಇದರಿಂದ ಕಂದಾಯ ಇಲಾಖೆಯಲ್ಲಿ ನೀಡಲಾಗುವ ರ್‍ಯಾಂಕಿಂಗ್‌ನಲ್ಲಿ ಆಗಸ್ಟ್‌ ತಿಂಗಳಲ್ಲಿ 23ನೇ ಸ್ಥಾನದಲ್ಲಿದ್ದ ಬಳ್ಳಾರಿ ಜಿಲ್ಲೆ ಸೆಪ್ಟೆಂಬರ್‌ ತಿಂಗಳಲ್ಲಿ 7ನೇ ಸ್ಥಾನಕ್ಕೆ ಏರಿಕೆಯಾಗಿದೆ. ಇದರೊಂದಿಗೆ 73 ಕೋರ್ಟ್‌ ಆದೇಶಗಳನ್ನು ಪಾಸ್‌ ಮಾಡಲಾಗಿದೆ.

ಹೊಸ ಡಿಸಿ ಕಚೇರಿ ನಿರ್ಮಾಣ ಕಾರ್ಯ ತೀವ್ರಗೊಳ್ಳಲಿದೆ. ಡಿಸಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲು ಪಾಲಿಕೆಯಿಂದ ಶುದ್ಧ ಕುಡಿವ ನೀರಿನ ಘಟಕವನ್ನು ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕ ಶೌಚಾಲಯವನ್ನು ಸಹ ಶೀಘ್ರದಲ್ಲೇ ನಿರ್ಮಿಸಲಾಗುವುದು ಎಂದರು.

Advertisement

ಯುಜಿಡಿ, ಸ್ವತ್ಛತೆ ಕೆಟ್ಟದಾಗಿದೆ: ಇದೇ ಜಿಲ್ಲೆಯಲ್ಲಿ ಒಳಚರಂಡಿ ವ್ಯವಸ್ಥೆ, ಸ್ವತ್ಛತೆ, ಕುಡಿವ ನೀರಿನ ಸರಬರಾಜು ಅತ್ಯಂತ ಕೆಟ್ಟ ಪರಿಸ್ಥಿತಿಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಡಿಸಿ ನಕುಲ್‌, ನಗರದಲ್ಲಿ ಕುಡಿವ ನೀರಿನ ವಿತರಣಾ ಪದ್ಧತಿ ಅವೈಜ್ಞಾನಿಕವಾಗಿದೆ. ಅದಕ್ಕಾಗಿ ಕುಡಿವ ನೀರು, ಸ್ವಚ್ಛತೆಗಾಗಿ ಮೈಕ್ರೋ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ಮಾಡಲಾಗುತ್ತಿದೆ. ಇನ್ನು ಬೀದಿಬದಿ ವ್ಯಾಪಾರಿಗಳಿಗಾಗಿ ವೆಂಡಿಂಗ್‌ ಜೋನ್‌ ವ್ಯವಸ್ಥೆ ಮಾಡಿ, ಆಯಾ ರಸ್ತೆಯಲ್ಲಿನ ಬೀದಿಬದಿ ವ್ಯಾಪಾರಿಗಳು ಸೂಚಿಸಿದ ನಿರ್ದಿಷ್ಟ ಪ್ರದೇಶದಲ್ಲೇ ವ್ಯಾಪಾರ ಮಾಡುವಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಹಣದ ಕೊರತೆ: ನಗರದ ಹೃದಯಭಾಗದಲ್ಲಿನ ಗಡಗಿ ಚನ್ನಪ್ಪ ವೃತ್ತದಿಂದ ಡಾ| ರಾಜ್‌ಕುಮಾರ್‌ ರಸ್ತೆ ಅಗಲೀಕರಣಕ್ಕೆ ಹಣದ ಕೊರತೆಯಾಗಿದೆ. ಅಲ್ಲಿ ತೆರವುಗೊಳಿಸಬೇಕಾದ ಕಟ್ಟಡ, ನಿವೇಶನಗಳ ಬೆಲೆ ಹೆಚ್ಚಳವಾಗಿದ್ದು, 17 ಕೋಟಿ ರೂ. ಪರಿಹಾರ ನೀಡಬೇಕಾಗಿದೆ. ಅಷ್ಟು ಹಣದ ಕೊರತೆಯಿಂದಾಗಿ ರಸ್ತೆ ಅಗಲೀಕರಣ ನೆನೆಗುದಿಗೆ ಬೀಳುತ್ತಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರಿಗೆ ನೋಟಿಸ್‌: ಹೊಸಪೇಟೆಯಿಂದ ಆಂಧ್ರದ ಗಡಿಭಾಗದವರೆಗೆ ನಿರ್ಮಿಸಲಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 63 ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಈ ಕುರಿತಂತೆ ಸಂಬಂಧಪಟ್ಟ ಗ್ಯಾಮನ್‌ ಇಂಡಿಯಾ ಕಂಪನಿಗೆ ಮುಖ್ಯಸ್ಥರನ್ನು ಕರೆದು ಎಚ್ಚರಿಕೆ ನೀಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನೋಟಿಸ್‌ ಜಾರಿಗೊಳಿಸಿದರೂ ಕಾಮಗಾರಿ ಆರಂಭಿಸುತ್ತಿಲ್ಲ. ಹಾಗಾಗಿ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂವಾದದಲ್ಲಿ ಉಪಸ್ಥಿತರಿದ್ದ ಎಸ್‌ಪಿ ಸಿ.ಕೆ.ಬಾಬಾ ಅವರು, ಜಿಲ್ಲೆಯಲ್ಲಿ 2017ಕ್ಕಿಂತ 2019ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿಸಿದರು. ಎಡಿಸಿ ಸತೀಶ್‌ಕುಮಾರ್‌, ತಹಸೀಲ್ದಾರ್‌ ವಿಶ್ವಜಿತ್‌ ಮೆಹತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next