ಬಳ್ಳಾರಿ: ಜಿಲ್ಲೆಯ ಹೊಸಪೇಟೆಯಿಂದ ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63ರ ನಿರ್ಮಾಣದ ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಳ್ಳದೆ ಸ್ಥಗಿತಗೊಂಡಿದ್ದು, ಗುತ್ತಿಗೆ ಪಡೆದ ಗ್ಯಾಮನ್ ಇಂಡಿಯಾ ಕಂಪನಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ ನೋಟಿಸ್ ನೀಡಿದ್ದು 60 ದಿನಗಳೊಳಗಾಗಿ ಕಾಮಗಾರಿ ಆರಂಭಿಸಲು ಗಡುವು ನೀಡಿದೆ.
Advertisement
ಜಿಲ್ಲೆಯ ಹೊಸಪೇಟೆಯಿಂದ ಬಳ್ಳಾರಿ ಮೂಲಕ ನೆರೆಯ ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63ರ ಅಭಿವೃದ್ಧಿ ಕಾರ್ಯಕ್ಕೆ 2017ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆಗ ಕೇಂದ್ರದ ಸಾರಿಗೆ ಸಚಿವರಾಗಿದ್ದ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಆರಂಭದಲ್ಲಿ ಅತ್ಯಂತ ವೇಗವಾಗಿ ನಡೆದ ಕಾಮಗಾರಿ ಕಳೆದ ಒಂದು ವರ್ಷದಿಂದ ವಿಳಂಬವಾಗಿದೆ.
Related Articles
Advertisement
ಇನ್ನು ಶೇ.70ರಷ್ಟು ಕಾಮಗಾರಿ ಬಾಕಿ ಉಳಿದಿದೆ. ಇದನ್ನೂ ಪೂರ್ಣಗೊಳಿಸಿ ಹೆದ್ದಾರಿಯನ್ನು ನಿರ್ಮಿಸಲು ಇನ್ನು ಎರಡು ವರ್ಷಗಳ ಅವಧಿ ಬೇಕಾಗಲಿದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಥಾನಿಕ ಎಂಜಿನಿಯರ್ ರವಿ.ಕಾಮಗಾರಿ ವೆಚ್ಚ ಹೆಚ್ಚಳ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿರುವ ನೋಟಿಸ್‌ಗೆ ಗ್ಯಾಮನ್ ಇಂಡಿಯಾ ಕಂಪನಿ ಪ್ರತಿಕ್ರಿಯೆ ನೀಡದಿದ್ದರೂ, 60 ದಿನಗಳ ಗಡುವಿನ ಒಳಗೆ ಕಾಮಗಾರಿ ಆರಂಭಿಸಬೇಕು. ಸದ್ಯ ಕಾಮಗಾರಿಯನ್ನು ಆರಂಭಿಸಿದರೆ ಇದೇ ವೆಚ್ಚದಲ್ಲಿ ಇನ್ನೆರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಬಹುದು.
ಒಂದು ವೇಳೆ 60 ದಿನಗಳ ಒಳಗೆ ಕಾಮಗಾರಿ ಆರಂಭಿಸದಿದ್ದಲ್ಲಿ ಪ್ರಾಧಿಕಾರವು ಕಂಪನಿ ವಿರುದ್ಧ ಕ್ರಮ ಕೈಗೊಂಡು ಹೊಸದಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಿದರೆ ಕಾಮಗಾರಿ ವೆಚ್ಚ ಮತ್ತಷ್ಟು ಹೆಚ್ಚಲಿದ್ದು, ಸರ್ಕಾರಕ್ಕೆ ನಷ್ಟವಾಗಲಿದೆ. ಅಲ್ಲದೆ ಅರ್ಧಕ್ಕೆ ಬಿಟ್ಟ ಕಾಮಗಾರಿಗಳನ್ನು ಮುಂದುವರಿಸಲು ಬೇರೆ ಕಂಪನಿಗಳು ಹೆಚ್ಚಿನ ಅನುದಾನ ನಿರೀಕ್ಷಿಸುತ್ತವೆ. ಹಾಗಾಗಿ ಗ್ಯಾಮನ್ ಇಂಡಿಯಾ ಕಂಪನಿಯವರೇ ಕಾಮಗಾರಿ ಆರಂಭಿಸುವ ಸಾಧ್ಯತೆಯಿದೆ. ಈ ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ ಬಳ್ಳಾರಿಯಿಂದ ಹೊಸಪೇಟೆಗೆ 2 ಗಂಟೆ ಬದಲು 45 ನಿಮಿಷಗಳಲ್ಲಿ ಸಂಚರಿಸಬಹುದು. ಆಗ ದ್ವಿಚಕ್ರ ವಾಹನಗಳಲ್ಲೂ ಹೊಸಪೇಟೆಗೆ ತೆರಳಿ ಐತಿಹಾಸಿಕ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಬಹುದು ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿತ್ತು. ಆದರೆ ಎರಡು ವರ್ಷಗಳಾದರೂ ಕಾಮಗಾರಿ ಪೂರ್ಣಗೊಳ್ಳದೆ ಬಳ್ಳಾರಿ-ಹೊಸಪೇಟೆ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗ ನೋಟಿಸ್ ನೀಡಿದ ಬಳಿಕ ಕಾಮಗಾರಿ ಮತ್ತೆ ಆರಂಭವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.