ಬಳ್ಳಾರಿ: ಉದ್ಯೋಗ ಖಾತರಿ ಯೋಜನೆಯಡಿ ರೈತರಿಗೆ ತೋಟಗಾರಿಕೆ ಬೆಳೆ ಬೆಳೆಯಲು ಸಿಗುವ ಸವಲತ್ತು ಕೊಡಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ನುಗ್ಗೆ, ಅಂಜೂರ ಸೇರಿದಂತೆ ವಿವಿಧ ಬೆಳೆ ಬೆಳೆಯಲು 2 ವರ್ಷಗಳ ಕಾಲ ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ರೈತರಿಗೆ ಗರಿಷ್ಠ ಕೂಲಿ ನೀಡಲು ಅವಕಾಶ ಇದೆ. ಇದನ್ನು ಸದ್ಬಳಕೆಮಾಡಿಕೊಂಡು ರೈತರಿಗೆ ನೆರವಾಗಬೇಕು ಎಂದು ತಾಕೀತು ಮಾಡಿದರು.
ಸಭೆ ಆರಂಭದಲ್ಲಿ ಮಾತನಾಡಿದ ಜಿಪಂ ಸಿಇಒ ಕೆ.ನಿತೀಶ್, ಸದ್ಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಗಾಗಿ ಕೆಲಸ ಮಾಡುವವರ ಸಂಖ್ಯೆ ಕಡಮೆ ಆಗಿದೆ. ಕೃಷಿ ಚಟುವಟಿಕೆ ಚುರುಕಾಗಿರುವುದು ಇದಕ್ಕೆ ಕಾರಣ. ಇನ್ನೊಂದೆರಡು ತಿಂಗಳ ಕಾಲ ಇದೇ ಸ್ಥಿತಿ ಇರಲಿದೆ. ಅದಾದ ನಂತರ ಮತ್ತೆ ನಾವು ಖಾತ್ರಿ ಕೆಲಸ ಆರಂಭಿಸಲಿದ್ದೇವೆ. ಈಗಾಗಲೇ ಖಾತ್ರಿ ಯೋಜನೆಯಡಿ ನಿಗದಿತ ಗುರಿಯಲ್ಲಿ ಶೇ.76ರಷ್ಟನ್ನು ಸಾಧನೆ ಮಾಡಲಾಗಿದೆ. ಇನ್ನೂ 4 ತಿಂಗಳು ಬಾಕಿ ಇದೆ. ಇಷ್ಟರಲ್ಲೇ 82 ಲಕ್ಷ ಮಾನವ ದಿನ ಸೃಷ್ಟಿಸುವ ಗುರಿ ಮುಂದೆ ನಾವೀಗಾಗಲೇ 62,69,755 ಮಾವನ ದಿನ ಸೃಷ್ಟಿ ಮಾಡಿದ್ದೇವೆ. ಈ ಮೂಲಕ ಶೇ. 76ರಷ್ಟು ಸಾಧನೆಮಾಡಿ, ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ ಎಂದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಚರ್ಚಿಸುವಾಗ ಪ್ರಧಾನ ಕಾರ್ಯದರ್ಶಿ ಕೆ.ಟಿ. ಅತೀಶ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ತಕ್ಷಣ ಅವನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದರು.
ತಾಂತ್ರಿಕ ಹುದ್ದೆಗಳ ಕೊರತೆ ಕುರಿತು ಸಭೆಯಲ್ಲಿ ಚರ್ಚೆ ಆಯಿತು. ಜಿಲ್ಲೆಯಲ್ಲಿ ಲಕ್ಷಾಂತರ ಜನ ಏಕಕಾಲಕ್ಕೆ ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸಮಾಡುತ್ತಾರೆ. ಹೀಗೆ ಮಾಡುವಾಗ ಅವರ ಹಾಜರಾತಿ ಪಡೆಯಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಮಾಡಬೇಕು. ತಾಂತ್ರಿಕ ಹುದ್ದೆಗಳ ಸಂಖ್ಯೆ ಏರಿಸಬೇಕು ಎಂದು ಕೋರಿದರು. ಇದಕ್ಕೆ ಸಚಿವರು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಅರಣ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಸಹ ಸಿಬ್ಬಂದಿ ಕೊರತೆ ಇರುವ ಕುರಿತು ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಚಿವರ ಗಮನ ಸೆಳೆದರು. ಸಂಸದ ವೈ. ದೇವೇಂದ್ರಪ್ಪ, ಜಿಪಂ ಅಧ್ಯಕ್ಷ ಸಿ. ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷ ದೀನಾ ಮಂಜುನಾಥ, ಜಿಲ್ಲಾಮಟ್ಟದ ಅಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.