ಬಳ್ಳಾರಿ: ನಗರದ ರಾಘವ ಕಲಾಮಂದಿರದ ಆಸ್ತಿ ತೆರಿಗೆ ವಸೂಲಿ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು ಕೂಡಲೇ ಅ ಧಿಕಾರಿಗಳು ವಿಳಂಬ ನೀತಿ ಕೈಬಿಟ್ಟು ವಸೂಲಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ನವ ಕರ್ನಾಟಕ ಯುವಶಕ್ತಿ ಸಂಘಟನೆ ಪದಾಧಿಕಾರಿಗಳು ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ರಾಘವ ಕಲಾಮಂದಿರದ ಆಸ್ತಿ ತೆರಿಗೆ ವಂಚನೆ ಕುರಿತು ಈ ಹಿಂದೆ ಮೇ 13ರಂದು ಪಾಲಿಕೆ ಅಧಿ ಕಾರಿಗಳಿಗೆ ದೂರು ನೀಡಿ ಗಮನಸೆಳೆಯಲಾಗಿತ್ತು. ಈ ಕುರಿತು ಅಧಿಕಾರಿಗಳು ಮೇ. 13ರಂದು ನೊಟೀಸ್ ಜಾರಿಗೊಳಿಸಿದ್ದರು. ಆದರೆ ಇಲ್ಲಿವರೆಗೆ ಯಾವುದೇ ಕ್ರಮವಿಲ್ಲದಂತಾಗಿದೆ. ಈ ಕುರಿತು ದೂರು ನೀಡಿ 6 ತಿಂಗಳು ಕಳೆದರೂ ಇಲ್ಲಿವರೆಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದನ್ನು ಗಮನಿಸಿದರೆ ನಾನಾ ಅನುಮಾನಗಳು ವ್ಯಕ್ತವಾಗುತ್ತವೆ.
ಅಧಿಕಾರಿಗಳು ರಾಘವ ಕಲಾಮಂದಿರದ ತೆರಿಗೆ ವಸೂಲಿ ಮಾಡದೆ ವಿನಾಕಾರಣ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇದರ ಹಿಂದೆ ಕಾಣದ ಕೈವಾಡಗಳು ನಡೆಯುತ್ತಿದ್ದು, ಬರುವ ದಿನಗಳಲ್ಲಿ ಎಲ್ಲವೂ ಬಯಲಾಗಲಿವೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೇ ಒಬ್ಬರ ಮೇಲೆ ಇನ್ನೋಬ್ಬರು ಹೆಸರು ಹೇಳಿಕೊಂಡು ದಿನಗಳನ್ನು ಮುಂದೂಡುತ್ತಿದ್ದಾರೆ ಹೊರತು, ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 2002ರಿಂದ 2013ರವರೆಗಿನ ಆಸ್ತಿ ತೆರಿಗೆ ಬಾಕಿ 16,14,838 ರೂ.ಗಳಿದ್ದು ಈ ತೆರಿಗೆಯನ್ನು ಪಾವತಿಸಬೇಕು ಎಂದು ಪಾಲಿಕೆ ಆಯುಕ್ತರು ಮೆ 13ರಂದು ನೋಟಿಸ್ ಜಾರಿಗೊಳಿಸಿದ್ದರೂ ಇಲ್ಲಿವರೆಗೆ ಕ್ರಮವಿಲ್ಲ. ಅ ಧಿಕಾರಿಗಳು ಟ್ರಸ್ಟ್ ನ ಅಧ್ಯಕ್ಷರಿಗೆ ನೋಟಿಸ್ ನೀಡದೆ 22ದಿನಗಳ ಕಾಲ ನೋಟಿಸ್‌ನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ತಪ್ಪಿತಸ್ಥ ಅ ಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಕೂಡಲೇ ಬಾಕಿ ಇರುವ ತೆರಿಗೆ ಹಣವನ್ನು ವಸೂಲಿ ಮಾಡಬೇಕು, ನಿರ್ಲಕ್ಷ್ಯ ವಹಿಸಿದರೇ ಬರುವ ದಿನಗಳಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್, ಮಲ್ಲಿಕಾರ್ಜುನ, ಶಿವಲಿಂಗಸ್ವಾಮಿ, ಮಹೇಶ್ ಕುಮಾರ್, ಸುರೇಶ್, ಮೀರ ಮೊಹಿದ್ದೀನ್, ಜಿಲ್ಲಾಧ್ಯಕ್ಷ ಕೆ. ರಮೇಶ್, ಮಂಜುನಾಥ್, ನಾಗರಾಜ್, ದೇವೇಶ್, ಕುಮಾರಸ್ವಾಮಿ ಸೇರಿದಂತೆ ನೂರಾರು ಕಾರ್ಯಕರ್ತರು ಇತರರಿದ್ದರು.