ಬಳ್ಳಾರಿ: ನಗರ ವ್ಯಾಪ್ತಿಯಲ್ಲಿ ಸಮಗ್ರವಾಗಿ ಅಂಗವಿಕಲರ ಸಮೀಕ್ಷೆ ನಡೆಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ಬಸವರಾಜು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಳ್ಳಾರಿ ನಗರವು 5 ಲಕ್ಷ ಜನಸಂಖ್ಯೆ ಹೊಂದಿದೆ. ಇದರಲ್ಲಿ ಶೇ.2ರಷ್ಟು ಜನರು ಅಂಗವಿಕಲರಿದ್ದಾರೆ. ನಿಖರ ಮಾಹಿತಿ ತಿಳಿದುಕೊಂಡು ಅವರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅನುಕೂಲವಾಗುತ್ತದೆ ಎಂದರು. ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತೆ ತುಷಾರಮಣಿ ಅವರು ಎಂ.ಆರ್.ಡಬ್ಲೂಗಳಿಗೆ ಸೂಕ್ತ ತರಬೇತಿ ನೀಡಿ ಶೀಘ್ರ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾನಗರ ಪಾಲಿಕೆ ಮತ್ತು ನಗರ ಸಂಸ್ಥೆಗಳು ಅಂಗವಿಕಲರಿಗೆ ಇದುವರೆಗೆ ಒದಗಿಸಿರುವ ಮೂಲಸೌಕರ್ಯ ಕುರಿತು ನೀಡಿರುವ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತೆ ತುಷಾರಮಣಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮಹ್ಮದ್ ಮುನೀರ್ ಅವರು ಈ ವರ್ಷದ ಕ್ರಿಯಾಯೋಜನೆಯಲ್ಲಿ ಅಂಗವಿಕಲ ಸ್ನೇಹಿ ಶೌಚಾಲಯ ಹಾಗೂ ಪಾರ್ಕ್‌ಗಳ ನಿರ್ಮಾಣ, ಬೈಕ್ ಅಲ್ಲದೇ ಮನೆ ಒದಗಿಸುವಿಕೆ ಸೇರಿದಂತೆ ಇನ್ನಿತರ ಸೌಲಭ್ಯ ನೀಡುವುದಕ್ಕೆ ಕ್ರಮ ವಹಿಸಲಾಗುವುದು ಎಂದರು.
ಅಂಗವಿಕಲರು ಬಳ್ಳಾರಿ ನಗರದಲ್ಲಿ ಅತಿ ಹೆಚ್ಚು ಬಳಸುವ 10 ಸ್ಥಳಗಳ ಪಟ್ಟಿ ಮಾಡಿ ಮತ್ತು ತುರ್ತಾಗಿ ಅಲ್ಲಿ ಸೌಲಭ್ಯ ಕಲ್ಪಿಸುವುದಕ್ಕೆ ಮುಂದಾಗಬೇಕು ಎಂದು ಆಯುಕ್ತ ಬಸವರಾಜು ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಹಾಗೂ ಹಾಸ್ಟೆಲ್ಗಳಿಗೆ ರ್‍ಯಾಂಪ್, ಶೌಚಾಲಯ, ವೀಲ್ ಚೇರ್ ಸೇರಿದಂತೆ ಅಂಗವಿಕಲ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಆಯುಕ್ತರು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ಅಂಗವಿಕಲರ ಕುಂದುಕೊರತೆ ಆಲಿಸುವ ನಿಟ್ಟಿನಲ್ಲಿ ಪ್ರತಿ ಇಲಾಖೆಯಲ್ಲಿ ಒಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ಕೆ.ನಿತೀಶ್, ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಉಪ ಆಯುಕ್ತ ಪದ್ಮನಾಭ, ಸಲಹೆಗಾರ ಹಂಪಣ್ಣ, ಉಪ ವಿಭಾಗಾಧಿಕಾರಿಗಳಾದ ಲೋಕೇಶ, ರಮೇಶ ಕೋನರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.