ಬಳ್ಳಾರಿ: ನೇರ ನೇಮಕಾತಿ, ಬಡ್ತಿ ಹುದ್ದೆಗಳನ್ನು ವೈಜ್ಞಾನಿಕ ಮಾನವಶಕ್ತಿ ಆಧಾರದ ಮೇಲೆ ಸೃಷ್ಟಿಸಬೇಕು. ಪ್ರೇರಕ ಬ್ಯಾಂಕ್ ಅಧಿಕಾರಿ, ಸಿಬ್ಬಂದಿಗೆ ಲಭಿಸುವ ಸೌಲಭ್ಯಗಳನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರಿಗೂ ವಿಸ್ತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕೆಜಿಬಿ ಬ್ಯಾಂಕ್ ಅಧಿಕಾರಿಗಳ ಸಂಘ, ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೆಗಡೆ, ಬ್ಯಾಂಕ್ ಆಡಳಿತ ಮಂಡಳಿ ನೀತಿಗಳನ್ನು ಕಟುವಾಗಿ ಟೀಕಿಸಿದರು. ಅದರಲ್ಲೂ ನಿವೃತ್ತಿ ಹೊಂದುತ್ತಿರುವ ಕಾಲದಲ್ಲಿ ಬಹುತೇಕ ಅಧಿಕಾರಿಗಳಿಗೆ ನ್ಯಾಯಯುತವಾಗಿ ದೊರೆಯಬೇಕಿದ್ದ ನಿವೃತ್ತಿ ಸೌಲಭ್ಯಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಇದು ತೀವ್ರ ಖಂಡನೀಯವಾಗಿದ್ದು, ಬ್ಯಾಂಕ್‌ನ ಅಧಿ ಕಾರಿ, ಸಿಬ್ಬಂದಿಗೆ ನ್ಯಾಯಯುತವಾಗಿ ಜಾರಿ ಮಾಡಬೇಕಿದ್ದ ಸೌಲಭ್ಯಗಳನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ಸಂಘದ ಕಾರ್ಯದರ್ಶಿ ಶ್ರೀಧರ ಜೋಷಿ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಗುರುಮೂರ್ತಿ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಬ್ಯಾಂಕ್‌ನಿಂದ ಯಾವುದೇ ಸೌಲಭ್ಯಗಳು ಜಾರಿಗೊಳಿಸಿಲ್ಲ. ಹಾಗಾಗಿ ಈ ಧರಣಿ ಅನಿರ್ವಾಯವಾಗಿದೆ. ಕಳೆದ ಹಲವು ತಿಂಗಳುಗಳಿಂದ ನಮ್ಮ ಪದಾಧಿಕಾರಿಗಳು ಬ್ಯಾಂಕಿನ ಅಧ್ಯಕ್ಷರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದು, ಬ್ಯಾಂಕಿನ ನಿರ್ದೇಶಕ ಮಂಡಳಿ ನಿರ್ದೇಶರನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ. ಪ್ರೇರಕ ಬ್ಯಾಂಕಿನ ಗ್ರಾಮೀಣ ಬ್ಯಾಂಕ್ ವಿಭಾಗದ ಪ್ರಧಾನ ಪ್ರಬಂಧಕರನ್ನು, ಕಾರ್ಯನಿರ್ವಾಹಕ ನಿರ್ದೇಶಕರನ್ನು ಭೇಟಿಮಾಡಿ ಬೇಡಿಕೆಗಳ ಕುರಿತು ಮಾತುಕತೆಯನ್ನು ನಡೆಸಿದರೂ ಈಡೇರಿಸಿಲ್ಲ.
ಆಡಳಿತ ಮಂಡಳಿ ತನ್ನ ಹಟಮಾರಿ ಧೋರಣೆಯನ್ನು ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು. ಬ್ಯಾಂಕ್‌ನಲ್ಲಿ ನೇರ ನೇಮಕಾತಿ ಮತ್ತು ಬಡ್ತಿ ಹುದ್ದೆಗಳನ್ನು ವೈಜ್ಞಾನಿಕ ಮಾನವ ಶಕ್ತಿ ಆಧಾರದ ಮೇಲೆ ಸೃಷ್ಟಿಸಬೇಕು. ಪ್ರೇರಕ ಬ್ಯಾಂಕ್ ಅಧಿಕಾರಿ, ನೌಕರರಿಗೆ ಸಿಗುವ ಸೌಲಭ್ಯಗಳನ್ನು ಕೆಜಿಬಿ ಬ್ಯಾಂಕ್ ನೌಕರರಿಗೂ ವಿಸ್ತರಿಸಬೇಕು. ರಾಜ್ಯ ವಿಭಾಗೀಯ ಪೀಠದ ಆದೇಶದಂತೆ ಎಲ್ಲ ನೌಕರರಿಗೂ ಕಂಪ್ಯೂಟರ್ ಇನ್‌ಕ್ರಿಮೆಂಟ್ ಜಾರಿಗೊಳಿಸಬೇಕು. ಬ್ಯಾಂಕಿನಲ್ಲಿ ಹೊರಗುತ್ತಿಗೆ ಆಧಾರದ ನೇಮಕಾತಿಗಳನ್ನು ರದ್ದುಗೊಳಿಸಬೇಕು. ಸದ್ಯ ಇರುವ ಎಲ್ಲ ದಿನಗೂಲಿ ನೌಕರರನ್ನು ಖಾಯಂಗೊಳಿಸಬೇಕು. ನೌಕರರು ನಿವೃತ್ತಿ ಹೊಂದಿದ ದಿನವೇ ನಿವೃತ್ತಿ ವೇತನ ಸೇರಿ ಇತರೆ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು
ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಪ್ಪ ಪತ್ತಾರ್, ಪುಟ್ಟರಾಜ್, ಪ್ರಾಣೇಶ್ ಮುತ್ತಾಲಿಕ್, ರಾಜೇಂದ್ರ ಮದಗುಂಟಿ, ಶ್ರೀನಿವಾಸ, ಸಾಗರ್, ಕೃಷ್ಣಾಮೂರ್ತಿ, ಗುತ್ತೇದಾರ್, ಶ್ರೀನಿವಾಸ್, ಶಿವಕುಮಾರ್ ಕೌತಾಳ ಸೇರಿದಂತೆ ಬ್ಯಾಂಕ್‌ನ ನೂರಾರು ನೌಕರರು, ನಿವೃತ್ತಿ ನೌಕರರು ಇದ್ದರು.