Advertisement

ವೈವಿಧ್ಯತೆಯಲ್ಲಿ ಏಕತೆ ಕಾಪಾಡುವುದು ಕಷ್ಟ

01:13 PM Aug 18, 2019 | Naveen |

ಬಳ್ಳಾರಿ: ಬಹುತ್ವದ ಭಾರತ ದೇಶದಲ್ಲಿ ಇಂದು ವೈವಿಧ್ಯತೆಯಲ್ಲಿ ಏಕತೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತಿದೆ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಹಮತ ವೇದಿಕೆ ವತಿಯಿಂದ ಶನಿವಾರ ಸಂಜೆ ಏರ್ಪಡಿಸಲಾಗಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಧರ್ಮಗಳಲ್ಲೂ ಕೊಳ್ಳುಬಾಕ ಸಂಸ್ಕೃತಿ ಕಾಲಿಟ್ಟಿದೆ. ಶಿಬಿರಗಳ ಮೂಲಕ ಆತ್ಮಸಾಕ್ಷಾತ್ಕಾರ ಸಾಧ್ಯವಿಲ್ಲ. ಅಂತರಂಗ ಶುದ್ಧಿಯಾಗದೆ ಆತ್ಮಸಾಕ್ಷಾತ್ಕಾರ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಧರ್ಮ ಅಂತರಂಗದ ಕೃಷಿಯಾಗಬೇಕೇ ಹೊರತು, ಬಾಹ್ಯವಾಗಿ ತೋರುವ ಆಡಂಬರವಾಗಬಾರದು ಎಂದ ಸ್ವಾಮೀಜಿ, ಶರಣರ ದೃಷ್ಟಿಯಲ್ಲಿ ಸ್ವರ್ಗ-ನರಕಗಳೂ ಬೇರೆ ಎಲ್ಲಿಯೂ ಇಲ್ಲ. ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಯಾವ ಧರ್ಮಗಳೂ ಮೇಲೂ ಅಲ್ಲ. ಕೀಳು ಅಲ್ಲ. ಶ್ರೇಷ್ಠತೆ-ಕನಿಷ್ಠತೆ ಬರುವಂಥದ್ದು. ಧರ್ಮದ ಅನುಯಾಯಿಗಳ ನಡುವಳಿಕೆಯಿಂದ ಮತ್ತೆ ಕಲ್ಯಾಣದಲ್ಲಿ ಎಲ್ಲ ಧರ್ಮೀಯರೂ ಇದ್ದು, ಇದು ನಮ್ಮದು ಎಂದು ಭಾಗವಹಿಸುತ್ತಿದ್ದಾರೆ. ಇಂಥ ಸೌಹಾರ್ದತೆ ಎಲ್ಲ ಕಾಲಕ್ಕೂ ಇರಬೇಕೇ ಹೊರತು ನಟನೆಯಾಗಬಾರದು. ಮಾನವೀಯತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಧರ್ಮೀಯರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶರಣರ ಮಹತ್ವವನ್ನು ನಮ್ಮ ಬದುಕಿನಲ್ಲೂ ಕೊಟ್ಟರೆ ತಾನಾಗಿಯೇ ಅಭಿವೃದ್ಧಿಯಾಗುತ್ತೇವೆ. ಅಜ್ಞಾನ, ಜಾತೀಯತೆ, ಮೌಡ್ಯ, ಭ್ರಷ್ಟಾಚಾರ, ಅತಿವೃಷ್ಟಿ, ಅನಾವೃಷ್ಟಿಯಂಥ ಸಮಸ್ಯೆಗಳನ್ನು ವಚನಗಳ ಅರಿವಿನಲ್ಲಿ ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕೋರಿದರು.

ಸಮನ್ವಯ ಸಾರುವ ಕೆಲಸ: ಅಧ್ಯಕ್ಷತೆ ವಹಿಸಿದ್ದ ಸಂಡೂರಿನ ವಿರಕ್ತ ಮಠದ ಪ್ರಭುಸ್ವಾಮಿಗಳು ಮಾತನಾಡಿ, ಮತ್ತೆ ಕಲ್ಯಾಣದ್ದು ಸರ್ವ ಧರ್ಮ ಸಮನ್ವಯ ಸಾರುವ ಕೆಲಸವಾಗಿದೆ ಎಂದರು. ಪ್ರೊ. ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ಯುವ ಜನತೆಯೊಂದಿಗೆ ಮಾತುಕತೆ ಕಡಿಮೆಯಾಗಿರುವುದರಿಂದ ಯುವಕರು ದಿಕ್ಕುತಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಕಲ್ಯಾಣ ಅರಿವಿನ ಆಂದೋಲನವಾಗಿದೆ. ಕುಟುಂಬದ ಚರಿತ್ರೆಯೇ ಗೊತ್ತಿಲ್ಲದಿದ್ದಾಗ ಇತಿಹಾಸದ ಬಗ್ಗೆ ಸುಳ್ಳನ್ನು ನಂಬಿಸಿ ಭ್ರಮೆಯೊಳಗೆ ಬದುಕುವಂತಾಗಿದೆ. ಚಾತುರ್ವಣಗಳು ಇನ್ನಿಲ್ಲದ ಅಸಮಾನತೆಗಳನ್ನು ಸೃಷ್ಟಿಸಿದ್ದವು. ಇವುಗಳನ್ನು ವಿರೋಧಿಸಿಯೇ ಬೌದ್ಧ, ಜೈನ ಮುಂತಾದ ಧರ್ಮಗಳು ಹುಟ್ಟಿಕೊಂಡವು. ಬಸವ ಧರ್ಮ ಪ್ರಜಾಸತ್ತಾತ್ಮಕವಾದುದು. ಶರಣ ಚಳುವಳಿಯ ಉಪ ಉತ್ಪನ್ನವಾಗಿ ಹುಟ್ಟಿಕೊಂಡದ್ದೇ ವಚನ ಸಾಹಿತ್ಯ. ಸಾಂಸ್ಕೃತಿಕ, ಧಾರ್ಮಿಕ ಹೊಸಹತುವಿನ ಹಿಡಿತದಿಂದ ಇಂದಿಗೂ ಬಿಡುಗಡೆ ಸಾಧ್ಯವಾಗುತ್ತಿಲ್ಲ. ಬಸವಾದಿ ಶರಣರ ಹೋರಾಟಕ್ಕೆ ವಚನಗಳೇ ಪ್ರಮಾಣ. ವೈದಿಕರ ದಾನದಲ್ಲಿ ಮೇಲು-ಕೀಳರಿಮೆ ಇದ್ದರೆ, ಶರಣ ದಾಸೋಹದಲ್ಲಿ ಸಮಾನತೆಯಿದೆ ಎಂದು ಪ್ರತಿಪಾದಿಸಿದರು.

ಕವಯಿತ್ರಿ ಜಯಶ್ರೀ ಸುಕಾಲೆ, ವಚನಕಾರರ ಚಿಂತನೆ ಕುರಿತು ಉಪನ್ಯಾಸ ನೀಡಿದರು. ವೇದಿಕೆಯ ಎಸ್‌.ಪನ್ನಾರಾಜ್‌ ಸ್ವಾಗತಿಸಿದರು. ಕೆ.ಬಿ.ಸಿದ್ದಲಿಂಗಪ್ಪ ನಿರ್ವಹಿಸಿದರು. ಎಸ್‌.ಟಿ.ರುದ್ರಪ್ಪ ವಂದಿಸಿದರು. ಇದಕ್ಕೂ ಮುನ್ನ ನಗರದ ಮುನಿಸಿಪಲ್ ಕಾಲೇಜು ಮೈದಾನದಿಂದ ಸಾಮರಸ್ಯ ನಡಿಗೆ ನಡೆಯಿತು. ನಡಿಗೆಯಲ್ಲಿ ವಿವಿಧ ಧರ್ಮಗಳ ಮುಖಂಡರು, ಜನಪ್ರತಿನಿಧಿಗಳು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದು, ವಿವಿಧ ಕಲಾತಂಡಗಳು ಶರಣರ ಸ್ತಬ್ಧ ಚಿತ್ರಗಳನ್ನು ಮೆರವಣಿಗೆಗೆ ಮೆರುಗು ನೀಡಿದವು. ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಧರ್ಮ, ಜಾತಿಗಳ ಮುಖಂಡರು ಉಪಸ್ಥಿತರಿದ್ದು, ಕೊನೆಯಲ್ಲಿ ನೆರೆ ಸಂತ್ರಸ್ತರಿಗೆ ಸಾರ್ವಜನಿಕರಿಂದ ಸಂಗ್ರಹವಾಗಿದ್ದ 17500 ರೂ.ಗಳನ್ನು ದೇಣಿಗೆ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next