Advertisement

ಅಭಿವೃದ್ಧಿ ನೆಪದಲ್ಲಿ ಮರ ನಾಶ ಸಲ್ಲ

04:19 PM Aug 14, 2019 | Team Udayavani |

ಬಳ್ಳಾರಿ: ಮರಗಳ ಮಾರಣಹೋಮ ಮಾಡುವುದರಿಂದ ಪರಿಸರ ಹಾಳಾಗಲಿದೆ ಎಂಬ ಅರಿವು ಎಲ್ಲರಲ್ಲಿದ್ದರೂ ಮರಗಳನ್ನು ಕಡಿಯುವುದು ಸಾಮಾನ್ಯವಾಗಿದೆ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚೆಗೆ ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯುವುದು ಸಾಮಾನ್ಯವಾಗಿದೆ. ಇದು ಇಂದೇ ನಿಲ್ಲಬೇಕು, ಇದರಿಂದ ಅರಣ್ಯ ನಾಶವಾಗುವದರ ಜೊತೆಗೆ ಪರಿಸರ ಹಾಳಾಗಲಿದೆ. ಇದರ ಬಗ್ಗೆ ಎಲ್ಲರಿಗೂ ಅರಿವಿದ್ದರೂ ಮರಗಳ ಮಾರಣ ಹೋಮ ಮಾಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಈ ಕುರಿತು ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳು ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಿದರೂ ನಾನಾ ಕಡೆ ಇನ್ನೂ ಜೀವಂತವಾಗಿದೆ. ಇದು ಇಂದೇ ನಿಲ್ಲಬೇಕು. ಅರಣ್ಯ ಸಂಪತ್ತನ್ನು ಬೆಳೆಸುವುದರ ಜತೆಗೆ ಅದನ್ನು ಉಳಿಸುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ಇದರಿಂದ ಸಕಾಲಕ್ಕೆ ಮಳೆಯಾಗಿ, ನಾಡು ಸಮೃದ್ಧಿಯಾಗಲಿದೆ ಎಂದರು.

ಪ್ರತಿಯೊಬ್ಬರೂ ತಮ್ಮ ಮನೆ ಎದುರು ಅಥವಾ ಆವರಣದಲ್ಲಿ ಮರಗಳನ್ನು ಬೆಳೆಸಲು ಮುಂದಾಗಬೇಕು, ಇದರಿಂದ ವ್ಯಾಪ್ತಿಯ ಪರಿಸರ ಉತ್ತಮವಾಗಿರಲಿದೆ. ತ್ಯಾಜ್ಯ ವಸ್ತುಗಳನ್ನು ನಿಗತ ಸ್ಥಳದಲ್ಲಿ ವಿಲೇವಾರಿ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು. ಎಲ್ಲೆಂದರಲ್ಲೇ ಎಸೆಯುವದರಿಂದ ಪರಿಸರ ಹಾಳಾಗುವದರ ಜೊತೆಗೆ ಸೊಳ್ಳೆಗಳೂ ಉತ್ಪತ್ತಿಯಾಗಿ ನಾನಾ ರೋಗಗಳು ಹರಡಲು ಕಾರಣವಾಗಲಿದೆ ಎಂದು ತಿಳಿಸಿದರು.

ವೀ.ವಿ. ಸಂಘದ ಕಾರ್ಯದರ್ಶಿ ಟಿ.ಕೊಟ್ರಪ್ಪ ಮಾತನಾಡಿ, ಪ್ರತಿಯೊಬ್ಬ ಮಕ್ಕಳೂ ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಕಳೆದು ಹೋದ ಸಮಯ ಮತ್ತೆ ವಾಪಸ್‌ ತರಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಮಯಕ್ಕೆ ಮೊದಲ ಆದ್ಯತೆ ನೀಡಿ ಗುಣಮಟ್ಟದ ಶಿಕ್ಷಣದ ಕಡೆ ಹೆಚ್ಚು ಗಮನಹರಿಸಬೇಕು. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಕಲಿಸಿದ ಗುರುಗಳ, ಪಾಲಕರ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಕೋರಿದರು. ಶಾಲೆ ಆಡಳಿತ ಮಂಡಳಿ ಸದಸ್ಯರು, ಶಾಲಾ ಮುಖ್ಯಸ್ಥರು ಮಾತನಾಡಿದರು.

ಮಹಾನಗರ ಪಾಲಿಕೆ ಸದಸ್ಯ ಎಸ್‌.ಮಲ್ಲನಗೌಡ, ಮೋತ್ಕರ್‌ ಶ್ರೀನಿವಾಸ್‌, ಮುಖ್ಯ ಶಿಕ್ಷಕಿ ಕುಮುದಾ ನಾಯ್ಕ, ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next