ಬಳ್ಳಾರಿ: ದಶಕದ ಹಿಂದೆ ಮೂರು ಸಂಪುಟ ದರ್ಜೆಯ ಸಚಿವ ಸ್ಥಾನ, ಕೆಎಂಎಫ್ ರಾಜ್ಯಾಧ್ಯಕ್ಷ ಸ್ಥಾನ ಪಡೆದಿದ್ದ ಗಣಿನಾಡು ಬಳ್ಳಾರಿ ಜಿಲ್ಲೆಗೆ ಹಾಲಿ ಸಿಎಂ ಯಡಿಯೂರಪ್ಪ ನೇತೃತ್ವದ ನೂತನ ಸರ್ಕಾರದಲ್ಲಿ ಒಂದೂ ಸಚಿವ ಸ್ಥಾನ ಲಭಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿಯಲ್ಲಿ ಅಂದು ಇದ್ದ ರಾಮುಲು, ರೆಡ್ಡಿತ್ರಯರ ಪ್ರಾಬಲ್ಯ ಇಂದು ಕುಸಿದಿರುವುದೇ ಜಿಲ್ಲೆಗೆ ಸಚಿವ ಸ್ಥಾನ ಕೈ ತಪ್ಪಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
Advertisement
ರಾಜ್ಯ ರಾಜಕಾರಣದಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆ ತನ್ನದೇ ಆದ ಪ್ರಾಬಲ್ಯ ಮೆರೆದಿದೆ. ರಾಜ್ಯದಲ್ಲಿ ಮೊದಲ ಬಾರಿಗೆ 2006ರಲ್ಲಿ ರಚನೆಯಾಗಿದ್ದ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಶ್ರೀರಾಮುಲು ಅವರು ಪ್ರವಾಸೋದ್ಯಮ ಸಚಿವರಾಗಿದ್ದರು. ಬಳಿಕ 2008ರ ವಿಧಾನಸಭೆ ಚುನಾವಣೆಯಲ್ಲಿ 110 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿಗೆ ಆರು ಜನ ಪಕ್ಷೇತರ ಶಾಸಕರ ಬೆಂಬಲ ಕೊಡಿಸುವ ಮೂಲಕ ಸರ್ಕಾರ ರಚಿಸುವಲ್ಲಿ ರಾಮುಲು, ರೆಡ್ಡಿ ಸಹೋದರರು ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದರು. ಪರಿಣಾಮ ಆಗ ಬಳ್ಳಾರಿ ಜಿಲ್ಲೆಯ ಕೆಎಂಎಫ್ ರಾಜ್ಯಾಧ್ಯಕ್ಷ ಸ್ಥಾನ ಸೇರಿ, ಮೂರು ಸಂಪುಟ ದರ್ಜೆಯ ಸಚಿವ ಸ್ಥಾನಗಳು ಲಭಿಸಿದ್ದವು.